ಚಂಡೀಗಡ: ಕರ್ನಾಟಕದ ಉಚಿತ ಅಕ್ಕಿ ವಿತರಣೆ ಯೋಜನೆಗೆ ಅಕ್ಕಿ ನೀಡಲು ಪಂಜಾಬ್ ನ ಆಮ್ ಆದ್ಮಿ ಪಾರ್ಟಿ (ಆಪ್) ಸರಕಾರ ಮುಂದೆ ಬಂದಿದೆ. ಭಾರತೀಯ ಆಹಾರ ನಿಗಮವು ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ನಿಲ್ಲಿಸಿದ ಬಳಿಕ ಕರ್ನಾಕಟದ ನೆರವಿಗೆ ಪಂಜಾಬ್ ಧಾವಿಸಿದೆ.
‘ಅನ್ನ ಭಾಗ್ಯ ಯೋಜನೆ’ಯಡಿ ಜನರಿಗೆ ವಿತರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು 2.28 ಲಕ್ಷ ಟನ್ ಅಕ್ಕಿ ಪೂರೈಸುವಂತೆ ನಿಗಮವನ್ನು ಕೋರಿತ್ತು.
ಈ ಯೋಜನೆಯನ್ವಯ, ರಾಜ್ಯ ಸರಕಾರವು ಬಡತನ ರೇಖೆಯ ಕೆಳಗಿನ ಕುಟುಂಬಗಳ ಪ್ರತಿ ಸದಸ್ಯರಿಗೆ ನೀಡುವ ಉಚಿತ ಅಕ್ಕಿಯನ್ನು ಈಗಿನ 5 ಕೆಜಿಯಿಂದ 10 ಕೆಜಿಗೆ ಏರಿಸಿದೆ. ಇದು ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳ ಪೈಕಿ ಒಂದಾಗಿದೆ. ಜುಲೈ 1ರಿಂದ ಹೆಚ್ಚುವರಿ ಅಕ್ಕಿ ನೀಡಲು ರಾಜ್ಯ ಸರಕಾರ ಉದ್ದೇಶಿಸಿದೆ.
ಅಕ್ಕಿಯನ್ನು ಪೂರೈಸಲು ನಿಗಮವು ಜೂನ್ 12ರಂದು ಒಪ್ಪಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಬಳಿಕ ಕೇಂದ್ರ ಸರಕಾರವು ಸೂಚನೆಯೊಂದನ್ನು ಹೊರಡಿಸಿ, ನಿಗಮದಿಂದ ರಾಜ್ಯ ಸರಕಾರಗಳಿಗೆ ಗೋಧಿ ಮತ್ತು ಅಕ್ಕಿಯನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಆದೇಶಿಸಿತು.
ಅಂದಿನಿಂದ ಛತ್ತೀಸ್ ಗಡ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಅಕ್ಕಿ ಖರೀದಿಸಲು ಕರ್ನಾಟಕ ಸರಕಾರ ಯತ್ನಿಸುತ್ತಿದೆ.
ಸೋಮವಾರ, ರಾಜ್ಯದ ಅಕ್ಕಿ ಕೊರತೆ ಸಮಸ್ಯೆಯ ಪರಿಹಾರಕ್ಕೆ ನೆರವು ನೀಡಲು ತನ್ನ ಪಂಜಾಬ್ ಸರಕಾರ ಸಿದ್ಧವಿದೆ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ ಹೇಳಿದೆ.
ಈ ವಿಷಯದಲ್ಲಿ ಸಹಾಯ ಮಾಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಿದ್ದರಾಮಯ್ಯರಿಗೆ ಫೋನ್ ನಲ್ಲಿ ಭರವಸೆ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕದ ಉಸ್ತುವಾರಿ ಪೃಥ್ವಿ ರೆಡ್ಡಿ ಹೇಳಿದ್ದಾರೆ.