ರಾಜಸ್ಥಾನ: ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ದಲಿತ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಆಕೆಯ ಶವ ಮಂಗಳವಾರ ಜಿಲ್ಲೆಯ ಖಜುವಾಲಾ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಮಹಾನಿರೀಕ್ಷಕ ಓಂ ಪ್ರಕಾಶ್ ಮಾತನಾಡಿ, ”ಖಜುವಾಲಾ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳಾದ ಮನೋಜ್ ಕುಮಾರ್ ಮತ್ತು ಭಾಗೀರಥ್ ಸೇರಿದಂತೆ ಮೂವರು ವ್ಯಕ್ತಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆ ಇಬ್ಬರೂ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
ಪ್ರಮುಖ ಆರೋಪಿ ಎನ್ನಲಾದ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪ್ರಮುಖ ಆರೋಪಿ ವ್ಯಕ್ತಿ ಮತ್ತು ಮಹಿಳೆ ಪರಸ್ಪರ ಪರಿಚಯಸ್ಥರು ಎಂದು ಕಾಲ್ ರೆಕಾರ್ಡ್ಸ್‌ನಿಂದ ತಿಳಿದುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೃತದೇಹದ ಮರಣೋತ್ತರ ಪರೀಕ್ಷೆಗೆ ಅನುಮತಿ ನಿರಾಕರಿಸಿರುವ ಮಹಿಳೆಯ ಸಂಬಂಧಿಕರು, ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಮರಣೋತ್ತರ ಪರೀಕ್ಷೆಗೆ ನಡೆಸಲು ಅನುಮತಿ ನೀಡುವಂತೆ ಕುಟುಂಬದವರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತೇಜಸ್ವನಿ ಗೌತಮ್ ತಿಳಿಸಿದ್ದಾರೆ.
ರಾಜಸ್ಥಾನದ ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್ ಅವರು ಟ್ವೀಟ್ ಮಾಡಿದ್ದು, ”ಆರೋಪಿ ಕಾನ್‌ಸ್ಟೆಬಲ್‌ಗಳನ್ನು ಇನ್ನೂ ಬಂಧಿಸದಿರುವುದು ದುರದೃಷ್ಟಕರ ಸಂಗತಿ” ಎಂದಿದ್ದಾರೆ.
”ಪ್ರಕ್ರಿಯೆಯ ಹೆಸರಿನಲ್ಲಿ, ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸುವ ಔಪಚಾರಿಕತೆಯನ್ನು ಕೈಗೊಳ್ಳಲಾಗಿದೆ. ಪೊಲೀಸರೇ ಹೆಣ್ಣು ಮಕ್ಕಳ ಮೇಲೆ ಹೀಗೆ ಅತ್ಯಾಚಾರ ಮಾಡಿದರೆ ಮಹಿಳೆಯರಿಗೆ ರಕ್ಷಣೆ ನೀಡುವವರು ಯಾರು? ಪೊಲೀಸರ ಕೈವಾಡವಿರುವುದು ಸರ್ಕಾರದ ಮುಖಕ್ಕೆ ಮಸಿ ಬಳಿದಿದೆ” ಎಂದು ರಾಥೋಡ್ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.