ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಹವಾ ಜೋರಾಗಿದೆ. ತಮಗೆ ಅಥವಾ ತಮ್ಮ ನೆಚ್ಚಿನವರಿಗೆ ಟಿಕೆಟ್ ಸಿಗಲಿಲ್ಲವೆಂದು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೇ ವೇಳೆ, ದೊಡ್ಡಬಳ್ಳಾಪುರ ನಗರಸಭೆಯ ಎಂಟು ಬಿಜೆಪಿ ಸದಸ್ಯರು ‘ಕೈ’ ಹಿಡಿದಿದ್ದಾರೆ.
ಚುನಾವಣೆಗೆ ದಿನಗಣನೆ ಶುರುವಾದ ಹೊತ್ತಲ್ಲೇ ಬಿಜೆಪಿಯಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಪ್ರತಿದಿನವೂ ಒಬ್ಬಲ್ಲ ಒಬ್ಬ ನಾಯಕ ಕಾಂಗ್ರೆಸ್ ಸೇರುತ್ತಿದ್ದಾರೆ.
ದೊಡ್ಡ ಬಳ್ಳಾಪುರದ ನಗರಸಭೆ ಸದಸ್ಯರಾದ ಶಿವಶಂಕರ್, ನಾಗರಾಜ್, ಶಂಕರ್, ಶಿವರಾಜು ಸೇರಿದಂತೆ ಪ್ರಮುಖರು ಬಿಜೆಪಿ ತೊರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿರುವ ಡಿ.ಕೆ ಶಿವಕುಮಾರ್, “ಇಂದು ದೊಡ್ಡಬಳ್ಳಾಪುರದ 8 ಹಾಲಿ ನಗರಸಭಾ ಸದಸ್ಯರು ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ. ನೀವು ಇಂದು ಕಾಂಗ್ರೆಸ್ ಸೇರುತ್ತಾ ದೇಶದ ತ್ರಿವರ್ಣ ಧ್ವಜವನ್ನು ನಿಮ್ಮ ಮೇಲೆ ಹಾಕಿಕೊಳ್ಳುವ ಪವಿತ್ರವಾದ ಅವಕಾಶ ಸಿಕ್ಕಿದೆ” ಎಂದಿದ್ದಾರೆ.
“ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಪುಟ್ಟಣ್ಣ ಸೇರಿದಂತೆ ಪ್ರಮುಖ ನಾಯಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ನಿನ್ನೆ ಬೈಂದೂರಿನಲ್ಲಿ ಒಂದೂವರೆ ಸಾವಿರ ಜನ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರು. ಇಂದು ನಿಮ್ಮನ್ನು ಬಹಳ ತುಂಬುಹೃದಯದಿಂದ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ ರೇವಣ್ಣ, ಶಾಸಕ ವೆಂಕಟರಮಣಯ್ಯ, ಲಗ್ಗೆರೆ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.