ಬೆಂಗಳೂರು: ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ 80,494 ಹೆಕ್ಟೇರ್ ಪ್ರದೇಶಕ್ಕೆ ವಾರ್ಷಿಕ 12.24 ಟಿಎಂಸಿ ನೀರನ್ನು ಉಪಯೋಗಿಸುವ ಉದ್ದೇಶದಿಂದ ಜಾರಿಯಾಗಿರುವ ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಸರಕಾರದ ಗಮನಕ್ಕೆ ತರದೇ ಮತ್ತು ಸರಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿಯಾಗಿ 702.12 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಿರುವುದನ್ನು ಇದೀಗ “the-file.in’ ಹೊರಗೆಡುತ್ತಿದೆ.
ತುಂಗಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ‘the-file.in’ ಆರ್ ಟಿಐ ಅಡಿಯಲ್ಲಿ ಸಮಗ್ರ ದಾಖಲಾತಿಗಳನ್ನು ಪಡೆದುಕೊಂಡಿದೆ. ಈ ದಾಖಲೆಗಳ ಪ್ರಕಾರ ತುಂಗಾ ಮೇಲ್ದಂಡೆ ಯೋಜನೆಗೆ ಹೆಚ್ಚುವರಿಯಾಗಿ 702.12 ಕೋಟಿ ರೂ. ವೆಚ್ಚ ಮಾಡಿರುವ ಕರ್ನಾಟಕ ನೀರಾವರಿ ನಿಗಮವು ಬಹುದೊಡ್ಡ ಕರ್ತವ್ಯ ಲೋಪ ಎಸಗಿರುವುದು ಕಂಡುಬಂದಿದೆ.
ನಾರಾಯಣಪುರ ಎಡದಂಡೆ ಕಾಲುವೆಗಳ ಆಧುನೀಕರಣ, ವಿಸ್ತರಣೆಗೆ ನಿಯಮ ಉಲ್ಲಂಘಿಸಿ 465 ಕೋಟಿ ರೂ. ಮೊತ್ತದ ಕಾಮಗಾರಿಗೆ ಗುತ್ತಿಗೆ ನೀಡಿರುವ ಬೆನ್ನಲ್ಲೇ ತುಂಗಾ ಮೇಲ್ದಂಡ ಯೋಜನೆಗೆ 702.12 ಕೋಟಿ ರೂ.ಗಳನ್ನು ಸರಕಾರದ ಅನುಮೋದನೆಯಿಲ್ಲದೆಯೇ ಹೆಚ್ಚುವರಿಯಾಗಿ ವೆಚ್ಚ ಮಾಡಿರುವುದು ಮುನ್ನೆಲೆಗೆ ಬಂದಿದೆ.
ಪ್ರಸ್ತಾಪಿತ ಯೋಜನೆಗೆ ಇಲ್ಲಿಯವರೆಗೆ 3,264.00 ಕೋಟಿ ರೂ.ಗಳ ವೆಚ್ಚ ಭರಿಸಲಾಗಿದೆ ಎಂದು ತಿಳಿಸಲಾಗಿದೆ. ಅದರಂತೆ ಅನುಮೋದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಭರಿಸಿರುವ 702.12 ಕೋಟಿ ರೂ.ಗಳಿಗೆ Karnataka government transaction of business rules 1977ರ 17ರಂತೆ ಸಕ್ಷಮ ಪ್ರಾಧಿಕಾರ (ಸಚಿವ ಸಂಪುಟ)ದ ಅನುಮೋದನೆ ಇಲ್ಲದೆಯೇ ವೆಚ್ಚ ಮಾಡಿರುವ ಕುರಿತು ಸ್ಪಷ್ಟಿಕರಣ ನೀಡಬೇಕು. ಲೋಕೋಪಯೋಗಿ ಇಲಾಖೆಯ 191ರ ಅಂದಾಜಿನಲ್ಲಿ ಶೇ.5ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದ್ದಲ್ಲಿ ಅಂದಾಜನ್ನು ಪರಿಷ್ಕೃತಗೊಳಿಸಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯಬೇಕಾಗಿರುತ್ತದೆ. ಅದರಂತೆ ಕ್ರಮ ಕೈಗೊಳ್ಳದೇ ಇರುವ ಕುರಿತು ಮಾಹಿತಿ ಒದಗಿಸಬೇಕು. ಎಂದು 2022ರ ಜನವರಿ 29ರಂದೇ ಜಲಸಂಪನ್ಮೂಲ ಇಲಾಖೆಯು ಕರ್ನಾಟಕ ನೀರಾವರಿ ನಿಗಮಕ್ಕೆ ಪತ್ರದಲ್ಲಿ ನಿರ್ದೇಶಿಸಿತ್ತು.
ಅದೇ ರೀತಿ ಒಟ್ಟಾರೆಯಾಗಿ ಸರಕಾರದ ಅನುಮೋದನೆ ಪಡೆಯದೇ/ಸರಕಾರದ ಗಮನಕ್ಕೆ ತರದೇ ಹೆಚ್ಚುವರಿಯಾಗಿ 702.12 ಕೋಟಿ ರೂ.ಗಳ ವೆಚ್ಚ ಮಾಡಿರುವುದು ನಿಗಮದ ಕರ್ತವ್ಯ ಲೋಪವಾಗಿರುತ್ತದೆ ಎಂದು ಜಲಸಂಪನ್ಮೂಲ ಇಲಾಖೆಯ ಶಾಖಾಧಿಕಾರಿಯು 2022ರ ಜೂನ್ 16ರಂದೇ ಲಿಖಿತವಾಗಿ ದಾಖಲಿಸಿರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ. ಜಲಸಂಪನ್ಮೂಲ ಇಲಾಖೆಯ ಶಾಖಾಧಿಕಾರಿಯು ನಿಗಮದ ಕರ್ತವ್ಯಲೋಪವನ್ನು ಬಹಿರಂಗಪಡಿಸಿದ ನಂತರ ಆರ್ಥಿಕ ಇಲಾಖೆಯೂ ಸಹ ಬಲವಾಗಿ ಆಕ್ಷೇಪಿಸಲಿಲ್ಲ.