ಮೇ ತಿಂಗಳಿನಿಂದ ಹಿಂಸಾಚಾರಕ್ಕೆ ಬಲಿಯಾಗಿರುವ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಜನರಿಗೆ ಸಾಂತ್ವಾನ ಹೇಳುಲು INDIA ಒಕ್ಕೂಟದ ಸಂಸದರು ನಿರ್ಧರಿಸಿದ್ದು, ಜುಲೈ 29, 30 ರ ದಿನಾಂಕ ನಿಗಧಿ ಮಾಡಿದ್ದಾರೆ.
ಎರಡು ದಿನಗಳ ಭೇಟಿಗೆ INDIA ಒಕ್ಕೂಟ ತಯಾರಿ ನಡೆಸಿದ್ದು, ವಿಪಕ್ಷಗಳ ಬಹುತೇಕ ಸಂಸದರು ಈಶಾನ್ಯ ರಾಜ್ಯಕ್ಕೆ ಪ್ರಯಾಣಿಸಲಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡಿ ಅಲ್ಲಿನ ಜನರ ಕಷ್ಟ ಆಲಿಸಿದ್ದರು. ಹಲವು ಅಡೆತಡೆಗಳು ಎದುರಾದರೂ ಬಿಡದೇ ಅವರು ಮಣಿಪುರದ ಜನರನ್ನು ಭೇಟಿಯಾಗಿದ್ದರು.
ಇನ್ನು ಪ್ರಧಾನಿ ಮೋದಿಯವರು ಹಿಂಸಾಚಾರ ಆರಂಭವಾದ 79 ದಿನಗಳ ನಂತರ ಮಣಿಪುರದ ಬಗ್ಗೆ ಮಾತನಾಡಿದ್ದಾರೆ. ಆದರೆ ಕೇವಲ 36 ಸೆಕೆಂಡ್‌ಗಳಲ್ಲಿ ಮಾತನಾಡಿರುವುದನ್ನು ಖಂಡಿಸಿರುವ ವಿಪಕ್ಷಗಳು ಸಂಸತ್ತಿನಲ್ಲಿ ಈ ಕುರಿತು ಪೂರ್ಣ ಹೇಳಿಕೆಗೆ ಒತ್ತಾಯಿಸಿ ಅವಿಶ್ವಾಸ ನಿರ್ಣಯ ಮಂಡಿಸಿವೆ.
ಇಂದು ಸಹ ಸಂಸತ್ತಿಗೆ ಕಪ್ಪು ಪಟ್ಟಿ ಧರಿಸಿ ಹಾಜರಾಗಿರುವ ವಿಪಕ್ಷಗಳು ಮಣಿಪುರದಲ್ಲಿ ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿವೆ.
ಮಣಿಪುರದಲ್ಲಿ ಬಿಜೆಪಿ ಆಡಳಿತವಿದ್ದು, ಹಿಂಸಾಚಾರ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಕುಕಿ ಸಮುದಾಯದ ಮಹಿಳೆಯನ್ನು ಬೆತ್ತಲೆ ಮೆರವಣಿಗೆ ನಡೆಸಿ, ಸಾಮೂಹಿಕ ಅತ್ಯಾಚಾರಗೈದಿರುವ ವಿಡಿಯೋ ಹೊರಬಂದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ.