ಶಿವಮೊಗ್ಗ: ‘ತೀರ್ಥಹಳ್ಳಿಯ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರೇ ಹೇಳಬೇಕು. ನನಗೆ ಬಂದ ಮಾಹಿತಿ ಪ್ರಕಾರ 30 ರಿಂದ 40 ಜನ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಎಬಿವಿಪಿ ಅಧ್ಯಕ್ಷ ಮಾಡಿದ್ದಾನೆ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ತೀರ್ಥಹಳ್ಳಿ ಪ್ರತಿಷ್ಠಿತ ಕಾಲೇಜು, ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳನ್ನು ವಾಟ್ಸಪ್ ನಲ್ಲಿ ಹರಿಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಶಿವಮೊಗ್ಗ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಬಿವಿಪಿ ಅಧ್ಯಕ್ಷ ಮಾಡಿರುವ ಕೆಲಸಕ್ಕೆ ಜ್ಞಾನೇಂದ್ರ ಅವರು ಪ್ರತಿಭಟನೆಯನ್ನು ಮಾಡಬೇಕಿತ್ತು. ಅದೇ ಎಬಿವಿಪಿ ಅಧ್ಯಕ್ಷನ ಬದಲಾಗಿ ಕಾಂಗ್ರೆಸ್ ಅಥವಾ ಮುಸ್ಲಿಂ ವ್ಯಕ್ತಿ ಮಾಡಿದ್ದರೆ ಇಂದು ಶಿವಮೊಗ್ಗ ಬಂದ್, ನಾಳೆ ಕರ್ನಾಟಕ ಬಂದ್ ಮಾಡುತ್ತಿದ್ದರು. ಇವರಿಗೆ ತಲೆ ಇದೆಯೇ. ಎಲ್ಲರೂ ಇದೇ ರೀತಿ ಹೇಳೋದು ಯಾರ ಮೇಲೆ ಆಪಾದನೆ ಬರುತ್ತದೆ ಆಗ ಅವರಿಗೂ ನಮಗೂ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಆರಗ ಜ್ಞಾನೇಂದ್ರ ಅವರು ಕೇಸರಿ ಶಾಲನ್ನ ಧರಿಸಿ ಈ ಪ್ರಕರಣದ ಆರೋಪಿಯ ಜೊತೆ ಕಾಲೇಜಿನ ಒಳಗೆ ಹೋಗಿ ಪ್ರಚಾರ ಮಾಡಿರುವ ವಿಡಿಯೋ ನಾನೇ ತೋರಿಸ್ತೇನೆ ಇದಕ್ಕೆ ಆರಗ ಜ್ಞಾನೇಂದ್ರ ಅವರು ಚಾಲೆಂಜ್ ಮಾಡ್ತಾರಾ ಎಂದು ಸವಾಲು ಹಾಕಿದ್ದಾರೆ.
ಆರಗ ಜ್ಞಾನೇಂದ್ರ ಅವರೇ ಅತ್ಯಾಚಾರದ ಆರೋಪಿಯ ಜೊತೆ ಡಿಗ್ರಿ ಕಾಲೇಜ್ ನಲ್ಲಿ ಓಟು ಕೇಳಲು ಹೋಗಿದ್ರು ಈಗ ನೋಡಿದರೆ ಆತ ಎಬಿವಿಪಿ ಅಧ್ಯಕ್ಷ ಅಲ್ಲಾ ಎನ್ನುತ್ತಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಈ ಪ್ರಕರಣದ ಸಂಬಂಧ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು.