ಹೊಸದಿಲ್ಲಿ: ನಮ್ಮ ಪ್ರತಿಭಟನೆಯನ್ನು ತಪ್ಪು ದಿಕ್ಕಿಗೆಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಖ್ಯಾತ ಭಾರತೀಯ ಕುಸ್ತಿಪಟುಗಳಾದ ಬಜರಂಗ್ ಪೂನಿಯ, ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.
ಶನಿವಾರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾವು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಮ್ಮತಿಸುತ್ತಿರಲಿಲ್ಲ ಎಂಬ ಆರೋಪಗಳನ್ನು ಅಲ್ಲಗಳೆದರು. ಈ ಆರೋಪಗಳು ಆಧಾರರಹಿತವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.
“ಕೆಲವು ವ್ಯಕ್ತಿಗಳು ನಮ್ಮ ಪ್ರತಿಭಟನೆಯನ್ನು ಬೇರೆ ದಿಕ್ಕಿನೆಡೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನಾನು ಇಂತಹ ವಿಷಯಗಳನ್ನು ನಿರಾಕರಿಸಲು ಬಯಸುತ್ತೇನೆ ಮತ್ತು ನಾವಿಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ನಾವಿಲ್ಲಿ ಮಹಿಳೆಯರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಅವರು ಪ್ರತಿಭಟನೆಯ ಅರ್ಥವನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಜರಂಗ್ ಪೂನಿಯ ಸ್ಪಷ್ಟಪಡಿಸಿದರು.