BJP Tender: ಚುನಾವಣೆಯಲ್ಲಿ ಹೀನಾಯವಾಗಿ ಸೋತಿರೋ ಬಿಜೆಪಿಗೆ ಕಾಂಗ್ರೆಸ್ ಸರ್ಕಾರ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಅಂತೆಯೇ ಇದೀಗ ಬಿಜೆಪಿಗೆ ಮತ್ತೊಂದು ಶಾಕ್ ನೀಡಲು ಮುಂದಾಗಿರೋ ಸಿದ್ದು ಗೌರ್ಮೆಂಟ್ , ಬಿಜೆಪಿ ಅವಧಿಯಲ್ಲಿ ಹಣಕಾಸಿನ ಸೂಕ್ತ ಅನುದಾನವಿಲ್ಲದೆ ನಿಯಮಗಳನ್ನು ಉಲ್ಲಂಘಿಸಿ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಟೆಂಡರ್‌ಗಳನ್ನು ಕರೆದಿದೆ ಎಂದು ಅವುಗಳೆಲ್ಲವನ್ನೂ ಸ್ಥಗಿತಗೊಳಿಸುವಂತೆ ಆದೇಶ ಹೊರಡಿಸಿದೆ.
ಹೌದು, ಬಿಜೆಪಿ ಸರಕಾರ ತರಾತುರಿಯಲ್ಲಿ ನೀಡಿದ ಟೆಂಡರ್ ಕಾಮಗಾರಿಗಳನ್ನು ರದ್ದು ಪಡಿಸಲಾಗುವುದು. ಅಕ್ರಮ ಟೆಂಡರ್‌ಗಳ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್ ಚುನಾವಣ ಪ್ರಚಾರದ ವೇಳೆ ಕೂಡ ಹೇಳಿತ್ತು. ಅಂತೆಯೇ ಈಗ ಆದ್ಯತೆ ಮೇರೆಗೆ ಟೆಂಡರ್‌ಗಳಿಗೆ ಬ್ರೇಕ್ ಹಾಕಿದೆ.
ಅಂದಹಾಗೆ 20 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ಟೆಂಡರ್ ಕರೆಯುವಾಗ ಅನುಮೋದನೆ ಅಗತ್ಯ. ಹಣಕಾಸು ಮತ್ತು ಭೂಸ್ವಾಧೀನ ತೊಂದರೆಯಿದ್ದರೂ ತರಾತುರಿಯಲ್ಲಿ ಕರೆಯಲಾಗಿದ್ದು, ಟೆಂಡರ್ ನಿಯಮಗಳನ್ನೂ ಉಲ್ಲಂಘಿಸಲಾಗಿದೆ. ಈ ಕಾಮಗಾರಿ ಅವೈಜ್ಞಾನಿಕವಾಗಿವೆ ಎಂದು ವ್ಯಾಪಕ ದೂರುಗಳು ಬಂದಿವೆ. ಜತೆಗೆ ಕೆಲವು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಟೆಂಡರ್ ಕಾಮಗಾರಿಗಳ ಸೂಕ್ತ ಪರಿಶೀಲನೆ ನಡೆಸಬೇಕಿರುವುದರಿಂದ ಈವರೆಗೆ ಆರಂಭವಾಗಿರದ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಈಗಾಗಲೇ ಕರೆದಿರುವ ಟೆಂಡರ್‌ಗಳನ್ನು ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಅಲ್ಲದೆ ತಾನು ಅಧಿಕಾರ ಕಳೆದುಕೊಳ್ಳುವ ಮುಂಚಿತವಾಗಿ ಬಿಜೆಪಿ ಸರಕಾರ ಆದೇಶಿಸಿದ್ದ ಎಲ್ಲ ಇಲಾಖೆಗಳ ಮತ್ತು ಅವುಗಳ ಅಧೀನಕ್ಕೊಳಪಡುವ ನಿಗಮ/ ಮಂಡಳಿ/ ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಬಿಲ್ ಪಾವತಿಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಲಾಗಿತ್ತು. ಪ್ರಾರಂಭವಾಗದಿರುವ ಎಲ್ಲ ಕಾಮಗಾರಿಗಳನ್ನೂ ತಡೆಹಿಡಿಯಲು ಆದೇಶಿಸಲಾಗಿತ್ತು. ಈಗ ಆ ಇಲಾಖೆಗಳು ಯಾವುವು, ವಿವಿಧ ಟೆಂಡರ್‌ಗಳ ಒಟ್ಟಾರೆ ಮೊತ್ತ ಎಷ್ಟು ಎಂಬುದನ್ನು ಸ್ವತಃ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.