ಕಲಬುರಗಿ ನಗರದ ಸಂಗಮ ಕಾಂಪ್ಲೆಕ್ಸ್‌ನಲ್ಲಿ ಇರುವ ಬಿಜೆಪಿ ಡೇಟಾ ಕಾಲ್ ಸೆಂಟರ್ ಮೇಲೆ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿ, ಹಲವರನ್ನು ವಶಕ್ಕೆ ಪಡೆದಿದ್ದಾರೆ.
ನಗರ ಪೊಲೀಸ್ ಕಮಿಷನರ್ ಚೇತನ್ ಆರ್. ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಯುವತಿ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕೆಲವರು ಪರಾರಿ ಆಗಿದ್ದಾರೆ ಎಂದು ವರದಿಯಾಗಿದೆ.
ಕಳೆದ ಮೂರು ತಿಂಗಳಿಂದ ಸಕ್ರಿಯವಾಗಿ ಈ ಕಾಲ್ ಸೆಂಟರ್ ಮತದಾರರಿಗೆ ನಿರಂತರವಾಗಿ ಕರೆ ಮಾಡಿ ಬಿಜೆಪಿಗೆ ಮತ ಹಾಕುವಂತೆ ಮನವೊಲಿಕೆ ಮಾಡುತ್ತಿತ್ತು. ಮತದಾನದ ದಿನವಾದ ಬುಧವಾರ ಮುಂಜಾನೆ 4 ಗಂಟೆ ಸುಮಾರಿಗೆ ಯುವತಿಯರನ್ನು ಸೆಂಟರ್‌ಗೆ ಕರೆ ತಂದು ಅವರಿಂದ ಮತದಾರರಿಗೆ ಕರೆ ಮಾಡಿಸಲಾಗಿದೆ. ಕಾಂಗ್ರೆಸ್‌ಗೆ ಮತ ಹಾಕುವುದನ್ನು ತಪ್ಪಿಸುವುದನ್ನೇ ಟಾರ್ಗೆಟ್ ಮಾಡಿಕೊಂಡು ಮನವೊಲಿಕೆ ಮಾಡಲಾಗುತ್ತಿತ್ತು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರು ಮತದಾನದ ಕಾರಣ ಕೆಲಸಕ್ಕೆ ಬರಲು ಹಿಂದೇಟು ಹಾಕಿ, ಮತಚಲಾಯಿಸಲು ಹೋಗುವುದಾಗಿ ಹೇಳಿದ್ದರು. ಕಾಲ್ ಸೆಂಟರ್‌ನಲ್ಲಿಯೇ ಮತ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದು ನಂಬಿಸಿ ಕರೆ ತರಲಾಗಿತ್ತು. ಆ ಬಳಿಕ ಅವರಿಂದ ಕರೆ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ಸಿಗರು ದೂರಿದ್ದಾರೆ.
ಮೇಲುಕೋಟೆ ಕ್ಷೇತ್ರದಲ್ಲಿ ಮಾತಿನ ಘರ್ಷಣೆ
ಮಂಡ್ಯ ಜಿಲ್ಲೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿ ಹೊಮ್ಮಿರುವ ಮೇಲುಕೋಟೆಯಲ್ಲಿ ರೈತ ಸಂಘ ಮತ್ತು ಜೆಡಿಎಸ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನಾರಾಯಣಪುರ ಮತಗಟ್ಟೆಯಲ್ಲಿ ರೈತಸಂಘದ ಸದಸ್ಯರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.
ಹಿರಿಯ ನಾಗರಿಕರನ್ನು ಕರೆತಂದು ಮತ ಹಾಕಿಸುವ ವಿಚಾರಕ್ಕೆ ಗಲಾಟೆಯಾಗಿದೆ. ಶಾಸಕ ಸಿ.ಎಸ್.ಪುಟ್ಟರಾಜು ಸಮ್ಮುಖದಲ್ಲೇ ಘಟನೆ ನಡಿದಿದ್ದು, ವಿಡಿಯೊ ಮಾಡುತ್ತಿದ್ದ ಇಬ್ಬರು ಯುವಕರಿಗೆ ಸಿ.ಎಸ್.ಪುಟ್ಟರಾಜು ಕಪಾಳಕ್ಕೆ ಹೊಡೆದಿದ್ದಾರೆ.
ಪುಟ್ಟರಾಜು ವಿರುದ್ಧ ರೈತಸಂಘದ ಸದಸ್ಯರು ಘೋಷಣೆ ಕೂಗಿದ್ದಾರೆ. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಇತ್ತು. ಸ್ಥಳಕ್ಕೆ ಬಂದ ಪೊಲೀಸರು ಗುಂಪು ಚದುರಿಸಿದ್ದಾರೆ.
ಗಂಗಾವತಿ: ಕೆಆರ್‌ಪಿಪಿ- ಬಿಜೆಪಿ ಕಾರ್ಯಕರ್ತರ ನಡುವೆ ಜಗಳ
ಗಂಗಾವತಿ ನಗರದ ಎಪಿಎಂಸಿಯ 159 ಹಾಗೂ160 ಮತಗಟ್ಟೆ ಬಳಿ ಬುಧವಾರ ಕೆಆರ್‌ಪಿಪಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಬುಧವಾರ ಮತದಾನ ಸಮಯದಲ್ಲಿ ಮಾತಿನ ಚಕಮಕಿ ನಡೆದಿದೆ.
ಮತಗಟ್ಟೆಯಲ್ಲಿ ಕೆಆರ್‌ಪಿಪಿ ಪಕ್ಷದ ಮಹಿಳಾ ಏಜೆಂಟ್ ತಮ್ಮ ಸೀರೆಗೆ ಜನಾರ್ದನ ರೆಡ್ಡಿ ಹೆಸರಿರುವ ಬ್ಯಾಡ್ಜ್ ಧರಿಸಿದ್ದಾರೆ ಎಂದು ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ಚುನಾವಣೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಪರವಾನಗಿ ಪಡೆದು ಧರಿಸಲಾಗಿದೆ ಎಂದು ಏಜೆಂಟ್ ತಿಳಿಸಿದ್ದಾರೆ. ಈ ಕಾರಣಕ್ಕೆ ಜಗಳ ನಡೆದಿದೆ ಎಂದು ವರದಿಯಾಗಿದೆ.