ಪುಣೆ: ಇಲ್ಲಿನ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಎಂಬವರನ್ನು ಪಾಕಿಸ್ತಾನಿ ಏಜೆಂಟ್‌ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ವಿಜ್ಞಾನಿಯು ವಾಟ್ಸಾಪ್ ಹಾಗೂ ವೀಡಿಯೊ ಕರೆಗಳ ಮೂಲಕ “ಪಾಕಿಸ್ತಾನ ಗುಪ್ತಚರ ಆಪರೇಟಿವ್” ನ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದರು. ಇದು ಹನಿಟ್ರ್ಯಾಪ್ ಪ್ರಕರಣ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮುಖ ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಆರೋಪಿಯನ್ನು ಬುಧವಾರ ಬಂಧಿಸಲಾಗಿದೆ.
“ಶತ್ರು ದೇಶದ ಅಧಿಕಾರಿಗಳು ತನ್ನ ಬಳಿಯಿರುವ ರಹಸ್ಯಗಳನ್ನು ಪಡೆದರೆ ದೇಶದ ಭದ್ರತೆಗೆ ಅಪಾಯವನ್ನುಂಟುಮಾಡಬಹುದು ಎಂದು ತಿಳಿದಿದ್ದರೂ ವಿಜ್ಞಾನಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಶತ್ರು ದೇಶಕ್ಕೆ ವಿವರಗಳನ್ನು ನೀಡಿದ್ದಾರೆ” ಎಂದು ಎಟಿಎಸ್ ಪ್ರಕಟಣೆ ತಿಳಿಸಿದೆ.
ಮುಂಬೈನ ಎಟಿಎಸ್‌ನ ಕಾಲಾಚೌಕಿ ಘಟಕದಲ್ಲಿ ಅಧಿಕೃತ ರಹಸ್ಯ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ನೋಂದಾಯಿಸಲಾಗಿದೆ ಹಾಗೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಟಿಎಸ್ ತಿಳಿಸಿದೆ.