ಚೆನ್ನೈ: ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಸರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಬೆಂಬಲಿಸಿ ಟ್ವೀಟ್ ಮಾಡಿದ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಮುಖಂಡ ಸೀಮನ್ ಅವರ ಟ್ವಿಟ್ಟರ್ ಖಾತೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸದೇ, ಅತ್ಯಾಚಾರಿಯನ್ನು ರಕ್ಷಿಸುತ್ತಿದೆ ಎಂದು ಸೀಮನ್ ಟ್ವೀಟ್ ಮಾಡಿದ್ದರು.
“ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ನಿರಾಕರಿಸಿ, ಲೈಂಗಿಕ ಅಪರಾಧಿಯನ್ನು ರಕ್ಷಿಸುವ ಮೋದಿ ಸರ್ಕಾರದ ದಬ್ಬಾಳಿಕೆ ಕ್ರಮ ವಿಶ್ವವೇದಿಕೆಯಲ್ಲಿ ಭಾರತಕ್ಕೆ ಅತಿದೊಡ್ಡ ಹಿನ್ನಡೆ!. ಅತ್ಯಾಚಾರಿಯನ್ನು ಬಂಧನದಿಂದ ರಕ್ಷಿಸುವ ಮೋದಿ ಸರ್ಕಾರದ ಕ್ರಮ ಹಾಗೂ ಸಂತ್ರಸ್ತರ ಮೇಲೆ ಪೊಲೀಸ್ ದಾಳಿ ದಬ್ಬಾಳಿಕೆ ಎನಿಸುತ್ತಿಲ್ಲ” ಎಂದು ಸೀಮನ್ ಅವರ ಹೇಳಿಕೆಯಲ್ಲಿ ವಿವರಿಸಲಾಗಿತ್ತು.