ಬೆಂಗಳೂರು: ಶನಿವಾರ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುವ ವೇಳೆಯಲ್ಲಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಅಂಬೇಡ್ಕರ್ ಫ್ಲೆಕ್ಸ್ ಹರಿದು ಅವಮಾನ ಮಾಡಲಾಗಿದೆ ಎಂದು ದಲಿತ ಮುಖಂಡರು ಆರೋಪಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.
ದಲಿತ ಮುಖಂಡ ಚಿಕ್ಕರಾಮು ಅವರು ಮಾತನಾಡಿ, “ಪ್ರಪಂಚಾದ್ಯಂತ ಮನ್ನಣೆ ಪಡೆದಿರುವ ಡಾ.ಬಿ.ಆರ್ ಅಂಬೇಡ್ಕರ್‌ರವರ ಭಾವಚಿತ್ರವನ್ನು ಇಂದಿನ ಪ್ರಧಾನಿಗಳ ರ‌್ಯಾಲಿಗೆ ಬಳಸಿಕೊಳ್ಳಲಾಗಿದೆ. ಆದರೆ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಡಾ. ಅಂಬೇಡ್ಕರ್‌ರವರ ಭಾವಚಿತ್ರ ಇರುವ ಫ್ಲೆಕ್ಸ್ ಅನ್ನು ಹರಿಯುವ ಮೂಲಕ ವಿಕೃತಿ ಮೆರೆದಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇಂದು ಕೆಎಚ್‌ಬಿ ಕಾಲೋನಿಯಿಂದ ನವರಂಗ್ ಥಿಯೇಟರ್‌ವರೆಗೂ ಬಿಜೆಪಿ ರ‌್ಯಾಲಿ ಇತ್ತು. ಆ ಪ್ರಯುಕ್ತ ಶಂಕರಮಠ ಸರ್ಕಲ್‌ನಲ್ಲಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಬಳಸಿಕೊಂಡಿದ್ದಾರೆ, ಆ ನಂತರ ಜಾತಿವಾದಿಗಳು ಅದನ್ನು ವಿರೂಪಗೊಳಿಸಿದ್ದಾರೆ. ಇದರಲ್ಲಿ ಬಿಜೆಪಿಯ ಬೇಜವಬ್ದಾರಿತನವೂ ಇದೆ” ಎಂದು ಕಿಡಿಕಾರಿದ್ದಾರೆ.
ಅಂಬೇಡ್ಕರ್‌ರವರು ಇಡೀ ವಿಶ್ವದ ಆಸ್ತಿಯಾಗಿದ್ದಾರೆ. ಅವರ ಭಾವಚಿತ್ರಗಳನ್ನು ಬಳಸಿಕೊಳ್ಳುವ ರಾಜಕೀಯ ಪಕ್ಷಗಳಿಗೆ ಆ ಭಾವಚಿತ್ರಗಳಿಗೆ ಗೌರವ ಕೊಡಬೇಕು, ಅದನ್ನು ಸಂರಕ್ಷಿಸಬೇಕು ಎನ್ನುವ ಜವಾಬ್ದಾರಿ ಇರಬೇಕು. ಅದು ಬಿಟ್ಟು ಈ ರೀತಿ ಬಳಸಿ ಬಿಸಾಕುವುದು ಸರಿಯಲ್ಲ. ನಾವು ಏನು ಮಾಡಿದರೂ ಹೇಳುವವರು-ಕೇಳುವವರು ಯಾರು ಇಲ್ಲ ಎನ್ನುವ ಅಹಂಕಾರದಿಂದ ಇಂದಿನ ಘಟನೆ ಜರುಗಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.
ಈ ಕೃತ್ಯದಿಂದ ಸಮಾಜದಲ್ಲಿ ಅಶಾಂತಿ, ದಳ್ಳೂರಿ ಉದ್ಭವಿಸುವ ಅಪಾಯವಿದೆ. ಹಾಗಾಗಿ ಪೊಲೀಸ್ ಇಲಾಖೆ ಕೂಡಲೇ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನವೆಸಗಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ದಲಿತ ಒಕ್ಕೂಟದ ಕಾರ್ಯಕರ್ತರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.