ಬೆಂಗಳೂರು: ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ನಡೆಸಿದ್ದ ‘ನಮ್ಮ ಬೆಂಗಳೂರು ಹಬ್ಬ’ದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ.
2023ರ ಮಾರ್ಚ್ 25 ಮತ್ತು 26 ರಂದು ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧದ ಸುತ್ತಮುತ್ತ ನಡೆದ ಎರಡು ದಿನಗಳ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 5.59 ಕೋಟಿ ಹಣ ಪಾವತಿಸಿತ್ತು. ಕಾರ್ಯಕ್ರಮದಲ್ಲಿ ನೃತ್ಯ, ನಾಟಕ, ಕಲೆ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
‘ಈ ಹಬ್ಬದ ನಿರ್ವಹಣೆಯನ್ನು ಇಲಾಖೆ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು. ಇದರಿಂದಾಗಿ ಕುರ್ಚಿ, ಟೇಬಲ್ ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳಿಗೆ ದುಪ್ಪಟ್ಟು ಹಣ ಪಾವತಿಸಲಾಗಿದೆ’ ಎಂದು ಕಲಾವಿದರು ಆರೋಪಿಸಿದ್ದಾರೆ.
ಪ್ಲಾಸ್ಟಿಕ್ ಕುರ್ಚಿಗಳಿಗೆ ತಲಾ 75ರಿಂದ 100 ಬಾಡಿಗೆ ಪಾವತಿಸಿದರೆ, ಟೇಬಲ್‌ಗಳಿಗೆ ತಲಾ 750 ಸಂದಾಯವಾಗಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ಸದ್ಯ ಪ್ಲಾಸ್ಟಿಕ್ ಕುರ್ಚಿಗಳು ತಲಾ 8ರಿಂದ 10 ರೂ.ಗೆ ಬಾಡಿಗೆಗೆ ದೊರೆಯುತ್ತಿವೆ. ಅದೇ ರೀತಿ, ಟೇಬಲ್‌ಗಳು 80ರಿಂದ 100ಗೆ ಲಭ್ಯವಾಗುತ್ತಿವೆ.
ವಿಧಾನಸೌಧದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಅತಿ ಗಣ್ಯರಿಗಾಗಿ ಹಾಕಲಾಗಿದ್ದ 50 ಸೋಫಾಗಳಿಗೆ 2.50 ಲಕ್ಷ ಪಾವತಿಸಲಾಗಿದೆ. ಪ್ರತಿ ಸೋಫಾಗೆ 5 ಸಾವಿರ ಬಾಡಿಗೆ ನೀಡಿದಂತಾಗಿದೆ. ಬ್ಯಾಂಕ್ವೆಟ್ ಕುರ್ಚಿಗಳಿಗೆ ತಲಾ 200 ಬಾಡಿಗೆ ಪಾವತಿಸಲಾಗಿದೆ. ಹಬ್ಬದ ಎರಡು ಪ್ರವೇಶ ಕಮಾನು ಹಾಗೂ ವೇದಿಕೆಯ ಹಿಂದಿನ ಪರದೆಗೆ 32.50 ಲಕ್ಷ ಹಣ ಬಿಲ್ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಇನ್ನು ಚಲನಚಿತ್ರ ಗಾಯಕರ ಬ್ಯಾಂಡ್‌ಗಳು ಹಾಗೂ ಜಾನಪದ ಸೇರಿ ವಿವಿಧ ಸಾಂಪ್ರದಾಯಿಕ ಕಲಾ ಪ್ರಕಾರಗಳ ತಂಡಗಳಿಗೆ ಪಾವತಿಸಿದ ಗೌರವಧನದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ”ಬೆಂಗಳೂರು ಹಬ್ಬಕ್ಕೆ ಮಾಡಲಾದ ವೆಚ್ಚದ ಬಗ್ಗೆ ಮಾಹಿತಿಯಿಲ್ಲ, ಇದರ ಬಗ್ಗೆ ಪರಿಶೀಲಿಸಲಾಗುವುದು” ಎಂದು ತಿಳಿಸಿದ್ದಾರೆ.