ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ದೇಶಕ್ಕೆ ಒಲಂಪಿಕ್ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಇಂದು (ಭಾನುವಾರ) ಬಂಧಿಸಿದ್ದಾರೆ. ಜಂತರ್‌ಮಂತರ್‌ನಲ್ಲಿ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದ ದೇಶದ ಮಹತ್ವದ ಕುಸ್ತಿಪಟುಗಳನ್ನು ಎಳೆದಾಡಿ ವಶಕ್ಕೆ ಪಡೆಯಲಾಗಿದೆ.
ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪೂನಿಯಾ ಸೇರಿದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಹೊಸ ಸಂಸತ್ತಿನ ಕಟ್ಟಡದ ಕಡೆಗೆ ಕುಸ್ತಿಪಟುಗಳು ತೆರಳಲು ಪ್ರಯತ್ನಿಸುತ್ತಿದ್ದಾಗ ವಶಕ್ಕೆ ಪಡೆಯಲಾಗಿದೆ. ಮಹಿಳಾ ಮಹಾಪಂಚಾಯತ್ ನಡೆಸುವ ಮೂಲಕ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕುಸ್ತಿಪಟುಗಳು ಬಯಸಿದ್ದರು.
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದ, ಭಾರತೀಯ ಕುಸ್ತಿ ಪೆಡರೇಷನ್ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ ಬಂಧನ ಮಾಡಬೇಕೆಂದು ಆಗ್ರಹಿಸಿ ಕುಸ್ತಿಪಟುಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಜಂತರ್ ಮಂತರ್‌ನಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳು ಕಂಡುಬಂದಿವೆ. ವಿನೇಶ್ ಫೋಗಟ್ ಮತ್ತು ಅವರ ಸೋದರಸಂಬಂಧಿ ಸಂಗೀತಾ ಫೋಗಟ್ ಬ್ಯಾರಿಕೇಡ್‌ಗಳನ್ನು ಭೇದಿಸಲು ಪ್ರಯತ್ನಿಸಿದಾಗ ಕುಸ್ತಿಪಟುಗಳು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ತಿಕ್ಕಾಟ ನಡೆಯಿತು.
ಪೊಲೀಸರು ಎಳೆದಾಡುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿರುವ ಸಾಕ್ಷಿ ಮಲ್ಲಿಕ್, “ನಮ್ಮ ಚಾಂಪಿಯನ್‌ಗಳನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ. ಜಗತ್ತು ನಮ್ಮನ್ನು ನೋಡುತ್ತಿದೆ” ಎಂದು ನೊಂದು ನುಡಿದಿದ್ದಾರೆ.
ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಘಟನೆಯ ಫೋಟೋಗಳನ್ನು ಹಂಚಿಕೊಂಡಿದ್ದು, “ಇದು ಭಯಾನಕ. ಜೈಲಿನಲ್ಲಿ ಇರಬೇಕಾದದನು ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಗೌರವ ಕಾಪಾಡಬೇಕಾದವರನ್ನು ದೆಹಲಿಯ ಬೀದಿಗಳಲ್ಲಿ ಎಳೆದು ತರಲಾಗುತ್ತಿದೆ. ನಾವು ಹಿಟ್ಲರ್ ಆಳ್ವಿಕೆಯ ಬಗ್ಗೆ ಕೇಳಿದ್ದೇವೆ. ಆದರೆ ಈಗ ನಾವು ಮೋದಿಯವರ ಆಡಳಿತದಲ್ಲಿ ಅದನ್ನು ನೋಡುತ್ತಿದ್ದೇವೆ. ಮೋದಿ ಸರ್ಕಾರವು ಅಪರಾಧಿಯನ್ನು ರಕ್ಷಿಸಲು ಇನ್ನು ಎಷ್ಟರ ಮಟ್ಟಿಗೆ ಹೋಗುತ್ತಿದೆ. ಸ್ವಲ್ಪ ನಾಚಿಕೆ ಇರಲಿ” ಎಂದು ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿ, “ದೆಹಲಿ ಪೊಲೀಸರು ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಇತರ ಕುಸ್ತಿಪಟುಗಳ ಮೇಲೆ ದೌರ್ಜನ್ಯ ನಡೆಸಿದ ರೀತಿಯನ್ನು ಬಲವಾಗಿ ಖಂಡಿಸುತ್ತೇನೆ. ನಮ್ಮ ಚಾಂಪಿಯನ್‌ಗಳನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರನ್ನು ಕೂಡಲೇ ಪೊಲೀಸರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತೇನೆ. ನಾನು ನಮ್ಮ ಕುಸ್ತಿಪಟುಗಳ ಪರವಾಗಿ ನಿಲ್ಲುತ್ತೇನೆ” ಎಂದಿದ್ದಾರೆ.
ಎಲ್ಲಾ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಲವಂತವಾಗಿ ಬಸ್‌ಗಳಿಗೆ ಹತ್ತಿಸಿದರು. “ಕಾನೂನು ಮತ್ತು ಸುವ್ಯವಸ್ಥೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ನಾವು ಸೂಕ್ತ ಸಮಯದಲ್ಲಿ ವಿಚಾರಣೆಯ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಸಿಪಿ ದೇವೇಂದ್ರ ಪಾಠಕ್ ಹೇಳಿದ್ದಾರೆ.
ಏಪ್ರಿಲ್ 23 ರಂದು ಕುಸ್ತಿಪಟುಗಳು ವ್ರೆಸ್ಟಿಂಗ್ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ತಮ್ಮ ಆಂದೋಲನವನ್ನು ಪುನರಾರಂಭಿಸಿದ್ದರು. ಪ್ರತಿಭಟನಾ ಸ್ಥಳವನ್ನು ಪೊಲೀಸ್ ಅಧಿಕಾರಿಗಳು ತೆರವುಗೊಳಿಸುತ್ತಿರುವುದು ಕಂಡುಬಂದಿದೆ.
‘ಮಹಿಳಾ ಸಮ್ಮಾನ್ ಮಹಾಪಂಚಾಯತ್’ಗೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಕರೆ ನೀಡಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಜಂತರ್ ಮಂತರ್‌ನಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದರು.
ಭಾನುವಾರ ದೆಹಲಿಯ ಲುಟಿಯನ್ಸ್ ಪ್ರದೇಶದಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಮತ್ತು ಹಲವಾರು ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು.
ಸಂಸತ್ ಭವನದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಯಾವುದೇ ಬೆಲೆ ತೆತ್ತಾದರೂ ಹೊಸ ಸಂಸತ್ ಭವನದ ಬಳಿ ತಮ್ಮ ‘ಮಹಾಪಂಚಾಯತ್’ ನಡೆಸುವುದಾಗಿ ಹೇಳಿದ್ದರು.
ಮಹಾ ಪಂಚಾಯತ್ ನಡೆಸಲು ಅನುಮತಿ ನೀಡಿರಲಿಲ್ಲ. ಪ್ರತಿಭಟನಾಕಾರರು ಹೊಸ ಸಂಸತ್ ಕಟ್ಟಡದ ಕಡೆಗೆ ಹೋಗದಂತೆ ಸೂಚಿಸಲಾಗಿತ್ತು. ಕುಸ್ತಿಪಟುಗಳು ಯಾವುದೇ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಬಾರದು ಎಂದು ಪೊಲೀಸರು ತಿಳಿಸಿದ್ದಾರೆ.
ಒಲಂಪಿಕ್ ಪದಕ ವಿಜೇತರಾದ ಬಜರಂಜ್ ಪೂನಿಯಾ, ಸಾಕ್ಷಿ ಮತ್ತು ಏಷ್ಯನ್ ಗೇಮ್ಸ್ ಚಿನ್ನದ ವಿಜೇತ ವಿನೇಶ್ ಸೇರಿದಂತೆ ಹಲವು ಮುಂಚೂಣಿ ಕುಸ್ತಿಪಟುಗಳು ಹೋರಾಟದಲ್ಲಿ ನಿರತರಾಗಿದ್ದಾರೆ. ಹಲವಾರು ಮಹಿಳಾ ಕುಸ್ತಿಪಟುಗಳಿಗೆ ಮತ್ತು ಓರ್ವ ಅಪ್ರಾಪ್ತ ಯುವತಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸದ ನಂತರ ಎರಡು ಎಫ್‌ಐಆರ್‌ಗಳನ್ನು ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಲಾಗಿದೆ. ಆದರೆ ಅವರ ಬಂಧನವಾಗಿಲ್ಲ.
ದೇಶಕ್ಕೆ ಮಹತ್ವದ ಪದಕಗಳನ್ನು ತಂದುಕೊಟ್ಟ ಕುಸ್ತಿಪಟುಗಳ ಸ್ಥಿತಿ ಇದಾಗಿದೆ. ದೇಶ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸಿದೆ.