ಬಿರಿಯಾನಿ ಜಗಳ: ಕರಸೇ ಅಧ್ಯಕ್ಷ ಬಂಧನಕೋಡಿಗೆಹಳ್ಳಿ ಠಾಣೆಯಲ್ಲಿ ರಮೇಶ್ ಗೌಡ ರಂಪಾಟ: ಎರಡು ಎಫ್‌ಐಆರ್

ಬೆಂಗಳೂರು: ಬಿರಿಯಾನಿ ನೀಡಲಿಲ್ಲವೆಂಬ ಕಾರಣಕ್ಕೆ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ರಕ್ಷಣೆಗೆ ಬಂದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಠಾಣೆಯಲ್ಲಿ ರಂಪಾಟ ಮಾಡಿದ್ದ ಆರೋಪದಡಿ ಕರ್ನಾಟಕ ರಕ್ಷಣಾ ಸೇನೆ (ಕರಸೇ) ಸಂಸ್ಥಾಪಕ ಅಧ್ಯಕ್ಷ ಟಿ. ರಮೇಶ್‌ ಗೌಡ ಅವರನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೂನ್ 10ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಹೋಟೆಲ್ ಸಹಾಯಕ ವ್ಯವಸ್ಥಾಪಕ ವಿದ್ಯಾನಂದ್ ಹಾಗೂ ಪಿಎಸ್‌ಐ ಎನ್‌.ವಿ. ಕೌಶಿಕ್ ಪ್ರತ್ಯೇಕ ದೂರು ನೀಡಿದ್ದಾರೆ. ಎರಡು ಎಫ್‌ಐಆರ್ ದಾಖಲಿಸಿಕೊಂಡು, ರಮೇಶ್‌ ಗೌಡನನ್ನು ಬಂಧಿಸಲಾಗಿದೆ. ಕೃತ್ಯದ ವೇಳೆ ಆರೋಪಿ ಜೊತೆಗಿದ್ದ ಚಂದನ್ ರೆಡ್ಡಿ ಹಾಗೂ ಸುರೇಶ್ ರೆಡ್ಡಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಮೇಶ್ ಹಾಗೂ ಬೆಂಬಲಿಗರು ಸಹಕಾರ ನಗರದಲ್ಲಿರುವ ಸ್ಟಾರ್ ಬಿರಿಯಾನಿ ಹೋಟೆಲ್‌ಗೆ ರಾತ್ರಿ ಹೋಗಿದ್ದರು. ಬಿರಿಯಾನಿ ಕೊಡುವಂತೆ ಹೇಳಿದ್ದರು. ಬಿರಿಯಾನಿ ಖಾಲಿ ಆಗಿರುವುದಾಗಿ ವಿದ್ಯಾನಂದ್ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ರಮೇಶ್, ‘ನಾನು ಕರ್ನಾಟಕ ರಕ್ಷಣಾ ಸೇನೆಯ ಅಧ್ಯಕ್ಷ. ನನಗೇ ಬಿರಿಯಾನಿ ಇಲ್ಲವೇ?’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಹೋಟೆಲ್ ಫಲಕ ಹಾಗೂ ಪೀಠೋಪಕರಣ ಧ್ವಂಸ ಮಾಡಿದ್ದ. ‘ಹೋಟೆಲ್‌ನಲ್ಲಿರುವ ಎಲ್ಲರನ್ನೂ ಸುಮ್ಮನೇ ಬಿಡುವುದಿಲ್ಲ’ ಎಂದು ಜೀವ ಬೆದರಿಕೆಯೊಡ್ಡಿದ್ದ’ ಎಂದರು.

‘ಗಲಾಟೆ ಮಾಹಿತಿ ತಿಳಿದು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಗಲಾಟೆ ಮಾಡದಂತೆ ರಮೇಶ್‌ಗೆ ತಾಕೀತು ಮಾಡಿದ್ದರು. ಸಿಬ್ಬಂದಿ ವಿರುದ್ಧವೂ ಜಗಳ ತೆಗೆದಿದ್ದ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗಸ್ತಿನಲ್ಲಿದ್ದ ಪಿಎಸ್‌ಐ ಕೌಶಿಕ್ ಸಹ ಸ್ಥಳಕ್ಕೆ ಹೋಗಿದ್ದರು. ಅವರ ಮೇಲೂ ಆರೋಪಿ ಹರಿಹಾಯ್ದಿದ್ದ’ ಎಂದು ಪೊಲೀಸರು ಹೇಳಿದರು.

ಠಾಣೆಯಲ್ಲಿ ರಂಪಾಟ: ‘ರಮೇಶ್‌ನನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಹೊಯ್ಸಳ ವಾಹನದಲ್ಲಿ ಕೂರಿಸಿದ್ದರು. ಅದೇ ಸಂದರ್ಭದಲ್ಲಿ ಆರೋಪಿ, ಪಿಎಸ್‌ಐ ಸಮವಸ್ತ್ರ ಹಿಡಿದು ಎಳೆದಾಡಿದ್ದ. ಠಾಣೆಗೆ ಹೋಗುತ್ತಿದ್ದಂತೆ, ನೆಲದ ಮೇಲೆ ಮಲಗಿ ಉರುಳಾಡಿ ರಂಪಾಟ ಮಾಡಿದ್ದ’ ಎಂದು ಪೊಲೀಸರು ತಿಳಿಸಿದರು.

‘ಪಿಎಸ್‌ಐ ಜೊತೆ ಠಾಣೆಯಲ್ಲೂ ಜಗಳ ತೆಗೆದಿದ್ದ ಆರೋಪಿ, ‘ನಿನ್ನನ್ನು ಸುಮ್ಮನೇ ಬಿಡುವುದಿಲ್ಲ. ನಾಳೆಯೇ ಠಾಣೆಯಿಂದ ವರ್ಗಾವಣೆ ಮಾಡಿಸುತ್ತೇನೆ’ ಎಂದು ನಿಂದಿಸಿದ್ದ. ಪಿಎಸ್‌ಐ ಹಾಗೂ ಠಾಣೆಯಲ್ಲಿದ್ದ ಎಲ್ಲರ ಕರ್ತವ್ಯಕ್ಕೂ ಆರೋಪಿ ಅಡ್ಡಿಪಡಿಸಿದ್ದ’ ಎಂದು ಪೊಲೀಸರು ಹೇಳಿದರು.

Related Posts

ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್

ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…

ಪುಷ್ಪ 2 ಚಿತ್ರ ಬಾಯ್ ಕಟ್ ಗೆ ಕರವೆ ಕರೆ : ಶಂಕರ್ ಗೌಡ

ಬೆಂಗಳೂರು: ಪುಷ್ಪ 2 ಚಿತ್ರವು ಇದೆ ತಿಂಗಳ 05 ನೇ ತಾರೀಖು ಬಿಡುಗಡೆಗೊಳ್ಳುಲ್ಲು ಸಜ್ಜಾಗಿದ್ದು ಚಿತ್ರಕ್ಕೆ ಈಗ ಬಾಯ್ ಕಟ್ ಅಭಿಯಾನದ ಬಿಸಿ ಮುಟ್ಟಿದೆ. ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮ ಕನ್ನಡ ಚಿತ್ರಗಳಿಗೆ ಹೆಚ್ಚು ಚಿತ್ರಮಂದಿರಗಳನ್ನು ಕೊಡಬೇಕು ಎಂದು ತಿಳಿಸಿದ್ದಾರೆ. ಹಾಗೇಯೆ ಪುಷ್ಪ…

Leave a Reply

Your email address will not be published. Required fields are marked *