ರಾಮನಗರ: ಕನ್ನಡ ಮಾತನಾಡಲು ಹಿಂಜರಿಯುವ ಮತ್ತು ಹಿಂದಿ ಮಾತನಾಡುವಂತೆ ದರ್ಪ ತೋರುವ ಬ್ಯಾಂಕ್ ಅಧಿಕಾರಿಗಳಿಗೆ ಕನ್ನಡ ಪಾಠ ಮಾಡುವ ಘಟನೆಗಳು ಆಗಾಗ ವರದಿಯಾಗುತ್ತಿವೆ.ಇದೀಗ ಹಿಂದಿಯಲ್ಲಿ ಮಾತನಾಡಿ ಎಂದ ಟೋಲ್ ಪ್ಲಾಝಾ ಮ್ಯಾನೇಜರ್ ಒಬ್ಬರಿಗೆ ವ್ಯಕ್ತಿಯೊಬ್ಬರು ಕ್ಲಾಸ್ ತೆಗೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಕಣಿಮಿಣಿಕೆಯಲ್ಲಿ ನಡೆದಿದೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಸೈಯ್ಯದ್ ವಸೀಂ ಎಂಬವರೇ ಟೋಲ್ ಪ್ಲಾಝಾ ಮ್ಯಾನೇಜರ್ ಗೆ ಕ್ಲಾಸ್ ತೆಗೆದುಕೊಂಡವರು. ಅವರ ಈ ನಡೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಟೋಲ್ ದರ ಹೆಚ್ಚಾದದ್ದು ಡಾ. ಸೈಯ್ಯದ್ ಅವರಿಗೆ ತಿಳಿದಿರಲಿಲ್ಲ. ಈ ಬಗ್ಗೆ ಅವರು ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಬಳಿಕ ಟೋಲ್ ಗೇಟ್ ಮ್ಯಾನೇಜರ್ ಅನ್ನು ಕೇಳಿದ್ದಕ್ಕೆ ಹಿಂದಿಯಲ್ಲಿ ಮಾತನಾಡಿ ಎಂದು ಹೇಳಿದರು. ಇದರಿಂದ ಸಿಟ್ಟಿಗೆದ್ದ ಡಾ.ಸಯ್ಯದ್ ವಸೀಂ ಅವರು ಕರ್ನಾಟಕದಲ್ಲಿ ಕನ್ನಡ ಮಾತಾಡಿ ಎಂದು ಮ್ಯಾನೇಜರ್ ಗೆ ಪಾಠ ಮಾಡಿದರು.
ನೀವು ಕನ್ನಡ ಕಲಿಬೇಕು, ನಾನು ಕನ್ನಡದಲ್ಲೇ ಪ್ರಶ್ನೆ ಕೇಳೊದು. ನಿಮಗೆ ಕನ್ನಡ ಬರಲ್ಲ ಅಂದ್ರೆ ಕನ್ನಡ ಬರುವವರ ಹತ್ತಿರ ಕೇಳಿ ಹೇಳಿ ಎಂದು ಡಾ. ವಸೀಂ ತರಾಟೆಗೆ ತೆಗೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೊದಲ ಬಾರಿ ಈ ರಸ್ತೆಯಲ್ಲಿ ಬರ್ತಿದ್ದೇನೆ. ನನಗೆ ಟೋಲ್ ಚಾರ್ಜ್ ಜಾಸ್ತಿ ಆಗಿರುವುದು ಗೊತ್ತಿರಲಿಲ್ಲ. ಆದ್ರ ಜೊತೆಗೆ ನಾನು ಇಲ್ಲಿಗೆ ಮೂರು ಟೋಲ್ ದಾಟಿ ಬಂದಿದ್ದೇನೆ. ನಾನು ಮನೆಯಲ್ಲಿಯೇ ಫಾಸ್ಟ್ ಟ್ಯಾಗ್ ಬಿಟ್ಟು ಬಂದಿದ್ದೆ. ಮೂರು ಟೋಲ್ ನಲ್ಲೂ ಪಾಸ್ಟ್ ಟೇಗ್ ನಂಬರ್ ಹೇಳಿದಕ್ಕೆ ಹಣ ಕಟ್ ಮಾಡಿಕೊಂಡರು. ಇಲ್ಲಿ ಆ ರೀತಿ ನಮ್ಮ ಟೋಲ್ ನಲ್ಲಿ ಹಣ ಕಟ್ ಮಾಡಿಕೊಳ್ಳಲು ಆಗಲ್ಲ ಅಂತಿದ್ದಾರೆ. ಈ ದುಪ್ಪಟ್ಟು ಹಣ ನನ್ನಿಂದ ಪಡೆದಿದ್ದಾರೆ ಎಂದು ದೂರಿದರು.
ಈ ಬಗ್ಗೆ ಕೇಳಿದರೆ ಇಲ್ಲಿನ ಅಧಿಕಾರಿಗಳು ಆವಾಜ್ ಹಾಕ್ತಿದ್ದಾರೆ. ಜನರಿಗೆ ಇವರು ಅನ್ಯಾಯ ಮಾಡ್ತಿದ್ದಾರೆ. ನಾನು ಡಾಕ್ಟರ್ ಆಗಿದ್ದು ನನಗೇ ಈ ರೀತಿ ಮಾಡ್ತಾರೆ. 165 ಇರುವ ಚಾರ್ಜ್ ಗೆ 330 ರೂಪಾಯಿ ಚಾರ್ಜ್ ಮಾಡಿದ್ದಾರೆ. ಸರ್ಕಾರ ಇದನ್ನು ಗಮನಿಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬೆಂಗಳೂರು – ಮೈಸೂರು ದಶಪತ ಹೆದ್ದಾರಿ ಟೋಲ್ ದರ ಹೆಚ್ಚಳ ವಿರೋಧಿಸಿ ಕನ್ನಡಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಕಣಿಮಿಣಿಕೆ ಟೋಲ್ ಬಳಿ ಪ್ರತಿಭಟನೆ ನಡೆಸಿದ ಸಂಘಟನೆಗಳು ಒಂದು ವೇಳೆ ವಾರದೊಳಗೆ ಟೋಲ್ ದರ ಪರಿಷ್ಕರಣೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಈ ಸಮಯದಲ್ಲಿ ಟೋಲ್ ದರ ಹೆಚ್ಚು ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.