ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) ಪಠ್ಯಪುಸ್ತಕ ಪರಿಷ್ಕರಣೆ ಮಾಡಿದ್ದು ಹತ್ತನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ‘ಪ್ರಜಾಪ್ರಭುತ್ವ’ ಪಾಠ ಹಾಗೂ ವಿಜ್ಞಾನ ಪಠ್ಯಪುಸ್ತಕದಿಂದ ‘ಆವರ್ತಕ ಕೋಷ್ಟಕ’ (ಪಿರಿಯಾಡಿಕ್ ಟೇಬಲ್) ಪಾಠಗಳನ್ನು ಕೈಬಿಟ್ಟಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಎನ್‌ಸಿಇಆರ್‌ಟಿ, ”ಪಠ್ಯವನ್ನು ತರ್ಕಬದ್ಧಗೊಳಿಸುವ ಜತೆಗೆ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆ ಇಳಿಸುವ ಉದ್ದೇಶದಿಂದ ಈ ವಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದೆ.
ಎನ್‌ಸಿಇಆರ್‌ಟಿ ನಡೆಗೆ ಶಿಕ್ಷಣತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳ ಹಿಂದೆಯಷ್ಟೇ ಪಠ್ಯಪುಸ್ತಕದಿಂದ ಮೊಘಲ್ ಸಾಮ್ರಾಜ್ಯ, ಮಹಾತ್ಮಗಾಂಧಿ ಹತ್ಯೆ, ಗುಜರಾತ್ ದಂಗೆ, ಡಾರ್ವಿನ್‌ನ ವಿಕಾಸವಾದ ಸಿದ್ಧಾಂತದ ಕುರಿತ ವಿವರಗಳನ್ನು ಪಠ್ಯಪುಸ್ತಕದಿಂದ ಕೈಬಿಡಲಾಗಿತ್ತು. ಮಂಡಳಿಯ ಈ ಕ್ರಮಕ್ಕೆ ಪ್ರತಿಪಕ್ಷಗಳು ಮತ್ತು ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ 10ನೇ ತರಗತಿ ಪಠ್ಯಪುಸ್ತಕದಲ್ಲೂ ಪ್ರಮುಖ ವಿಷಯದ ಪಠ್ಯಗಳನ್ನು ಕೈ ಬಿಟ್ಟಿದೆ.
ಈ ಬಗ್ಗೆ ಎನ್‌ಇಆರ್‌ಟಿಯ ಮಾಜಿ ಅಧ್ಯಕ್ಷ ಪ್ರೊ.ಕೃಷ್ಣಕುಮಾರ್ ಅವರು, ”ಮಂಡಳಿಯು ಮಾಡಿದ ಈ ಬದಲಾವಣೆಯು ತರ್ಕಬದ್ಧವೇ ಅಥವಾ ಸಮರ್ಥನೀಯವೇ?” ಎಂದು ಪ್ರಶ್ನೆ ಮಾಡಿದ್ದಾರೆ. ”ಇಂತಹ ಬದಲಾವಣೆಗೆ ವಿವರ ನೀಡಲು ಆಗುವುದಿಲ್ಲ. ವಿಕಾಸವಾದದ ಸಿದ್ಧಾಂತ ಇಲ್ಲದೆ ಒಬ್ಬ ಶಿಕ್ಷಕ, ವಿದ್ಯಾರ್ಥಿಗಳಿಗೆ ಬೋಧಿಸಲು ಹೇಗೆ ಸಾಧ್ಯ? ಪರಿವರ್ತಕ ಕೋಷ್ಟಕ ಇಲ್ಲದೆ ರಸಾಯನ ವಿಜ್ಞಾನ ಇಲ್ಲ” ಎಂದು ತಿಳಿಹೇಳಿದ್ದಾರೆ.
”ಪರಿಷ್ಕರಣೆ ಮಾಡಿರುವ ವಿಜ್ಞಾನ ಪಠ್ಯಪುಸ್ತಕದಲ್ಲಿ ಆವರ್ತಕ ಕೋಷ್ಟಕವನ್ನು ತೆಗೆದುಹಾಕಲಾಗಿದೆ. ಇದರಡಿ ಬರುವ ಪರಿಸರ ಸುಸ್ಥಿರತೆ ಹಾಗೂ ಇಂಧನ ಮೂಲಗಳು ಅಧ್ಯಾಯಗಳನ್ನು ಕೈಬಿಡಲಾಗಿದೆ. ವಿದ್ಯುತ್ ಮತ್ತು ಕಾಂತೀಯತೆಗೆ ವಿಜ್ಞಾನಿ ಮೈಕಲ್ ಫ್ಯಾರಡೆ ಸಲ್ಲಿಸಿದ ಕೊಡುಗೆಯ ಅಧ್ಯಯನದಿಂದ ವಿದ್ಯಾರ್ಥಿಗಳು ವಂಚಿತರಾಗುವಂತಾಗಿದೆ” ಎಂದು ಹೇಳಿದ್ದಾರೆ.
”ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ಪ್ರಜಾಪ್ರಭುತ್ವ ರಾಜಕೀಯ- 1ರಡಿ ಬರುವ ಮಹತ್ವದ ಸಂಘರ್ಷಗಳು ಮತ್ತು ಚಳವಳಿಗಳು, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳನ್ನೂ ಕೈಬಿಡಲಾಗಿದೆ” ಎಂದಿದ್ದಾರೆ.
ಎನ್‌ಸಿಇಆರ್‌ಟಿ ಸ್ಪಷ್ಟಣೆ:
ಮಕ್ಕಳು ಈ ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಡಿಜಿಟಲ್ ಕಲಿಕೆಯ ಮಹತ್ವದ ಅರಿತಿದ್ದಾರೆ. ಪಠ್ಯಪುಸ್ತಕದಲ್ಲಿದ್ದ ಕಷ್ಟಕರ, ಪುನರಾವರ್ತಿತ ಹಾಗೂ ಅನಗತ್ಯ ಅಂಶಗಳನ್ನು ಕೈಬಿಡಲಾಗಿದೆ ಎಂದು ಎನ್‌ಸಿಇಆರ್‌ಟಿ ತಿಳಿಸಿದೆ.
11 ಮತ್ತು 12ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಈ ವಿಷಯಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಂಡು ಕಲಿಯುವ ಅವಕಾಶವಿದೆ. ಪದವಿ ಪೂರ್ವ ಶಿಕ್ಷಣ ಹಂತದಲ್ಲಿ ರಸಾಯನ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಆವರ್ತಕ ಕೋಷ್ಟಕ ಕಲಿಯುವ ಅವಕಾಶವಿದೆ ಎಂದು ವಿವರಿಸಿದೆ.
”ಕೋವಿಡ್ ಸಂದರ್ಭದಲ್ಲಿನ ಶೈಕ್ಷಣಿಕ ಸ್ಥಿತಿ ಆಧರಿಸಿ ಪಠ್ಯ ತರ್ಕಬದ್ಧಗೊಳಿಸುವಿಕೆಯ ಪ್ರಕ್ರಿಯೆ ಆರಂಭವಾಗಿದೆ. ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆ ಕಡಿಮೆ ಮಾಡುವ ಆಶಯವೂ ಇದರ ಹಿಂದಿದೆ’ ಎಂದು ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಸುಭಾಷ್ ಸರ್ಕಾರ್ ಸಮರ್ಥಿಸಿಕೊಂಡಿದ್ದಾರೆ.
ಮತ್ತೊಂದೆಡೆ ದೇಶದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ(ಎನ್‌ಇಪಿ) ಜಾರಿಗೊಳಿಸಬೇಕು ಎಂದು ಆರೆಸ್ಸೆಸ್ ಈಗಾಗಲೇ ಕೇಂದ್ರದ ಮೇಲೆ ಒತ್ತಡ ಹೇರಿದೆ. ಆರೆಸ್ಸೆಸ್‌ನ ಅಂಗ ಸಂಸ್ಥೆಯಾದ ಶಿಕ್ಷಾ ಸಂಸ್ಕೃತಿ ಉತ್ಪಾನ್ ನ್ಯಾಸ್, ಎನ್‌ಸಿಇಆರ್‌ಟಿಯ ಈ ಕ್ರಮಕ್ಕೆ ಬೆಂಬಲ ನೀಡಿದೆ.