ದೊಡ್ಡಬಳ್ಳಾಪುರದ ಹೆಸರಿನ ಮೂಲ ಏನು…!?

ದೊಡ್ಡಬಳ್ಳಾಪುರ ಆಡಳಿತಾತ್ಮಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಒಂದು ಪ್ರಮುಖ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ಉತ್ತರ-ಪಶ್ಚಿಮಾಭಿಮುಖವಾಗಿ 40 ಕಿಲೋಮೀಟ‌ ದೂರದಲ್ಲಿದೆ. ಭೌಗೋಳಿಕವಾಗಿ 78,760 ಹೆಕ್ಟೇರ್ ಭೂಪದೇಶವನ್ನು ಹೊಂದಿದೆ. ದೊಡ್ಡಬಳ್ಳಾಪುರ ತಾಲ್ಲೂಕನ್ನು ದೊಡ್ಡಬೆಳವಂಗಲ, ಮಧುರೆ, ಸಾಸಲು, ತೂಬಗೆರೆ ಮತ್ತು ಕಸಬಾ ಎಂದು 5 ಹೋಬಳಿ ಕೇಂದ್ರಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಒಟ್ಟು 298 ಕಂದಾಯ ಗ್ರಾಮಗಳಿವೆ. ಇದು ಬಟಾಬಯಲಿನ ಪ್ರದೇಶ, ಅಂದರೆ ಈ ತಾಲೂಕು ಬಹುತೇಕ ಸಮತಟ್ಟಾದ ಭೂಮಿಯನ್ನು ಹೊಂದಿರುವುದರ ಜೊತೆಗೆ ಆನೇಕ ಬೆಟ್ಟಗುಡ್ಡಗಳನ್ನೂ ಹೊಂದಿದೆ. ಹೀಗಾಗಿ ಇಲ್ಲಿ ಐತಿಹಾಸಿಕ ಸ್ಥಳಗಳಲ್ಲದೆ ಆಕರ್ಷಕ ನೈಸರ್ಗಿಕ ತಾಣಗಳು, ಪೌರಾಣಿಕ ಹಿನ್ನೆಲೆಯುಳ್ಳ ತಾಣಗಳೂ ವ್ಯಾಪಕವಾಗಿ ಕಾಣಸಿಗುತ್ತವೆ. ಕಾವೇರಿ ನದಿಯ ಉಪನದಿಯಾದ ಆರ್ಕಾವತಿ ನದಿ ಈ ತಾಲ್ಲೂಕಿನಲ್ಲಿ ಪ್ರವಹಿಸುವ ಪ್ರಮುಖ ನದಿ, ತಾಲ್ಲೂಕು ಹಾಗೂ ಕಂದಾಯ ಉಪವಿಭಾಗವಾಗಿರುವ ದೊಡ್ಡಬಳ್ಳಾಪುರ ರಸ್ತೆ ಮತ್ತು ನೇರವಾದ ರೈಲು ಸಂಪರ್ಕಗಳನ್ನು ಹೊಂದಿದ್ದು, ರೇಷ್ಮೆ ಉದ್ಯಮಕ್ಕೆ ತೌರೂರಾಗಿದೆ. ಅರ್ಕಾವತಿ ನದಿ ದಂಡೆಯಲ್ಲಿರುವ ಈ ಪುರಾತನ ನಗರಕ್ಕೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಇಂದು ಹಲವು ಗ್ರಾಮಾಂತರ ಪ್ರದೇಶಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಲೇ, ದಶದಿಕ್ಕುಗಳಲ್ಲೂ ಬೆಳೆಯುತ್ತಿರುವ ನಗರವಾಗಿದೆ. ಹೀಗಾಗಿ ಇಂದು ದೊಡ್ಡಬಳ್ಳಾಪುರ ನಗರದ ಎಲ್ಲೆಯನ್ನು ಗುರುತಿಸುವುದು ನಗರಸಭೆಗೂ ಕಷ್ಟದ ಕೆಲಸ.

ದೊಡ್ಡಬಳ್ಳಾಪುರ ತಾಲ್ಲೂಕಿನ ಭೂಮೇಲ್ಮೈನಲ್ಲಿ ಎರಡು ಲಕ್ಷಣಗಳು ಪ್ರಧಾನವಾಗಿ ಎದ್ದುಕಾಣುತ್ತವೆ. ಪಶ್ಚಿಮಭಾಗ’ ಅಲ್ಪಸ್ವಲ್ಪ ಏರಿಳಿತಗಳಿಂದ ಕೂಡಿದ ಉನ್ನತಭಾಗ ಇಲ್ಲಿ ಹೆಬ್ಬಂಡೆಗಳು, ಶಿಲಾಚಾಚುಗಳು ಹೆಚ್ಚು ಸಾಂದ್ರವಾಗಿ ಕಂಡುಬರುತ್ತವೆ. ವಿಶೇಷವಾಗಿ ಸಾಸಲು ಹೋಬಳಿ, ದಕ್ಷಿಣಭಾಗ ಮಾತ್ರ ಸ್ವಲ್ಪ ಬಟಾಬಯಲಿನ ಪ್ರದೇಶ, ಇಲ್ಲಿನ ಹವಾಮಾನ ಆಹ್ಲಾದಕರ, ನಡುಬೇಸಿಗೆಯಲ್ಲೂ ನಗರದ ಸರಾಸರಿ ಉಷ್ಣತೆ 34° ಸೆಂ. ಚಳಿಗಾಲದಲ್ಲೂ ಅತ್ಯಂತ ಹಿತಕಾರಿ, ಸ್ವಲ್ಪ ಹೆಚ್ಚ ಕಡಿಮೆ ಬೆಂಗಳೂರಿನ ಹವಾಗುಣವೇ ಸರಿ. ವಾಯುಗುಣದಲ್ಲಿ ಬೆಂಗಳೂರಿನಂತೆ ದೊಡ್ಡಬಳ್ಳಾಪುರವೂ ಸಹ ಎಂದೂ ಆತಿರೇಕವನ್ನು ಅನುಭವಿಸಿಲ್ಲ. ಡಿಸೆಂಬರ್-ಜನವರಿ ತಿಂಗಳಲ್ಲಿ ವಾತಾವರಣ ತಿಳಿಯಾಗಿರುತ್ತದೆ. ಸೂರ್ಯರಶ್ಮಿ ಹಿತಕರವಾಗಿರುತ್ತದೆ. 

   “ದೊಡ್ಡಬಳ್ಳಾಪುರ'” ಎಂಬ ಹೆಸರಿನ ಮೂಲರೂಪ ನಮಗೆ 16ನೇ ಶತಮಾನದ ಒಂದು ಕನ್ನಡ ಶಾಸನದಲ್ಲಿ ದೊರೆಯುತ್ತದೆ. ಈ ಶಾಸನವು ದೊಡ್ಡಬಳ್ಳಾಪುರದ ಪಾಳೆಯಗಾರರ ಕಾಲಕ್ಕೆ ಸೇರಿದ್ದಾಗಿದ್ದು, ಅವರಿಂದಲೇ ನಿರ್ಮಾಣಗೊಂಡ ಖಿಲ್ಲೆ ಆದಿನಾರಾಯಣಸ್ವಾಮಿ ದೇವಾಲಯದಲ್ಲಿ ಲಭ್ಯವಾಗಿದೆ. ಕ್ರಿ.ಶ.1598ರ ಕಾಲಕ್ಕೆ ಸೇರಿದ ಈ ಶಾಸನದಲ್ಲಿ ‘ಬಲ್ಲಾಳಪುರಠಾನ್ಯ’ ಎಂಬ ಹೆಸರಿನ ಉಲ್ಲೇಖವಿದೆ. ಇದಕ್ಕೂ ಪೂರ್ವದಲ್ಲಿ ದೊಡ್ಡಬಳ್ಳಾಪುರದ ಹೆಸರನ್ನು ಪ್ರಸ್ತಾಪಿಸುವ ಯಾವೊಂದು ಶಾಸನವಾಗಲಿ, ಇನ್ನಿತರ ದಾಖಲೆಗಳಾಗಲಿ ದೊರೆತಿಲ್ಲ. ಹಾಗೆಂದು ಪಾಳೆಯಗಾರರಿಗೂ ಮುಂಚೆ ದೊಡ್ಡಬಳ್ಳಾಪುರವೆಂಬ ಊರೇ ಅಸ್ತಿತ್ವದಲ್ಲಿ ಇರಲಿಲ್ಲವೆಂದು ಭಾವಿಸುವಂತಿಲ್ಲ ಆಗ “ದೊಡ್ಡಬಳ್ಳಾಪುರ ಪಟ್ಟಣ” ಇರಲಿಲ್ಲ, ದೊಡ್ಡಬಳ್ಳಾಪುರ ಪಟ್ಟಣ ಮತ್ತು ಕೋಟೆಯ ರಚನೆ 16ನೇ ಶತಮಾನದಲ್ಲಾಯಿತು.

‘ಬಲ್ಲಾಳಪುರ’ ಎಂಬ ಮಾತೃಕೆ ಪಾಳೆಯಗಾರರಿಗೂ ಮುಂಚೆ ಬಳ್ಳಾಪುರದ ಒಡೆಯರಾಗಿದ್ದ ಹೊಯ್ಸಳ ದೊರೆ ‘ಬಲ್ಲಾಳನಿಂದಾಗಿ ಬಂದಿರಬಹುದೆಂಬುದು ಬಲವಾದ ಒಂದು ನಂಬಿಕೆ, ಬಳ್ಳಾಳ (ಬಲ್ಲಾಳ) ಎಂದರೆ ನಾಯಕ, ಪಾಳೆಯಗಾರ, ಜೈನನಾಯಕರ ಒಂದು ಬಿರುದು ಎಂಬ ಅರ್ಥಗಳಿವೆ, ಇದರಿಂದ ಹೊಯ್ಸಳ ದೊರೆ ‘ಬಲ್ಲಾಳನಿಂದಲೇ ಈ ಊರಿಗೆ ‘ಬಲ್ಲಾಳಪುರ’ ಎಂಬ ಹೆಸರು ಬಂದಿರಬಹುದು, ಇದಕ್ಕೆ ಪೂರಕವಾಗಿ ಈ ಪಟ್ಟಣದಲ್ಲಿ ಕ್ರಿಶ.1267ರ ಕಾಲಕ್ಕೆ ಸೇರಿದ ಹೊಯ್ಸಳರ ಶಿಲಾಶಾಸನವೊಂದು ಪತ್ತೆಯಾಗಿದೆ. ‘ಬಲ್ಲಾಳಪು‌ರ` ಎಂಬ ಹೆಸರೇ ಅಪಭ್ರಂಶಗೊಂಡು “ಬಳ್ಳಾಪುರ” ವಾಯಿತೆಂದು ಕಾಣುತ್ತದೆ, ಸಮೀಪದಲ್ಲೇ ಇನ್ನೊಂದು ಬಳ್ಳಾಪುರ(ಚಿಕ್ಕ)ವಿದ್ದುದರಿಂದ ಅನಂತರ ಇದಕ್ಕೆ ‘ದೊಡ್ಡ’ ಎಂಬ ವಿಶೇಷ ಸೇರ್ಪಡೆಯಾಗಿರಬೇಕು. 

  ಹೊಯ್ಸಳರ ದೊರೆ ವಿಷ್ಣುವರ್ಧನನ ಅಣ್ಣ ದೊಡ್ಡಬಲ್ಲಾಳ ಮತ್ತು ವಿಷ್ಣುವರ್ಧನ ಹಾಗೂ ಶಾಂತಲೆಯ ಮಗ ಚಿಕ್ಕಬಲ್ಲಾಳ ಇವರುಗಳೂ ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಇವರಿಬ್ಬರೂ ಅಂತಃಕಲಹದಲ್ಲಿ ಸಾವನ್ನಪ್ಪಿದ್ದರಿಂದ ಅವರ ಜ್ಞಾಪಕಾರ್ಥವಾಗಿ ನಿರ್ಮಿಸಿದ ಊರುಗಳೇ ದೊಡ್ಡಬಲ್ಲಾಳಪುರ ಮತ್ತು ಚಿಕ್ಕಬಲ್ಲಾಳಪುರ, ಇವೇ ಮುಂದೆ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಆಗಿವೆ ಎಂಬ ಇನ್ನೊಂದು ಕಥೆಯಿದೆ, ಆದರೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಈವರೆಗೆ ಲಭಿಸಿರುವ ಹೊಯ್ಸಳರ ಶಾಸನಗಳೆಲ್ಲಾ ಈ ನಿಟ್ಟಿನಲ್ಲಿ ಮೌನದಿಂದಿವೆ. ಆದರೆ ಹೊಯ್ಸಳರ ಕಾಲದಲ್ಲಿ ದೊಡ್ಡಬಳ್ಳಾಪುರವು ಒಂದು ಗಣ್ಯ ಪೇಟೆಯಾಗಿದ್ದು, ಎಲಹಂಕ ನಾಡಿಗೆ ಸೇರಿತ್ತೆಂಬುದನ್ನು ಸ್ಪಷ್ಟಪಡಿಸುತ್ತವೆ. 

  ಯಲಹಂಕ ನಾಡಪ್ರಭು ಇಮ್ಮಡಿ ಕೆಂಪೇಗೌಡನು ಕ್ರಿ.ಶ.1628 ಫೆಬ್ರವರಿ 7ನೇ ತಾರೀಖಿಗೆ ಸೇರಿದ ಬೆಂಗಳೂರಿನ ಆವಿನ್ಯೂ ರಸ್ತೆಯ ಬಳ್ಳಾಪುರ ಪೇಟೆಯಲ್ಲಿರುವ ರಂಗನಾಥಸ್ವಾಮಿ ದೇವಾಲಯದಲ್ಲಿನ ತೆಲುಗು ಭಾಷೆಯ, ಆದರೆ ಕನ್ನಡ ಲಿಪಿಯುಳ್ಳ ಶಿಲಾಶಾಸನದಲ್ಲಿ ಬೆಂಗಳೂರು, ಗೂಳೂರು, ಕೋಳಾಲ, ತಾಡಪತ್ರಿ, ಕೊತ್ತಕೋಟ(ಹೊಸಕೋಟೆ) ಮುಂತಾದ ಊರುಗಳ ಜೊತೆಗೆ ‘ದೊಡ್ಡಬಳ್ಳಾಪುರಂ’ ಎಂಬ ಹೆಸರೂ ಉಲ್ಲೇಖಗೊಂಡಿದೆ. ಇದರಿಂದಾಗಿ ಕ್ರಿ.ಶ.1628ರ ವೇಳೆಗಾಗಲೆ ಬಲ್ಲಾಳಪುರವನ್ನು ದೊಡ್ಡಬಳಾಪುರವೆಂದು ಕರೆಯಲಾಗುತ್ತಿತ್ತೆಂದು ಸ್ಪಷ್ಟವಾಗುತ್ತದೆ,.

ಮೊಗಲರ ಆಡಳಿತಾವಧಿಯಲ್ಲಿ ದೊಡ್ಡಬಳ್ಳಾಪುರದ ಟಂಕಸಾಲೆಯಲ್ಲಿ ಅಚ್ಚಾದ ನಾಣ್ಯಗಳ ಮೇಲೆ ‘ಬಲಾ?’ ಎಂದಷ್ಟೇ ಮುದ್ರಿಸಲಾಗಿದೆ. 19ನೇ ಶತಮಾನದ ಆರಂಭಕಾಲಕ್ಕೆ ಸೇರಿದ ತೃಣಪುರದ ರಾಘವೇಂದ್ರ ಕವಿಯು ತನ್ನ “ಸಾರಸ್ವತ ಪರಿಣಯ” ಎಂಬ ಉದ್ಘ್ರಂಥದಲ್ಲಿ ದೊಡ್ಡಬಳ್ಳಾಪುರವನ್ನು “ಬೃಹತ್‌ ಪ್ರಸ್ಥಾಖ್ಯಪುರ” (ಬೃಹತ್ = ದೊಡ್ಡ, ಪ್ರಸ್ಥ = ಬಳ್ಳ) ಎಂದೇ ಸಂಬೋಧಿಸಿರುವನು. ಇದೇ ಕಾಲಕ್ಕೆ ಭೇಟಿ ನೀಡಿದ್ದ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ ಫ್ರಾನ್ಸಿಸ್ ಬುಕಾನನ್ ತನ್ನ ವರದಿಯಲ್ಲಿ (ಕ್ರಿ.ಶ.1800) ದೊಡ್ಡಬಳ್ಳಾಪುರವನ್ನು ಮುಸಲ್ಮಾನ್ ಭಾಷೆಯಲ್ಲಿ “ಬಡಾಬಲಾಪುರ್” ಎಂದು, ತೆಲುಗಿನಲ್ಲಿ “ಪೆದ್ದಬಲಾಪುರ್” ಎಂದು ಮತ್ತು ಕನ್ನಡದಲ್ಲಿ ‘ದೊಡ್ಡಬಳ್ಳಾಪುರ್’ ಎಂದು ಕರೆಯುತ್ತಿದ್ದುದನ್ನು ದಾಖಲಿಸಿದ್ದಾನೆ. 

  ಇಲ್ಲಿನ ಸ್ಥಳನಾಮ ನಿಷ್ಪತ್ತಿಗೆ ಸಂಬಂಧಿಸಿದಂತೆ ‘ಬಳ್ಳ’ ಎಂಬುದಕ್ಕೆ ಅಳತೆಯ ಒಂದು ಪ್ರಮಾಣ. ದ್ರವ್ಯದ ಒಂದು ಅಳತೆ. ಎಂಟು ಕುಡುತೆ. ಕಾಲು ಕೊಳಗ ಇತ್ಯಾದಿ ಅರ್ಥಗಳು ಅರ್ಥಕೋಶಗಳಲ್ಲಿವೆ. ಸ್ಥಳೀಯ ಐತಿಹ್ಯದ ಪ್ರಕಾರ ಪ್ರತಿನಿತ್ಯವೂ ಹುತ್ತದ ಮೇಲೆ ಹಬವೊಂದು ಬಂದು ಒಂದು ಬಳ್ಳ ಹಾಲು” ಕರೆಯುತ್ತಿದ್ದುದರಿಂದ ಈ ಊರಿಗೆ ‘ಬಳ್ಳಾಪುರ’ವೆಂದು ನಾಮಕರಣ ಮಾಡಲಾಯಿತೆಂದು ತಿಳಿಯುತ್ತದೆ. ಮತ್ತೆ ಕೆಲವು ವಿದ್ವಾಂಸರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಹೊಯ್ಸಳರ ಕಾಲಕ್ಕಿಂತ ಹಿಂದಿನಿಂದಲೂ ಇದ್ದ ಭಲ್ಲೆ +ಆಳು = ಭಲ್ಲೆಯಾಳು ಅಂದರೆ ಈಟಿಯನ್ನು ಹಿಡಿದ ದೇವ ಕಾರ್ತಿಕೇಯ, ಷಣ್ಮುಖ, ಮುರುಗ, ಸುಬ್ರಹ್ಮಣ್ಯಸ್ವಾಮಿ ಸನ್ನಿಧಿಯಿಂದಾಗಿ ಈ ಊರಿಗೆ ‘ಭಲ್ಲೆಯಾಳಪುರ’ವೆಂಬ ಹೆಸರು ಬಂದಿರಬಹುದೆಂದು ತರ್ಕಿಸುತ್ತಾರೆ. ಅವರ ಈ ತರ್ಕಕ್ಕೆ ಮುಖ್ಯ ಕಾರಣ ಪುರಾಣಪ್ರಸಿದ್ಧ ಪುರಾತನ ಧಾರ್ಮಿಕ ಕ್ಷೇತ್ರವಾದ ಶ್ರೀಪಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯವು ದೊಡ್ಡಬಳ್ಳಾಪುರಕ್ಕೆ ತಾಕಿದಂತೆಯೇ ಕೇವಲ 12 ಕಿ.ಮೀ. ದೂರದಲ್ಲಿರುವುದು. ಹೊಯ್ಸಳರ ಕಾಲಕ್ಕಿಂತಲೂ ಮೊದಲಿನಿಂದ ಇದ್ದ ‘ಭಲ್ಲೆಯಾಳಪುರ’ವೆಂಬುದು ಕ್ರಮೇಣ ಬಲ್ಲಾಳಪುರ’ವಾಗಿ ಕಡೆಗೆ ಅದೇ ‘ಬಳ್ಳಾಪುರ’ ಆಗಿರಬೇಕೆಂಬುದು ಅವರ ತರ್ಕ, ಅಂದರೆ ಇವರ ಪ್ರಕಾರ ದೊಡ್ಡಬಳ್ಳಾಪುರದ ಅಸ್ತಿತ್ವ ಹೊಯ್ಸಳರಿಗಿಂತ ಹಿಂದೆಯೇ ಆಗಿದೆ, ಅಲ್ಲದೆ ಘಾಟಿ ಕ್ಷೇತ್ರವೂ ಪುರಾತನ ಸನ್ನಿಧಿಯೆನ್ನುವುದಕ್ಕೆ ಅನೇಕ ಆಧಾರಗಳು ದೊರಕುತ್ತವೆ. 

  ಚಿಕ್ಕಬಳ್ಳಾಪುರದಿಂದ ಪ್ರತ್ಯೇಕಿಸಲು ಈ ಊರನ್ನು ದೊಡ್ಡಬಳ್ಳಾಪುರವೆಂದು ಕರೆಯಲಾಯಿತು ಎಂದು ಹೇಳಲಾಗುತ್ತಿದೆ. ಈ ಊರಲ್ಲಿ ದೊರೆತ ಕ್ರಿ.ಶ.1598ರ ಶಾಸನದ ಪ್ರಕಾರ ಈ ಊರನ್ನು ‘ಬಲ್ಲಾಳಪುರಠಾಣ್ಯ’ ಎಂದು ಉಲ್ಲೇಖಿಸಲಾಗಿರುವ ಕಾರಣ ಹೊಯ್ಸಳ ದೊರೆ ಬಲ್ಲಾಳನಿಂದಲೇ ಈ ಹೆಸರು ರೂಢಿಗೆ ಬಂದಿರಬೇಕು. ಮೈ.ನಾ. ಶರ್ಮಾರವರು ಹೇಳುವಂತೆ “ಹೊಯ್ಸಳ ದೊರೆ ಬಲ್ಲಾಳನಿಂದಲೇ ಮೊದಲಿಗೆ ದೊಡ್ಡಬಲ್ಲಾಳಪುರವು ನಿರ್ಮಾಣವಾಗಿದೆ. ನಂತರ ಅವನಿಂದಲೇ ಚಿಕ್ಕಬಲ್ಲಾಳಪುರವು ನಿರ್ಮಾಣವಾಗಿರಬಹುದು. ಹೀಗಾಗಿ ಬಲ್ಲಾಳನಿಂದ ಈ ಮೊದಲು ನಿರ್ಮಾಣಗೊಂಡಿದ್ದ ಪಟ್ಟಣಕ್ಕೆ ‘ದೊಡ್ಡಬಲ್ಲಾಳರ’ವೆಂದು, ನಂತರ ನಿರ್ಮಾಣಗೊಂಡಿರುವ ಪಟ್ಟಣಕ್ಕೆ ‘ಚಿಕ್ಕಬಲ್ಲಾಳಪುರ’ವೆಂದು ಕರೆದಿರಬಹುದು”

ಮುಖಪುಟದ ಚಿತ್ರ 1888 ರಲ್ಲಿನ ಕಲಾಸಿಪಾಳ್ಯದ ಶ್ರೀಆದಿನಾರಾಯಣಸ್ವಾಮಿ ದೇವಾಲಯದ ನೋಟ

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಅಂಬೇಡ್ಕರ್ ರಾಷ್ಟ್ರೀಯ ನಾಯಕರೇ ಅಲ್ಲ : ಗುಜರಾತ್ ಬಿಜೆಪಿ ಸರ್ಕಾರ 

ಆತ್ಮೀಯರೇ,  ಇದ್ದಕ್ಕಿದ್ದಂತೆ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅಪ್ಪಿಕೊಳ್ಳಲು ಹೊರಟಿರುವ ಸಂಘಿಗಳು ಏನೇ ನಾಟಕವಾಡಿದರೂ….  ಅವರ ಸಂವಿಧಾನ ದ್ವೇಷ ಮತ್ತು ಅಂಬೇಡ್ಕರ್ ದ್ವೇಷವನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ….   ಅದರ ಮತ್ತೊಂದು ಉದಾಹರಣೆ ಇಲ್ಲಿದೆ…   ಈಗ ದೇಶಾದ್ಯಂತ ದಲಿತ ಬಂಧು ಎಂದು ಪೋಸು ಹೊಡೆಯುತ್ತಿರುವ…

Leave a Reply

Your email address will not be published. Required fields are marked *