ಉತ್ತರಪ್ರದೇಶ: ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ರಾಮನಗರ ಗ್ರಾಮದಲ್ಲಿ ಮಲದ ಗುಂಡಿಯೊಳಗೆ ಇಳಿದ ಕಾರಣ ವಿಷಕಾರಿ ಅನಿಲ ಸೇವಿಸಿ ಒಂದೇ ಕುಟುಂಬದ ನಾಲ್ವರು ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಮೃತರನ್ನು ನಂದಕುಮಾರ್ (45), ನಿತೇಶ್ (25), ದಿನೇಶ್ (40), ಆನಂದ್ (22) ಎಂದು ಗುರುತಿಸಲಾಗಿದೆ.
ಗ್ರಾಮದಲ್ಲಿನ ಮಲದ ಗುಂಡಿಯನ್ನು ಸ್ವಚ್ಛಗೊಳಿಸಲು ನಂದಕುಮಾರ್ ಅವರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಸ್ವಚ್ಛಗೊಳಿಸುವ ವೇಳೆ ಬಿದ್ದು ಒಳಗೆ ಸಿಲುಕಿಕೊಂಡರು. ಅವರ ಮಗ ನಿತೇಶ್, ತನ್ನ ತಂದೆಗೆ ಸಹಾಯ ಮಾಡಲು ಮುಂದಾಗಿ ಅವರೂ ಕೂಡ ಸಿಲುಕಿಕೊಂಡರು. ಈಗಾಗಲೇ ಸಿಲುಕಿಕೊಂಡಿರುವ ಇಬ್ಬರನ್ನು ರಕ್ಷಿಸಲು ಇವರ ಸಂಬಂಧಿಕರಾದ ದಿನೇಶ್, ಆನಂದ್ ಅವರು ನೆರೆಹೊರೆಯವರಾದ ರಾಜಕುಮಾರ್ ಜೊತೆಯಲ್ಲಿ ಮುಂದಾದರು. ತಮ್ಮವರನ್ನು ಉಳಿಸಲು ಮಲದ ಗುಂಡಿಯೊಳಗೆ ಇಳಿದು ಪ್ರಜ್ಞೆ ತಪ್ಪಿ ಬಿದ್ದರು.
ನಂತರ ಸ್ಥಳೀಯರು ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿದರು. ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲು ಇವರನ್ನು ಅಧಿಕಾರಿಶಾಹಿ ವರ್ಗ ಮಲದ ಗುಂಡಿಯೊಳಗೆ ಇಳಿಸಿತ್ತು ಎಂಬ ಆರೋಪ ಕೇಳಿಬಂದಿದೆ.
“ಐವರನ್ನು ಕೊಟ್ವಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಚಿಂತಾಜನಕ ಸ್ಥಿತಿಯಲ್ಲಿರುವ ರಾಜ್‌ಕುಮಾರ್ ಅವರನ್ನು ಡಿಯೋರಿಯಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ” ಎಂದು ‘ಈಟಿವಿ ಭಾರತ್’ ವರದಿ ತಿಳಿಸಿದೆ.
ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅಥವಾ ಒಳಚರಂಡಿ ಒಳಗೆ ಇಳಿದು ಕೈಗಳಿಂದ ಶುಚಿಗೊಳಿಸುವುದನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜರ್ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ, 2013ರ ಅಡಿಯಲ್ಲಿ ಇದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ಭಾರತದ ಹಲವು ಭಾಗಗಳಲ್ಲಿ ಈ ಅನಿಷ್ಠ ಪದ್ಧತಿ ಮಾತ್ರ ಜೀವಂತವಾಗಿಯೇ ಇದೆ.
1993ರಿಂದ ಇಲ್ಲಿಯವರೆಗೆ ಒಳಚರಂಡಿ ಮತ್ತು ಮಲದಗುಂಡಿಗಳನ್ನು ಶುಚಿಗೊಳಿಸಲು ಹೋಗಿ 1,035 ಜನರು ಸಾವನ್ನಪ್ಪಿದ್ದಾರೆ ಎಂದು ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿತ್ತು.