ABC ಸಂಸ್ಥೆಯ (Audit Bureau of Circulation) ಲೆಟರ್ ಹೆಡ್ ಹೊಂದಿರುವ ಪತ್ರವೊಂದು ಅದರ ಒಳಗಿನ ವಿಷಯದ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಕನ್ನಡದ ದೈನಿಕ ಪತ್ರಿಕೆ ವಿಶ್ವವಾಣಿ ಹೆಸರು ಉಲ್ಲೇಖವಾಗಿರುವ ಈ ಪತ್ರ ಈಗ ಫೇಸ್ ಬುಕ್ ಮತ್ತು ಟ್ವಿಟರ್‌ಗಳನ್ನು ಕೂಡಾ ತಲುಪಿ ಪತ್ರಕರ್ತರ ಗುಂಪು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದೆ.
ಆ ಲೆಟರ್ ಹೆಡ್ ಹೇಳುವಂತೆ, ವಿಶ್ವೇಶ್ವರ ಭಟ್ ಸಂಪಾದಕತ್ವದ ವಿಶ್ವವಾಣಿ ಪತ್ರಿಕೆಯು ತನ್ನ ಸರ್ಕ್ಯುಲೇಷನ್ ವಿಷಯದಲ್ಲಿ ಸುಳ್ಳು ಹೇಳಿ ಸರ್ಕಾರಿ ಜಾಹೀರಾತುಗಳನ್ನು ಪಡೆದುಕೊಂಡಿದೆ.” ಇಲ್ಲಿ ಸರ್ಕಾರಿ ಜಾಹೀರಾತು ಎಂದ ಮೇಲೆ ಲಕ್ಷಾಂತರ ಮೊತ್ತದ(ನಿರಂತರ 5 ವರ್ಷಗಳ ವಂಚನೆ ಎಂದರೆ ಕೋಟಿ ಮೊತ್ತ ಕೂಡಾ ತಲುಪಬಹುದು) ಹಣವೂ ಇದೆ. ಇದೇ ಕಾರಣಕ್ಕೆ ಈ ಲೆಟರ್ ಹೆಡ್ ಇರುವ ಪತ್ರವು ಚರ್ಚೆಗೆ ಒಳಗಾಗುತ್ತಿದೆ.
ಏನಿದು ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್?
ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ ಆಫ್ ಇಂಡಿಯಾ ಎನ್ನುವುದು ಪತ್ರಿಕೆಗಳ ಪ್ರಸರಣಕ್ಕೆ ಸಂಬಂಧಿಸಿದಂತೆ ಆಡಿಟಿಂಗ್ ನಡೆಸುವ ಒಂದು ಸರ್ಕಾರೇತರ ಸಂಸ್ಥೆ. ಇದು ಭಾರತದಲ್ಲಿನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ಪ್ರಮುಖ ಪ್ರಕಟಣೆಗಳ ಪ್ರಸರಣವನ್ನು ಪ್ರಮಾಣೀಕರಿಸುತ್ತದೆ ಮತ್ತು ಅದರ ಲೆಕ್ಕಪರಿಶೋಧಿಸುತ್ತದೆ. ಎಬಿಸಿ 1948ರಲ್ಲಿ ಪ್ರಾರಂಭವಾದ ಸ್ವಯಂಸೇವಾ ಸಂಸ್ಥೆಯಾಗಿದ್ದು ಅದು ಪ್ರಪಂಚದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಸಂಸ್ಥೆಯು ತನ್ನ ಲೆಟರ್ ಹೆಡ್ ಮೂಲಕ “ಬೆಂಗಳೂರಿನಿಂದ ಪ್ರಕಟವಾಗುವ ವಿಶ್ವವಾಣಿ, (915, ಮಾಹಿತಿ ಫನುಷ್ ಪ್ಲಾಜಾ 2ನೇ ಮತ್ತು 3ನೇ ಮಹಡಿ, ಐಡಿಯಲ್ ಹೋಮ್ ಟೌನ್‌ಶಿಪ್, ರಾಜರಾಜೇಶ್ವರಿ ನಗರ ಬೆಂಗಳೂರು) ಕನ್ನಡ ದಿನಪತ್ರಿಕೆಯು ತನ್ನ ಪ್ರಸರಣಕ್ಕೆ ಸಂಬಂಧಿಸಿದಂತೆ ಎಬಿಸಿ ಸದಸ್ಯತ್ವ ಮತ್ತು ಎಬಿಸಿ ಪ್ರಮಾಣಪತ್ರವನ್ನು ಹೊಂದಿರುವುದಾಗಿ ಹೇಳಿಕೊಂಡಿರುವುದು ಎಬಿಸಿಯ ಗಮನಕ್ಕೆ ಬಂದಿದೆ. ನಮ್ಮ ಕೆಲವು ಸದಸ್ಯರು ಅನೌಪಚಾರಿಕವಾಗಿ ವಿಶ್ವವಾಣಿ ಎಬಿಸಿ ಸದಸ್ಯರಾಗದೆ ಸರ್ಕಾರಿ ಜಾಹೀರಾತು ಪಡೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುತ್ತಾರೆ.
ವಿಶ್ವವಾಣಿ ಪತ್ರಿಕೆ 2018ರಿಂದ ಎಬಿಸಿ ಸದಸ್ಯನಾಗಿಲ್ಲ ಮತ್ತು ಆ ಪತ್ರಿಕೆಗೆ ಜನವರಿ 2017ರಿಂದ ಯಾವುದೇ ಎಬಿಸಿ ಪ್ರಮಾಣಪತ್ರವನ್ನು ನೀಡಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ. ಅದರ ಕೊನೆಯ ABC ಪ್ರಮಾಣಪತ್ರವು ಜುಲೈ-ಡಿಸೆಂಬರ್ 2016ರ ಅವಧಿಗೆ ಮತ್ತು ಅದರ ಸದಸ್ಯತ್ವದ ಕೊನೆಯ ಅವಧಿಯು ಜುಲೈನಿಂದ ಡಿಸೆಂಬರ್ 2017ರವರೆಗೆ ಚಾಲ್ತಿಯಲ್ಲಿತ್ತು. ಅದು ತನ್ನ ಪತ್ರಿಕೆಯ ಪ್ರಸರಣದ ಕುರಿತು ಸುಳ್ಳು ಮಾಹಿತಿ ಒದಗಿಸಿದ ಕಾರಣ ಅದರ ABC ಸದಸ್ಯತ್ವವನ್ನು ಕೊನೆಗೊಳಿಸಲಾಗಿತ್ತು.” ಎಂದು ಹೇಳಿದೆ.
ಹೇಗೇ ನೋಡಿದರೂ ಇದೊಂದು ನಿರಂತರ ವಂಚನೆಯಾಗಿದ್ದು, ಸದರಿ ಪತ್ರಿಕೆ ಐದು ವರ್ಷಗಳ ಕಾಲ ಸರ್ಕಾರಗಳನ್ನು ವಂಚಿಸುತ್ತಾ ಬಂದಿರುವುದು ನಿಜಕ್ಕೂ ತನಿಖಾರ್ಹ ಸಂಗತಿಯಾಗಿದೆ. ಜನರ ದುಡ್ಡನ್ನು ಅನರ್ಹ ಪತ್ರಿಕೆಗಳಿಗೆ ಖರ್ಚು ಮಾಡಿದ ಸರ್ಕಾರಿ ಯಂತ್ರ ಇನ್ನಾದರೂ ಈ ಕುರಿತು ಎಚ್ಚೆತ್ತುಕೊಳ್ಳಬೇಕಿದೆ.
ಇನ್ನೂ ವಿಶೇಷ ಎಂದರೆ ABC ಸಂಸ್ಥೆ 2022 ರ ನವೆಂಬರ್ 30 ಕ್ಕೇ ಈ ಪತ್ರವನ್ನು ಹೊರಡಿಸಿತ್ತು. 2023 ರ ಮೇ 3 ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತಾ ಶರ್ಮಾ ಅವರ ಕಚೇರಿ ಈ ಪತ್ರವನ್ನು ಸ್ವೀಕರಿಸಿದ ಸೀಲು ಮತ್ತು ಸಹಿ ಕೂಡಾ ಪತ್ರದ ಮೇಲೆ ಇರುವುದನ್ನು ಇಲ್ಲಿ ಗಮನಿಸಬಹುದು. ಇಷ್ಟಾದರೂ ವಿಶ್ವವಾಣಿ ಪತ್ರಿಕೆಯ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡ ಬಗ್ಗೆ ಎಲ್ಲೂ ಸಹ ಮಾಹಿತಿ ಲಭ್ಯವಾಗಿಲ್ಲ.
ಈಗ ಇಲ್ಲಿ ಎದ್ದಿರುವ ಪ್ರಶ್ನೆಯೆಂದರೆ ವಿಶ್ವವಾಣಿ ಕಳೆದ ಐದು ವರ್ಷಗಳಿಂದ ತನ್ನ ಪತ್ರಿಕೆಯ ಪ್ರಸರಣದ ಕುರಿತು ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ಒದಗಿಸಿತ್ತೇ ಎನ್ನುವುದು. ಒಂದು ವೇಳೆ ಅದು ತಪ್ಪು ಮಾಹಿತಿ ಒದಗಿಸಿದ್ದೇ ಹೌದಾದಲ್ಲಿ, ಸರ್ಕಾರ ಅದರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಲಿದೆ? ಸರಕಾರಿ ನಷ್ಟಕ್ಕೆ ಆದ ನಷ್ಟವನ್ನು ಸರ್ಕಾರ ಅವರಿಂದ ಭರಿಸಲಿದೆಯೇ ಎನ್ನುವ ಪ್ರಶ್ನೆಗಳು ಪತ್ರಕರ್ತರ ವಲಯದಲ್ಲಿ ಓಡಾಡತೊಡಗಿದೆ