ಉಡುಪಿ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆ ಎಂದು ಹೇಳಿರುವುದು ಸರಿಯಲ್ಲ. ಕಾಂಗ್ರೆಸ್ನವರು ಪ್ರಧಾನಿ ಮೋದಿಯನ್ನು ಪದೇ ಪದೇ ಕೆಟ್ಟದಾಗಿ ಬಿಂಬಿಸುವ ಕಾರಣದಿಂದ ಬೇಸರಗೊಂಡು ಯತ್ನಾಳ್ ಇಂತಹ ಹೇಳಿಕೆ ನೀಡಿರಬಹುದು. ಆದರೆ ಈ ರೀತಿಯ ಭಾಷೆಯನ್ನು ಬಳಕೆ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ. ಯತ್ನಾಳ್ ಜೊತೆ ಬಿಜೆಪಿ ನಾಯಕರು ಮಾತನಾಡುತ್ತಾರೆ ಮತ್ತು ಮುಂದೆ ಈ ರೀತಿಯ ಹೇಳಿಕೆ ನೀಡದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸೋಲಿನ ಭೀತಿಯಲ್ಲಿ ಬಿಜೆಪಿ ಬಗ್ಗೆ ಆಪಾದನೆಗಳು ಮತ್ತು ಪ್ರಧಾನಿ ಬಗ್ಗೆ ಟೀಕೆಗಳನ್ನು ಮಾಡುತ್ತಿದೆ. ಮೋದಿಯನ್ನು ವಿಷದ ಹಾವಿಗೆ ಹೋಲಿಕೆ ಮಾಡಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಎಲ್ಲರಿಗೂ ನೋವು ತಂದಿದೆ. ಇದು ಕೇವಲ ಖರ್ಗೆ ಅವರ ಹೇಳಿಕೆ ಯಲ್ಲ. ಇದು ಕಾಂಗ್ರೆಸ್ ಮಾತು ಮತ್ತು ಮಾನಸಿಕತೆಯಾಗಿದೆ. ಪ್ರಧಾನಿ ಕುರ್ಚಿ ಕಳೆದುಕೊಂಡು ವಿಲವಿಲನೇ ಒದ್ದಾಡುತ್ತಿರುವ ಕಾಂಗ್ರೆಸ್ ಈ ರೀತಿ ಅಸಭ್ಯವಾಗಿ ಮತ್ತು ಅಸಹ್ಯವಾಗಿ ಮಾತನಾಡುತ್ತಿದೆ ಎಂದರು.
ಬೈಂದೂರು ಶಾಸಕ ಸುಕುಮಾರ್ ಶಟ್ಟಿ ಬಜೆಪಿ ಪ್ರಚಾರ ಮಾಡುವಂತೆ ಯಡಿಯೂರಪ್ಪ ಸಹಿತ ಎಲ್ಲ ನಾಯಕರು ಅವರೊಂದಿಗೆ ಮಾತನಾಡಿದ್ದಾರೆ. ಆದರೂ ಅವರಿಗೆ ಬೇಸರ ಇದೆ. ಆದರೆ ಅವರು ಟಿಕೆಟ್ ಸಂಬಂಧ ಹಿರಿಯರ ನಿರ್ಧಾರವನ್ನು ಒಪ್ಪಬೇಕು. ಅವರನ್ನು ಮನವೊಲಿಸುವ ಕರ್ಯ ಮಾಡುತ್ತೇವೆ. ಸುಕುಮಾರ್ ಶಟ್ಟಿ ಬೇರೆ ಪಕ್ಷಕ್ಕೆ ಸೇರಿಲ್ಲ ಮತ್ತು ಬೇರೆ ಪಕ್ಷಕೆ ಕೆಲಸ ಮಾಡುತ್ತಿಲ್ಲ. ಮನೆಯಲ್ಲೇ ಕುಳಿತು ನಮ್ಮ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರನ್ನು ಹೊರಗಡೆ ತರುವ ಕಾರ್ಯ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಪೂರೈಕೆಯಲ್ಲಿ ವಿಳಂಬ ಆಗಿಲ್ಲ. ಕಾಲಕಾಲಕ್ಕೆ ಬೇಕಾದ ಸೀಮೆಎಣ್ಣೆಯನ್ನು ಬಿಡುಗಡೆ ಮಾಡಿದ್ದೇವೆ. ಕಳೆದ 10 ತಿಂಗಳ ಅವಧಿಯಲ್ಲಿ ಮೂರು ಬಾರಿ ಸೀಮೆಎಣ್ಣೆ ಬಿಡುಗಡೆ ಮಾಡಿದ್ದೇವೆ. ಸೀಮೆಎಣ್ಣೆ ಕೇವಲ ಮೀನುಗಾರರಿಗೆ ಮಾತ್ರ ಇಂದು ಬಳಕೆಯಾಗುತ್ತಿದೆ. ಆದುದರಿಂದ ಇಲಾಖೆ ಕಾಲಕಾಲಕ್ಕೆ ಹಂತಹಂತವಾಗಿ ಮೀನುಗಾರರಿಗೆ ಸೀಮೆಎಣ್ಣೆ ನೀಡಲು ನಿರ್ಧರಿಸಿದೆ ಎಂದು ಅವರು ಹೇಳಿದ್ದರು.
ಕಾಂಗ್ರೆಸ್ ಮುಖಂಡ ಪರಮೇಶ್ವರ ಅವರ ತಲೆಗೆ ಕಲ್ಲೆಸೆದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತ ಕಾಂಗ್ರೆಸ್ ಪಕ್ಷದ ವ್ಯಕ್ತಿ ಎಂಬುದು ಗೊತ್ತಾಗಿದೆ. ಇದರ ಬಗ್ಗೆ ಪೂರ್ಣ ತನಿಖೆ ಆಗಬೇಕು. ಸೋಲುವ ಭೀತಿಯಲ್ಲಿರುವ ಕಾಂಗ್ರೆಸ್ ಬೇರೆ ಬೇರೆ ರೀತಿಯಲ್ಲಿ ಷಡ್ಯಂತರ ಮಾಡುತ್ತಿದೆ. ಅದರ ಒಂದು ಭಾಗ ಈ ಕಲ್ಲೆಸೆತ. ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಮತ್ತು ಆರೋಪಿಗೆ ಶೀಘ್ರ ಶಿಕ್ಷೆ ಆಗಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷದ ವಾರಂಟಿ ಮುಗಿದು ಹೋಗಿದೆ. ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ವಾರಂಟಿಯೇ ಇಲ್ಲದ ಕಾಂಗ್ರೆಸ್ನ ಗ್ಯಾರಂಟಿ ಕಾರ್ಡ್ಗಳನ್ನು ಹೇಗೆ ನಂಬುದು. ಕರ್ನಾಟಕದ ಗ್ಯಾರಂಟಿ ಕಾರ್ಡ್ ಅನುಷ್ಠಾನಗೊಳಿಸಲು ಒಂದೂ ವರೆ ಲಕ್ಷ ಕೋಟಿ ರೂ. ಹಣ ಬೇಕು. ಅಷ್ಟು ಹಣ ಇವರು ಎಲ್ಲಿಂದ ತರುತ್ತಾರೆ. ಇದು ಚುನಾವಣೆಗಾಗಿ ಮಾಡಿರುವ ಸುಳ್ಳು ಭರವಸೆಗಳು ಎಂದು ಅವರು ಟೀಕಿಸಿದರು. ನಿರುದ್ಯೋಗ ಸಮಸ್ಯೆಗೆ ಪದವೀಧರ ಸಂಖ್ಯೆ ಹೆಚ್ಚುತ್ತಿರುವುದೇ ಕಾರಣ ಎಂಬ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಹೆಚ್ಚುತ್ತಿರುವ ಪದವೀಧರರಿಗೆ ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ. ಸರಕಾರಿ ಉದ್ಯೋಗದ ಹೊರತು ಪಡಿಸಿದ ಇತರ ಉದ್ಯೋಗಗಳ ಬಗ್ಗೆಯೂ ಸರಕಾರ ಯೋಚನೆ ಮಾಡುತ್ತಿದೆ. ಪದವೀಧರರು ಕೇವಲ ಸರಕಾರ ಉದ್ಯೋಗವನ್ನು ಮಾತ್ರ ಉದ್ಯೋಗ ಎಂದು ಅನಿಸಬಾರದು. ಅದಕ್ಕಿಂತ ಹೆಚ್ಚು ಆದಾಯ ಕೊಡುವ ಉದ್ಯೋಗಳು ಇವೆ. ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಹಿಂದುಗಳಿಗೆ ಮತಹಾಕಲು ಬಿಡುತ್ತಿಲ್ಲ: ಎಲ್ಲ ಚುನಾವಣೆಯಲ್ಲೂ ನಾವು ಸೂಕ್ಷ್ಮ ಅತೀ ಸೂಕ್ಷ್ಮ ಮತಗಟ್ಟೆಗಳ ವಿವರ ವನ್ನು ಕಾರ್ಯಕರ್ತರಿಂದ ಪಡೆದು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತೇವೆ. ಯಾಕೆಂದರೆ ಶಿವಾಜಿನಗರ, ಉಳ್ಳಾಲ, ಡಿಜೆ ಹಳ್ಳಿ ಕೆಜೆ ಹಳ್ಳಿಯಂತ ಪ್ರದೇಶದಲ್ಲಿ ಹಿಂದುಗಳಿಗೆ ಮನೆಯಿಂದ ಹೊರ ಬಂದು ಮತ ಹಾಕಲು ಬಿಡುತ್ತಿಲ್ಲ. ಅದಕ್ಕಾಗಿ ನಾವು ಕಾರ್ಯಕರ್ತರಿಗೆ ಇಂತಹ ಸೂಕ್ಷ್ಮ ಮತಗಟ್ಟೆಗಳ ವಿವರವನ್ನು ಕೇಳಿ, ಹೆಚ್ಚಿನ ಭದ್ರತೆ ಒದಗಿಸಲು ಆಯೋಗಕ್ಕೆ ಕೊಡುತ್ತೇವೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದರು.
ಮಹಿಳಾ ಸಿಎಂ ರಾಜ್ಯದಲ್ಲಿ ಸಾಧ್ಯವಿಲ್ಲ. ಶಾಸಕಾಂಗ ಪಕ್ಷದ ನೇತಾರ ಯಾರು ಆಗಬೇಕು ಎಂಬುದನ್ನು ಶಾಸಕರು ತೀರ್ಮಾನ ಮಾಡುತ್ತಾರೆ. ಅದಕ್ಕಾಗಿ ಆ ರೀತಿಯ ಯಾವುದೇ ಚರ್ಚೆ ಇಲ್ಲ. ನಾನು ರಾಜ್ಯಕ್ಕೆ ಬರುವುದಿಲ್ಲ. ಮೋದಿ ನೇತೃತ್ವದ ಸಂಪುಟದಲ್ಲಿ ಕೆಲಸ ಮಾಡುವುದು ಬೇರೆಯೇ ಅನುಭವ. ಮೋದಿ ಜೊತೆ ಕೆಲಸ ಮಾಡುವುದು ಪಾಠಶಾಲೆ ಇದ್ದಂತೆ. ಇಲ್ಲಿ ಕಲಿಯುವುದು ತುಂಬಾ ಇದೆ. ನಾನು ಅಲ್ಲಿ ಖುಷಿಯಾಗಿದ್ದೇನೆ ಎಂದು ಅವರು ಹೇಳಿದರು.
‘ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಎರಡು ಮೂರು ಮನೆಯವರು ಕೋರ್ಟಿಗೆ ಹೋದ ಕಾರಣಕ್ಕೆ ಕಾಮಗಾರಿ ವಿಳಂಬ ವಾಗಿದೆ. ಅದನ್ನು ಬಗೆಹರಿಸುವ ಕಾರ್ಯ ಮಾಡುತ್ತಿದ್ದೇವೆ. ಅಡ್ವಕೇಟ್ ಜನರಲ್ಗೆ ಈ ಸಮಸ್ಯೆ ಬಗೆಹರಿಸಲು ಹೇಳಿದ್ದೇವೆ. ಆ ಮನೆಗಳಿಂದ ಈ ರಸ್ತೆಯಲ್ಲಿ ಮಣಿಪಾಲಕ್ಕೆ ಸಾಗುವ ಅಂಬ್ಯುಲೆನ್ಸ್ ಹಾಗೂ ರೋಗಿಗಳಿಗೆ ತೊಂದರೆ ಆಗುತ್ತಿರುವ ವಿಚಾರವನ್ನು ಕೋರ್ಟಿಗೆ ತಿಳಿಸಿದ್ದೇವೆ. ಆ ಸಮಸ್ಯೆ ಆದಷ್ಟು ಬೇಗ ಬಗೆಹರಿಯುತ್ತದೆ’ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ನಾಲ್ ಸುವರ್ಣ, ಮುಖಂಡರಾದ ಮಟ್ಟಾರು ರತ್ನಾಕರ ಹೆಗ್ಡೆ, ಮಹೇಶ್ ಠಾಕೂರು, ಕುತ್ಯಾರ್ ನವೀನ್ ಶೆಟ್ಟಿ, ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.