ಮೋದಿ ಸರ್‌ನೇಮ್ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ (ಮೇ 2) ಮುಂದೂಡಿದೆ.
ರಾಹುಲ್ ಪರ ವಕೀಲರ ವಾದಕ್ಕೆ ಪ್ರತ್ಯುತ್ತರ ಸಲ್ಲಿಸಲು ದೂರುದಾರರ ವಕೀಲರಿಗೆ ಮಂಗಳವಾರದವರೆಗೆ ನ್ಯಾಯಾಲಯದ ಸಮಯ ನೀಡಿದೆ. ಮಂಗಳವಾರ ಮುಂದಿನ ವಿಚಾರಣೆ ನಡೆಸಿ, ಅಂದೇ ತೀರ್ಪು ನೀಡುವುದಾಗಿ ನ್ಯಾಯಮೂರ್ತಿಗಳು ಹೇಳಿದ್ದಾರೆ.
ಶನಿವಾರ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಪ್ರಚಾಚಕ್ ರಾಹುಲ್ ಗಾಂಧಿ ಅವರು ಶಿಕ್ಷೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದಾರೆ. “ರಾಹುಲ್ ಗಾಂಧಿ ಚುನಾಯಿತ ಜನಪ್ರತಿನಿಧಿಯಾಗಿರುವ ಕಾರಣ ಹೇಳಿಕೆಗಳನ್ನು ನೀಡುವಾಗ ಜಾಗರೂಕತೆ ವಹಿಸಬೇಕು. ಜನಪ್ರತಿನಿಧಿಗಳು ಜನರ ಕಡೆಗೆ ಹೆಚ್ಚಿನ ಕರ್ತವ್ಯ ಹೊಂದಿರುತ್ತಾರೆ. ಹೀಗಾಗಿ ಮಿತಿ ಅರಿತು ಹೇಳಿಕೆಗಳನ್ನು ನೀಡಬೇಕು” ಎಂದು ಹೇಮಂತ್ ಪ್ರಚಾಚಕ್ ಹೇಳಿದ್ದಾರೆ.
ರಾಹುಲ್ ಪರ ಅಭಿಷೇಕ್ ಸಿಂಘ್ವಿ ವಾದ
ಅದಕ್ಕೆ ಉತ್ತರವಾಗಿ ರಾಹುಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, “ನೈತಿಕ ನೆಲೆಗಟ್ಟಿನಲ್ಲಿ ಅಪರಾಧ ಎನಿಸುವಂತಹ ಕ್ರೂರ ಕೃತ್ಯವನ್ನು ಅರ್ಜಿದಾರರು ಮಾಡಿಲ್ಲ” ಎಂದು ವಾದಿಸಿದ್ದಾರೆ.
“ನನ್ನ ಪ್ರಕರಣ ನೈತಿಕ ನೆಲೆಗಟ್ಟಿನಲ್ಲಿ ಇಡುವಂತಹದು ಅಥವಾ ಗಂಭೀರವಾದುದು ಎಂದು ಯಾರೂ ಹೇಳುವಂತಿಲ್ಲ. ಪ್ರಕರಣದಲ್ಲಿ ಜಾಮೀನು ನೀಡಬಹುದು ಮತ್ತು ಸಮಾಜದ ವಿರುದ್ಧ ಅಪರಾಧವಾಗಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ತಡೆಯಾಜ್ಞೆ ನೀಡಲು ಆರು ಪ್ರಮುಖ ಕಾರಣಗಳನ್ನು ಅವರ ವಕೀಲರು ನ್ಯಾಯಾಲಯದ ಮುಂದಿಟ್ಟಿದ್ದರು. “ವಿವಿಧ ತೀರ್ಪುಗಳಲ್ಲಿ ಹೇಳಿರುವಂತೆ ಇದು ಗಂಭೀರ ಅಪರಾಧವಲ್ಲ ಮತ್ತು ನೈತಿಕ ನೆಲೆಗಟ್ಟಿನಲ್ಲಿ ನೋಡುವ ಅಪರಾಧವೂ ಅಲ್ಲ. ಸೂರತ್ ಸೆಷನ್ಸ್ ನ್ಯಾಯಾಲಯ ರಾಹುಲ್ ಗಾಂಧಿ ಅವರ ತಡೆಯಾಜ್ಞೆ ಕೋರಿದ ಅರ್ಜಿ ತಿರಸ್ಕರಿಸುವಾಗ ಪ್ರಕರಣವನ್ನು ಕೊಲೆ, ಅಪಹರಣ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳಂತೆ ನೋಡಲಾಗಿದೆ” ಎಂದು ಸಿಂಘ್ವಿ ಹೇಳಿದ್ದಾರೆ.
ರಾಹುಲ್ ಗಾಂಧಿಯವರಿಗೆ ಮಾನನಷ್ಟ ಮೊಕದ್ದಮೆಯಲ್ಲಿ ತಡೆಯಾಜ್ಞೆ ನೀಡದೆ ನ್ಯಾಯಾಲಯವು ದಂಡ ಸಂಹಿತೆಯ ಸೆಕ್ಷನ್ 389ರ ವ್ಯಾಪ್ತಿಯನ್ನು ಮರುಬರೆಯುತ್ತಿದೆ. ಇಂತಹ ದೂರುಗಳಿಗೆ ಕಾನೂನು ಅವಕಾಶ ಕೊಡುವುದಿಲ್ಲ. ಭಾಷಣದಲ್ಲಿ ಉಲ್ಲೇಖಿಸಿದವರನ್ನು ಹೊರತುಪಡಿಸಿ 13 ಕೋಟಿ ಮಂದಿಯಲ್ಲಿ (ಮೋದಿ ಸರ್‌ನೇಮ್ ಇರುವ) ಯಾರೊಬ್ಬರೂ ಬೇಕಾದರೂ ಬಂದು ದೂರು ಸಲ್ಲಿಸಲು ಸಾಧ್ಯವಿಲ್ಲ. ಇದು ಪೂರ್ಣೇಶ್ ಮೋದಿ ಅವರ ಪ್ರಕರಣ ಅಲ್ಲ” ಎಂದು ಅವರು ವಾದಿಸಿದರು.
ಎರಡನೆಯದಾಗಿ, ಮೂಲ ದೂರಿನ ವ್ಯಾಪ್ತಿಯನ್ನೂ ವಕೀಲರು ಪ್ರಶ್ನಿಸಿದ್ದಾರೆ. “ಕರ್ನಾಟಕದ ಕೋಲಾರದಲ್ಲಿ ಮಾಡಲಾದ ಹೇಳಿಕೆಗೆ ದೂರುದಾರ ಪೂರ್ಣೇಶ್ ಮೋದಿ ಗುಜರಾತ್‌ನಲ್ಲಿ ಗುರುತಿಸಬಹುದಾದ ವರ್ಗವನ್ನು ಮುಂದಿಟ್ಟು ದೂರು ಸಲ್ಲಿಸಿದ್ದಾರೆ. ರಾಹುಲ್ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ನೀರವ್ ಮೋದಿ, ಮೆಹುಲ್ ಚೋಕ್ಸಿ ಅಥವಾ ವಿಜಯ ಮಲ್ಯ ದೂರುದಾರರಲ್ಲ. ಮಾನಹಾನಿ ದೂರು ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳಿಗೆ ಅನ್ವಯಿಸುತ್ತದೆ. ಮಾನಹಾನಿ ಪ್ರಕರಣ ಒಂದು ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಪ್ರಕರಣದಲ್ಲಿ ಮಾನಹಾನಿ ಕಾನೂನನ್ನೇ ತಮಾಷೆ ಮಾಡಲಾಗಿದೆ, ಕಾನೂನಿನ ಜೊತೆಗೆ ಆಟವಾಡಲಾಗಿದೆ” ಎಂದು ಸಿಂಘ್ವಿ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಮೂರನೆಯದಾಗಿ ಸಿಂಘ್ವಿ ಅವರು ವಿಚಾರಣಾ ನ್ಯಾಯಾಲಯಗಳು ಉಲ್ಲಂಘಿಸಿರುವ ಹಲವು ಅಂಶಗಳನ್ನು ಮುಂದಿಟ್ಟಿದ್ದಾರೆ. “ಸೂರತ್ ನ್ಯಾಯಾಲಯ 10 ನಿಮಿಷಗಳ ಕಾಲ ವಿಚಾರಣೆ ಮಾಡಿ ರಾಹುಲ್ ಗಾಂಧಿ ಅವರ ಗರಿಷ್ಠ ಶಿಕ್ಷೆಯನ್ನು ಎತ್ತಿಹಿಡಿದಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ 2019 ಮೇಯಲ್ಲಿ ಸಮನ್ಸ್ ಕಳುಹಿಸುವಾಗ ಶಿಕ್ಷೆ ನೀಡುವಂತಹ ಸಾಕ್ಷ್ಯವನ್ನೇ ಹೊಂದಿರಲಿಲ್ಲ” ಎನ್ನುವುದನ್ನೂ ಸಿಂಘ್ವಿ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.
ಏಪ್ರಿಲ್ 26ರಂದು ನ್ಯಾಯಮೂರ್ತಿ ಗೀತಾ ಗೋಪಿ ಪ್ರಕರಣದ ವಿಚಾರಣೆಗೆ ನಿರಾಕರಿಸಿದ್ದಾರೆ ಎಂದು ರಾಹುಲ್‌ರ ವಕೀಲ ಪಿಎಸ್ ಚಂಪನೆರಿ ತಿಳಿಸಿದ್ದರು.
ಶಿಕ್ಷೆ ಎತ್ತಿಹಿಡಿದ ಕೆಳ ಹಂತದ ನ್ಯಾಯಾಲಯಗಳು
ಮಾನಹಾನಿ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಧಿಸಿರುವ ಎರಡು ವರ್ಷ ಜೈಲು ಶಿಕ್ಷೆ ತಡೆಗೆ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 20ರಂದು ಸೂರತ್ ನ್ಯಾಯಾಲಯ ತಿರಸ್ಕರಿಸಿತ್ತು. ಮೋದಿ ಸರ್‌ನೇಮ್ ಟೀಕೆಗೆ ಸಂಬಂಧಿಸಿ 2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಾರ್ಚ್ 23ರಂದು ತೀರ್ಪು ನೀಡಿತ್ತು.
ಈ ಶಿಕ್ಷೆಯ ತೀರ್ಪಿಗೆ ತಡೆ ನೀಡುವಂತೆ ಮನವಿ ಮಾಡಿ ರಾಹುಲ್ ಗಾಂಧಿ ಅವರು ಏಪ್ರಿಲ್ 3ರಂದು ಸೆಷನ್ಸ್ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ತಡೆ ಕೋರಿದ ಅರ್ಜಿಯನ್ನು ಗುಜರಾತ್‌ನ ಸೂರತ್ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು.
ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟಗೊಂಡ ಮಾರನೇ ದಿನ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಅನೇಕ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಅಲ್ಲದೆ ರಾಹುಲ್ ಅವರ ಅನರ್ಹತೆ ವಿರೋಧಿಸಿ ದೇಶದ ಅನೇಕ ಕಡೆ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು.
ಏನಿದು ಪ್ರಕರಣ?
2019ರ ಲೋಕಸಭೆ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ಭಾಷಣ ಮಾಡಿ ‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ಪ್ರಶ್ನಿಸಿದ್ದರು. ಅದನ್ನು ಪ್ರಶ್ನಿಸಿ ಸೂರತ್ (ಪಶ್ಚಿಮ) ಕ್ಷೇತ್ರದ ಶಾಸಕ ಪೂರ್ಣೇಶ್ ಮೋದಿ ಅವರು ಸೂರತ್ ನ್ಯಾಯಾಲಯ ಮೂಲಕ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.