ಚಂದ್ರಯಾನ 3 ಉಡಾವಣೆಗೂ ಮೊದಲು ಅದರಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿದ್ದರು. ಸಂವಿಧಾನದ ಜಾತ್ಯತೀತ ನೀತಿಗಳ ಅನುಸಾರ ಕೆಲಸ ಮಾಡಬೇಕಾದ ವಿಜ್ಞಾನಿಗಳು ತಮ್ಮ ಧಾರ್ಮಿಕ ನಂಬಿಕೆಗಳನ್ನು ಸಾರ್ವಜನಿಕಗೊಳಿಸಿದ್ದು ಸಹಜವಾಗಿಯೇ ಹಲವರ ಟೀಕೆಗೆ ಒಳಗಾಗಿತ್ತು. ಈ ಬಗ್ಗೆ ಹುಲಿಕುಂಟೆ ಮೂರ್ತಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ತಕ್ಷಣವೇ ದಾಳಿ ಶುರುವಾಯಿತು. ಅದರ ಸ್ಕ್ರೀನ್ ಶಾಟ್ ಅನ್ನು ಟ್ವಿಟರ್ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ವಿಕೃತವಾಗಿ ಎಡಿಟ್ ಮಾಡಿ ಹಂಚಿಕೊಳ್ಳತೊಡಗಿದರು. ಅವರ ಹೆಂಡತಿಯ ಫೇಸ್‌ಬುಕ್ ಅಕೌಂಟ್ ಹುಡುಕಿ ಅಲ್ಲಿನ ಪೋಸ್ಟ್‌ಗಳಿಗೆ ಕೆಟ್ಟದಾಗಿ ಕಮೆಂಟ್ ಮಾಡಿದರು. ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡಲಾಗಿತ್ತು.
ಸದ್ಯ ವಿಕೃತವಾಗಿ ಟ್ರೋಲ್ ಮಾಡಿದ್ದ 30 ಜನರ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣವೇನು..?
ಈ ಎತ್ತರ ಏರಿದ ದಲಿತ ಖರ್ಗೆ ಕುಟುಂಬದ ಸಾಧನೆಯನ್ನು ಸಹಿಸದ ಆರೆಸ್ಸೆಸ್-ಬಿಜೆಪಿ ಮಬ್ಬಕ್ತಿರಿಗೆ ಮೂರ್ತಿ ಕ್ಲಾಸ್ ತೆಗೆದುಕೊಂಡಿದ್ದರು. ಜಾತಿವಾದಿ ಆರೆಸ್ಸೆಸ್-ಬಿಜೆಪಿ ತಂಡಕ್ಕೆ, ಅವರು ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ವರ್ಣ-ಜಾತಿ ಕುರಿತು ಹುಲಿಕುಂಟೆಮೂರ್ತಿ ಪಾಠ ಮಾಡಿದ್ದರು. ಇದರಿಂದ ಸಂಘಪರಿವಾರ ಅಂಡು ಸುಟ್ಟ ಬೆಕ್ಕಿನಂತಾಗಿತ್ತು.
ಇತ್ತೀಚೆಗೆ ಹುಲಿಕುಂಟೆಮೂರ್ತಿ ಅವರು ಇಸ್ರೋ ವಿಜ್ಞಾನಿಗಳ ಅವೈಜ್ಞಾನಿಕ ನಡೆಯನ್ನು ವಿಮರ್ಶಿಸಿ ‘ಚಂದ್ರಯಾನ ಈ ಸಾರಿ ತಿರುಪತಿ ನಾಮವೇ ಅನ್ಸತ್ತೆ’ ಎಂದಿದ್ದರು. ಈ ಫೇಸ್‌ಬುಕ್ ಪೋಸ್ಟ್ಅನ್ನು ಹಿಡಿದುಕೊಂಡು ಆರೆಸ್ಸೆಸ್-ಬಿಜೆಪಿ ಸಂಘಪರಿವಾರದವರು ಕೆಲವು ದಿನದಿಗಳಿಂದ ಮೂರ್ತಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇವರ ಸಾಲಿಗೆ ಬಿಜೆಪಿಯ ಮಾಜಿ ಸಚಿವ ಸುರೇಶ್ ಕುಮಾರ್ ಸೇರಿಕೊಂಡಿದ್ದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಟಾರ್ಗೆಟ್ ಟೀಂನ ಭಾಗವಾಗಿದ್ದಾರೆ. ಮುಂದೆಯೂ ಇನ್ನಷ್ಟು ಜನರು ಆ ಸಾಲಿಗೆ ಸೇರುವ ಸಾಧ್ಯತೆಗಳಿವೆ.
ಒಬ್ಬ ಅಂಬೇಡ್ಕರ್ ವಾದಿಯಾಗಿ ಹಾಗೂ ಬುದ್ಧ, ಬಸವಣ್ಣ, ಕುವೆಂಪು, ಫುಲೆಯವರ ಆದರ್ಶಗಳನ್ನು ಎದೆಗೆ ಹಾಕಿಕೊಂಡು ಬದುಕುತ್ತಿರುವ ಹುಲಿಕುಂಟೆ ಮೂರ್ತಿಯವರನ್ನು ಬಿಜೆಪಿ-ಆರೆಸ್ಸೆಸ್ ಟೀಂ ಈ ಪಾಟಿ ಟ್ರಾಲ್ ಮಾಡಲು ಕಾರಣ ಇಸ್ರೋ ವಿಜ್ಞಾನಿಗಳನ್ನು ವಿಮರ್ಶಿಸಿದ ಪೋಸ್ಟ್ ಅಲ್ಲವೇ ಅಲ್ಲ. ಅದರ ಹಿಂದೆ ಸೈದ್ದಾಂತಿಕ ಸಂಘರ್ಷವಿದೆ. ಸದಾ ದಲಿತರ ಪರ ಹಾಗೂ ನೊಂದವರ ಪರ ನಿಲ್ಲುವ ನೈಜ ಅಂಬೇಡ್ಕರ್ ವಾದಿಯೊಬ್ಬನ ಬಾಯಿ ಮುಚ್ಚಿಸುವ ಷಡ್ಯಂತ್ರವಿದೆ. ಹಾಗಾದರೆ, ಹುಲಿಕುಂಟೆಮೂರ್ತಿ ಅವರನ್ನು ಟಾರ್ಗೆಟ್ ಮಾಡಲು ಕಾರಣವೇನು?
ಮುಖ್ಯ ಹಾಗೂ ತಕ್ಷಣದ ಎರಡು ಕಾರಣಗಳು:
ಮೊದಲ ಕಾರಣ, ದಲಿತರನ್ನು ಒಡೆದು ಆಳಲು ಅಧಿಕೃತವಾಗಿ ದಲಿತರೊಳಗೆ ನುಸುಳಿದ ಆರೆಸ್ಸೆಸ್ ಮನಸ್ಥಿತಿಯುಳ್ಳ ವಾದಿರಾಜ ನನ್ನು ಎದುರು ಹಾಕಿಕೊಂಡದ್ದು. ಹೌದು ಒಳ ಮೀಸಲಾತಿ ವಿಚಾರದಲ್ಲಿ ವಾದಿರಾಜ ಹೂಡಿದ ತಂತ್ರಗಳನ್ನ ನೇರವಾಗಿ ಎದುರಿಸಿ ಆತನಿಗೆ ಮಣ್ಣು ಮುಕ್ಕಿಸಿದ್ದರಲ್ಲಿ ಮುಖ್ಯ ಪಾತ್ರವನ್ನು ಹುಲಿಕುಂಟೆ ಮೂರ್ತಿ ವಹಿಸಿದ್ದರು. ಎಡ-ಬಲ ಎಂದು ವಿಭಜನೆ ಮಾಡಲು ಹೊರಟಿದ್ದ ವಾದಿರಾಜನಿಗೆ ತಕ್ಕ ಪಾಠ ಕಲಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಾದಿರಾಜನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದ ಹುಲಿಕುಂಟೆಮೂರ್ತಿಯವರು ಅಂದಿನಿಂದ ಆರೆಸ್ಸೆಸ್-ಬಿಜೆಪಿ ಟ್ರಾಲ್ ಗುಂಪಿಗೆ ಟಾರ್ಗೆಟ್ ಆದರು. ನೆನಪಿರಲಿ ಒಳಮೀಸಲಾತಿ ವಿಚಾರದಲ್ಲಿ ವೈಜ್ಞಾನಿಕವಾದ ಮಾಹಿತಿಯನ್ನು ಸಮುದಾಯಕ್ಕೆ ತಲುಪಿಸುವ ಶ್ರಮದಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಹುಲಿಕುಂಟೆಮೂರ್ತಿ. ಪಕ್ಷ ರಾಜಕಾರಣದ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳದ ಅವರು ಮಾಡಿದ್ದು ಸಂವಿಧಾನ ಬದ್ಧ ಸತ್ಯವನ್ನು ನುಡಿಯುವ ಕೆಲಸವಷ್ಟೆ.
ಎರಡನೆಯ ಕಾರಣ ಇತ್ತೀಚಿನದ್ದು. ವಿರೋಧ ಪಕ್ಷದ ನಾಯಕರಿಲ್ಲದ ಬಗ್ಗೆ ಪ್ರಿಯಾಂಕ್ ಖರ್ಗೆಯವರು ಒಂದು ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮತ್ತದೇ ಆರೆಸ್ಸೆಸ್-ಬಿಜೆಪಿ ಟ್ರಾಲ್ ತಂಡ ಪ್ರಿಯಾಂಕ್ ಖರ್ಗೆಯವರನ್ನು ‘ಕರ್ರಗೆ’ ಎಂದು ಮೂದಲಿಸಿ ಪ್ರಚಾರ ಮಾಡಿತ್ತು. ಮಾನವೀಯ ಮೌಲ್ಯವಿರುವ ಎಂತಹವರೇ ಆಗಲಿ ವರ್ಣ, ಜಾತಿ, ಲಿಂಗ ತಾರತಮ್ಯವನ್ನು ಖಂಡಿಸಿಯೇ ಖಂಡಿಸುತ್ತಾರೆ. ದಲಿತ ಸಮುದಾಯದಿಂದ ಬಂದು ಸತತವಾಗಿ ಮುಖ್ಯಮಂತ್ರಿಯಾಗುವ ಅವಕಾಶಗಳನ್ನು ತ್ಯಾಗ ಮಾಡಿ ಭೀಷ್ಮನಂತೆ ಬದುಕುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆಯವರು ದೇಶಕ್ಕಾಗಿ ಮತ್ತು ನಾಡಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವಾಗ ಅಂತಹವರನ್ನು ಉದ್ದೇಶಿಸಿ ರಾಜಕೀಯ ದ್ವೇಷದಿಂದ “ಕರ್ರಗೆ” ಎಂದು ಕಿಚಾಯಿಸಿದರೆ ಯಾವ ದಲಿತರ/ಪ್ರಗತಿಪರರ ಮೆದುಳು ಸುಮ್ಮನಿರುತ್ತದೆ? ಹುಲಿಕುಂಟೆಮೂರ್ತಿಯವರು ಆ ಜಾತಿವಾದಿ ಆರೆಸ್ಸೆಸ್-ಬಿಜೆಪಿ ತಂಡಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿದರು. ಅವರು ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ವರ್ಣ-ಜಾತಿ ಪಾಠ ಮಾಡಿದರು. ದಲಿತ ಸಮುದಾಯದಿಂದ ಈ ಎತ್ತರ ಏರಿದ ಖರ್ಗೆ ಕುಟುಂಬದ ಸಾಧನೆಯನ್ನು ಸಹಿಸದ ಆರೆಸ್ಸೆಸ್-ಬಿಜೆಪಿ ಮಬ್ಬಕ್ತಿರಿಗೆ ಕ್ಲಾಸ್ ತೆಗೆದುಕೊಂಡರು. ಇಲ್ಲಿ ಹುಲಿಕುಂಟೆಮೂರ್ತಿಯವರು ನಿಜಕ್ಕೂ ದಲಿತತ್ವ ಮೆರೆದರು.
ಎಲ್ಲವನ್ನೂ ಬಲ್ಲವರಂತೆ ಫೋಸು ಕೊಡುವ ಈ ಹೆಜಮನಿ ಮನಸ್ಥಿತಿಯುಳ್ಳ ಆರೆಸ್ಸೆಸ್-ಬಿಜೆಪಿ ಸಾಮಾಜಿಕ ಜಾಲತಾಣದ ಮುಕೇಡಿಗಳು ದಲಿತನೊಬ್ಬನು ತಮಗೆ ಮಾಡಿದ ನೀತಿ ಪಾಠವನ್ನು ಸಹಿಸಿಕೊಳ್ಳುವರೇ? ಇಲ್ಲವೇ ಇಲ್ಲ. ಹುಲಿಕುಂಟೆಮೂರ್ತಿಯವರ ಮೇಲೆ ಕಣ್ಣಿಟ್ಟರು. ಅದರ ಪರಿಣಾಮವೇ ಸುರೇಶ್ ಕುಮಾರ್ ಅವರ ಪತ್ರ!
ಹುಲಿಕುಂಟೆಮೂರ್ತಿಯವರಿಗೆ ಈ ಟ್ರಾಲ್ ಟೀಮ್ ಬಗ್ಗೆ ತಿಳಿದಿಲ್ಲವೆಂದೆ? ತಿಳಿದಿತ್ತು. ಆದರೆ ಅವರು ನಮ್ಮಂತಲ್ಲ. ದಲಿತರಿಗಾಗುವ ಅನ್ಯಾಯವನ್ನು ಕಿಂಚಿತ್ತೂ ಸಹಿಸದ ದಿಟ್ಟ ಜೀವ. ಅಸಹ್ಯ ಕಮೆಂಟುಗಳಿಗೆ ಹೆದರಲಿಲ್ಲ. ಫೇಕ್ ಬೆದರಿಕೆಗೆ ಬೆದರಲಿಲ್ಲ. ಆಗ ಆರೆಸ್ಸೆಸ್-ಬಿಜೆಪಿ ಟ್ರಾಲ್ ತಂಡಕ್ಕೆ ಸಿಕ್ಕಿದ್ದೇ ಈ ವಿಜ್ಞಾನಿಗಳ ಅವೈಜ್ಞಾನಿಕ ನಡೆಯ ಬಗ್ಗೆ ಅವರು ಮಾಡಿದ ಪೋಸ್ಟ್. ಮುಂದಿನದ್ದೆಲ್ಲ ನಿಮಗೆ ತಿಳಿದಿದೆ.
ಕ್ರೌರ್ಯವೆಂದರೆ ಹುಲಿಕುಂಟೆಮೂರ್ತಿಯವರ ಪತ್ನಿಯ ಫೇಸ್‌ಬುಕ್ ಅಕೌಂಟಿಗೆ ಲಗ್ಗೆ ಹಾಕಿದ ಟಾರ್ಗೆಟ್ ಟೀಮ್ ಇಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಸಹ್ಯವಾಗಿ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದೆ. ಹುಲಿಕುಂಟೆಮೂರ್ತಿಯವರಿಗೆ ಒಬ್ಬ ಅಂದ ಭಕ್ತನಂತೂ ‘ನೀನು ಎಡವೋ ಬಲವೋ ನಿನ್ನ ಹುಡುಕಿಕೊಂಡು ಬಂದು ಹೊಡೆಯುತ್ತೇನೆ’ ಎಂದು ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ.
ಅಪ್ಪಟ ವೈಚಾರಿಕ ಪ್ರಜ್ಞೆ ಯ ಬುದ್ಧ, ಬಸವ, ಅಂಬೇಡ್ಕರ್ ವಾದಿ, ಸಂವಿಧಾನ ಬದ್ಧವಾಗಿ ನಡೆಯುವ, ದಮನಿತರನ್ನು ಜೀವಕಾರುಣ್ಯದಿಂದ ಕಾಣುವ ಹುಲಿಕುಂಟೆಮೂರ್ತಿ ಅವರು ವಿಜ್ಞಾನಿಗಳಿಗೆ ಸಂವಿಧಾನದ ಮೂಲ ಮಂತ್ರವಾದ ಧರ್ಮ ನಿರಪೇಕ್ಷತೆ ಮತ್ತು ವೈಚಾರಿಕತೆಯ ಭೋಧನೆ ಮಾಡಿದ್ದರಿಂದ ಸಗಣಿ ಹುಳುಗಳಿಗೆ ಸಂಕಟವಾಗುವಂತ್ತಿದೆ.
ಸದ್ಯ ಹುಲಿಕುಂಟೆ ಮೂರ್ತಿ ಅವರು ತಮ್ಮ ಬರಹವನ್ನು ಎಡಿಟ್ ಮಾಡಿ ಟ್ರೋಲ್ ಮಾಡಿದ್ದಲ್ಲದೆ ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆ ಹಾಕಿದವರ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 30 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸರ್ಕಾರ ಇಂಥ ಟ್ರೋಲರ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಈ ಪ್ರವೃತ್ತಿಗೆ ಅಂತ್ಯ ಹಾಡಬೇಕಿದೆ.