ದಾವಣಗೆರೆ: ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ (Siddaramaiah) ಇಡೀ ಪೊಲೀಸರಿಗೆ ಅವಮಾನಿಸಿದ ಘಟನೆ ನಡೆದಿದೆ. ಅಲ್ಲಿದ್ದ, ತಮ್ಮ ರಕ್ಷಣೆಗೆ ಬಂದಿದ್ದ ಪೊಲೀಸರನ್ನು ‘ ಇವರೆಲ್ಲರೂ ಲಂಚ ಕೊಟ್ಟು ಬಂದವರು ‘ ಎಂದು ಸಾಮೂಹಿಕವಾಗಿ ಅವಮಾನಿಸಿದ ಘಟನೆ ನಡೆದಿದೆ.
“ರಾಜ್ಯ ಬಿಜೆಪಿ ಸರ್ಕಾರ ಈಗಾಗಲೇ ಭ್ರಷ್ಟ ಸರ್ಕಾರ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಎಲ್ಲಿ ಹೋದರು ಲಂಚ ಲಂಚ’. ಮಾತಿನ ಮಧ್ಯ ಸಿದ್ದರಾಮಯ್ಯ ಪೊಲೀಸರ ಕಡೆ ಕೈ ಮಾಡಿ ‘ ಇವರೆಲ್ಲಾ ಲಂಚ ಕೊಟ್ಟು ಬಂದಿದ್ದಾರೆ ಎಂದು ‘ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಜಿಲ್ಲೆಯ ಜಗಳೂರಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ ಗ್ರಾಮೀಣ ಪ್ರದೇಶದಲ್ಲಿ 15 ರಿಂದ 20 ಲಕ್ಷ ರೂ. ವರ್ಗಾವಣೆಗೆ ಲಂಚ ಕೊಡಬೇಕು. ಬೆಂಗಳೂರಿನಂತಹ ನಗರಗಳಿಗೆ 30 ರಿಂದ 40 ಲಕ್ಷ ರೂ. ಲಂಚ ಕೊಡಬೇಕು. ಬಿಜೆಪಿ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ನಿರ್ಮಿಸಿದೆ ‘ ಎಂದು ಅವರು ಹರಿಹಾಯ್ದರು. ಆದರೆ ಸಿದ್ದು ಸಾಮೂಹಿಕವಾಗಿ ಪೋಲೀಸರನ್ನು ಎಲ್ಲರೂ ಲಂಚ ಕೊಟ್ಟು ಬಂದವರು ಎಂದದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬಳಿಕ ಮಾತನಾಡಿದ ಅವರು ಸಿದ್ದು “ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿ(Basavaraj Bommai) ಅಲ್ಲ; ಸಿದ್ದರಾಮಯ್ಯ ನರೇಂದ್ರ ಮೋದಿ ಅಲ್ಲ. ಗ್ಯಾರೆಂಟಿಗಳ ಬಗ್ಗೆ ಬಿಜೆಪಿ ವ್ಯಂಗ್ಯವಾಡುತ್ತದೆ. ಹಣ ಎಲ್ಲಿದೆ ? ಎನ್ನುತ್ತಾರೆ. ನಾವು ಕಾಂಗ್ರೆಸ್ ನುಡಿದಂತೆ ನಡೆಯುವ ಜನ. ನಾವು ಈಗ ನೀಡಿದ ಎಲ್ಲ ಗ್ಯಾರೆಂಟಿಗಳನ್ನು ಪೂರೈಸುತ್ತೇವೆ ” ಎಂದು ಹೇಳಿದ್ದಾರೆ.
ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ಧರಾಮಯ್ಯ “ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಗೊಂದಲ ಸೃಷ್ಟಿ ಮಾಡಿದೆ. SC, ST ಮೀಸಲಾತಿ ಹೆಚ್ಚಳದ ಬಗ್ಗೆ ಕೋರ್ಟ್ಗೆ ಹೋದರೆ ತಡೆಯಾಜ್ಞೆ ಸಿಗುವಂತೆ ಮಾಡಿ ಬಿಜೆಪಿ ವಂಚಿಸಿದೆ. ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದು ನಾವು. 2016ರಲ್ಲಿ ಕಾಂಗ್ರೆಸ್ ಸರ್ಕಾರ ಕಂದಾಯ ಗ್ರಾಮಗಳಾಗಿ ಮಾಡಿತ್ತು. ಈಗ ಮೋದಿ ಬಂದು ಹಕ್ಕುಪತ್ರ ನೀಡಿ ರಾಜಕೀಯ ಲಾಭ ಪಡೆದರು. ದೇಶದಲ್ಲಿ ಮೋದಿಯಂತೆ ಸುಳ್ಳು ಹೇಳುವವರು ಯಾರೂ ಇಲ್ಲ” ಎಂದು ಕಿಡಿಕಾರಿದರು.
ಮುಂದೆಯೂ ವಾಗ್ದಾಳಿ ಮುಂದುವರೆಸಿ ಸಬಕಾ ಸಾಥ್ ಸಬಕಾ ವಿಕಾಸ ಬರೀ ಭಾಷಣ .ಅಚ್ಚೇ ದಿನ ಆಯೇಗಾ ಅಂತಾರೆ, ಅವರು ಹೇಳೋ ಒಳ್ಳೆ ದಿನ ಎಂದಾದರೂ ಬಂತಾ ಎಂದು ಪ್ರಶ್ನಿಸಿದರು. 224 ಕ್ಷೇತ್ರಗಳಲ್ಲಿ ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ. ಒಬ್ಬ ಕ್ರಿಶ್ಚನ್‌ಗೂ ಟಿಕೆಟ್ ಕೊಟ್ಟಿಲ್ಲ. ನೀವು ಹಿಂದಿಳಿದವರನ್ನೇ ಕಡೆಗಣಿಸಿ ಹೊರಗಿಟ್ಟಿದ್ದೀರಾ. ಹಾಗಿದ್ರೆ ಮೋದಿಯವರೇ ಇದೇನಾ ಸಬಕಾ ಸಾಥ್ ಸಬಕಾ ವಿಕಾಸ್? ಎಂದು ಮಾತಲ್ಲೇ ತಿವಿದರು. ಜನರೇ ನಿಮ್ಮಲ್ಲಿ ಕೈ ಮುಗಿದು ಕೇಳುತ್ತೇನೆ ನರೇಂದ್ರ ಮೋದಿ ಮಾತು ನಂಬಬೇಡಿ, ಮೋದಿಯ ಕೆಲಸ ಮೋಡಿ ಮಾಡೋದು ಮಾತ್ರ ಎಂದು ಹೇಳಿದರು.
ನಂತರ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಶತಃಸಿದ್ಧ. ನಾವು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 20 ಲಕ್ಷ ಮನೆ ನಿರ್ಮಾಣ ಮಾಡುತ್ತೇವೆ. ಬಡವರು ಅರ್ಜಿ ಸಲ್ಲಿಸಿದ ಕೂಡಲೇ ಮನೆ ಮಂಜೂರು ಮಾಡುತ್ತೇವೆ ಎಂದು ಸಿದ್ಧರಾಮಯ್ಯ ಭರವಸೆ ನೀಡಿದರು.