ಕಾಲೇಜು ವಿದ್ಯಾರ್ಥಿನಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ತೀರ್ಥಹಳ್ಳಿ ತಾಲೂಕು ಅಧ್ಯಕ್ಷನನ್ನು ಬಂಧಿಸಬೇಕೆಂದು ಎನ್‌ಎಸ್‌ಯುಐ ಒತ್ತಾಯಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಎಬಿವಿಪಿ ಅಧ್ಯಕ್ಷ ಪ್ರತಿಗೌಡ ಎಂಬಾತ ಯುವತಿಯೊಬ್ಬಳಿಗೆ ವಿಡಿಯೋ ಕಾಲ್ ಮಾಡಿ ನಗ್ನಳಾಗುವಂತೆ ಒತ್ತಾಯಿಸಿದ್ದಾರೆ. ಅದನ್ನು ವಿಡಿಯೋ ಮಾಡಿ ಹಣ ನೀಡುವಂತೆ ಬ್ಲಾಕ್ ಮಾಡಿದ್ದಾನೆ. ಹಣ ಕೊಡದಿದ್ದಾಗ ವಾಟ್ಸಾಪ್ ಗುಂಪುಗಳಲ್ಲಿ ವಿಡಿಯೋ ಷೇರ್ ಮಾಡಿ ವಿಕೃತಿ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಹಿಂದೆಯೂ ಸಹ ಎಬಿವಿಪಿ ವಿದ್ಯಾರ್ಥಿನಿಯರನ್ನೇ ಮರಳು ಮಾಡಿ ಈ ರೀತಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ವಿಡಿಯೋ ಚಿತ್ರೀಕರಿಸಿ ಬ್ಲಾಕ್‌ಮೇಲ್ ಮಾಡಿ ಹಲವರಿಂದ ಹಣ ಸಹ ವಸೂಲಿ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ ಜೂನ್ 16ರಂದು ಎರಡು ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಡಿವೈಎಸ್‌ಪಿಯವರಿಗೆ ದೂರು ನೀಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದೆ.
“ಎಬಿವಿಪಿ ತಾಲೂಕು ಅಧ್ಯಕ್ಷ ಎಸಗಿರುವ ಕೃತ್ಯವು ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ. ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಆರೋಪಿಯನ್ನು ಬಂಧಿಸಬೇಕು. ಪ್ರಭಾವಿಗಳ ಒತ್ತಡಕ್ಕೆ ಪೊಲೀಸರು ಮಣಿಯಬಾರದು” ಎಂದು ಎನ್‌ಎಸ್‌ಯುಐ ಮನವಿ ಮಾಡಿದೆ.
ಈ ಪ್ರತಿಗೌಡ ತನ್ನ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಕಠೋರ ಹಿಂದು, ಗಾಂಚಾಲಿ, ಧರ್ಮೋ ರಕ್ಷತಿ ರಕ್ಷಿತಃ, ಒಕ್ಕಲಿಗ, ಎಬಿವಿಪಿಯನ್ ಎಂದು ಬರೆದುಕೊಂಡಿರುವುದು ಕಂಡುಬಂದಿದೆ. ಎಬಿವಿಪಿಯ ತಾಲ್ಲೂಕು ಅಧ್ಯಕ್ಷನಾಗಿದ್ದು ಕೊಂಡು ಉಳಿದವರಿಗೆಲ್ಲ ನಮ್ಮ ಸಂಸ್ಕೃತಿ, ಪರಂಪರೆ ಎಂದು ಭಾಷಣ ಬಿಗಿಯುವ ಈತ ತಾನು ಮಾತ್ರ ಹೆಣ್ಮಕ್ಕಳ ಮಾನ ತೆಗೆಯುವ ವಿಕೃತ ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಅದಕ್ಕಾಗಿ ಸಂಘಟನೆಯಲ್ಲಿ ತನಗೆ ಸಿಕ್ಕ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪೊಲಿಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗೆ ಬುದ್ದಿ ಕಲಿಸಬೇಕಿದೆ.