ಅಹ್ಮದಾಬಾದ್: ಗುಜರಾತ್‌ನ ಮಹಿಸಾಗರ್ ಜಿಲ್ಲೆಯಲ್ಲಿ ಮೇಲ್ಜಾತಿಗೆ ಸೇರಿದ ಹೋಟೆಲ್ ಮಾಲಕ ಮತ್ತು ಅಲ್ಲಿನ ಕೌಂಟರ್ ಮ್ಯಾನೇಜರ್‌ನಿಂದ ಹಲ್ಲೆಗೊಳಗಾಗಿದ್ದ ದಲಿತ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅವರ ನಡುವಿನ ಜಗಳವೊಂದು ತೀವ್ರ ಸ್ವರೂಪಕ್ಕೆ ತೆರಳಿ ಆರೋಪಿಗಳು ದಲಿತ ವ್ಯಕ್ತಿಯ ಜಾತಿನಿಂದನೆಗೈದು ಥಳಿಸಿದ್ದರು ಎಂದು ವರದಿಯಾಗಿದೆ.
ಸಂತ್ರಸ್ತ ರಾಜು ವಂಕರ್ (45) ವಡೋದರಾದ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ.
ಘಟನೆಯನ್ನು ಖಂಡಿಸಿರುವ ದಲಿತ ನಾಯಕ ಹಾಗೂ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಆರೋಪಿಗಳನ್ನು “ಜಾತೀವಾದಿ ಗೂಂಡಾಗಳು” ಎಂದು ಬಣ್ಣಿಸಿದ್ದಾರಲ್ಲದೆ ಅವರನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
ಎಫ್‌ಐಆರ್‌ನಲ್ಲಿರುವ ಮಾಹಿತಿಯಂತೆ ಆಟೋ ಚಾಲಕನಾಗಿರುವ ವಂಕರ್ ಜೂನ್ 7ರಂದು ಹೋಟೆಲ್‌ಗೆ ರಾತ್ರಿಯೂಟಕ್ಕಾಗಿ ತೆರಳಿದ್ದರು. ಊಟದ ನಂತರ ಮನೆಗೆ ಕೊಂಡು ಹೋಗಲು ಆಹಾರ ಪ್ಯಾಕ್ ಮಾಡುವಂತೆ ವಿನಂತಿಸಿದ್ದರು. ಆದರೆ ಹೀಗೆ ಪ್ಯಾಕ್ ಮಾಡಿದ ಆಹಾರದ ಪ್ರಮಾಣದ ಬಗ್ಗೆ ಆತ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ ತಾನು ಪಾವತಿಸಿದ ಹಣಕ್ಕೆ ಇದು ಕಡಿಮೆಯಾಗಿದೆ ಎಂದಿದ್ದರು. ಆಗ ಅವರ ನಡುವೆ ವಾದವಿವಾದ ನಡೆದು ಆರೋಪಿಗಳು ವಂಕರ್‌ನ ಜಾತಿನಿಂದನೆಗೈದು ತೀವ್ರವಾಗಿ ಹಲ್ಲೆಗೈದಿದ್ದರು ಎಂದು ವರದಿಯಾಗಿದೆ.