ಉಡುಪಿ ಖಾಸಗಿ ಕಾಲೇಜಿನ ವಿಡಿಯೋ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಮಹಿಳೆಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಅವರನ್ನು ಬೆಂಗಳೂರಿನ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಕುಟುಂಬದ ಮಹಿಳೆಯರ ಕುರಿತು ತುಮಕೂರು ಮೂಲದ ಬಿಜೆಪಿ ಕಾರ್ಯಕರ್ತೆ ಶಕುಂತಲಾ, ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇಂದು (ಜು. 28) ಆರೋಪಿ ಶಕುಂತಲಾ ನಟರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಚಿತ್ರೀಕರಣದ ಬಗ್ಗೆ ಟ್ವೀಟ್ ಮಾಡಿದ್ದ ಶಕುಂತಲಾ, ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ. ಸಿದ್ದರಾಮಯ್ಯನವರ ಸೊಸೆ ಅಥವಾ ಹೆಂಡ್ತಿ ವಿಡಿಯೋವನ್ನು ಇದೇ ರೀತಿ ಮಾಡಿದ್ದಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ? ಎಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.
ತುಮಕೂರು ಮೂಲದ ಶಕುಂತಲಾ ನಟರಾಜ್ ಈ ಥರ ವಿವಾದಾತ್ಮಕ ಟ್ವೀಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ.
ಒಡಿಸ್ಸಾದಲ್ಲಾದ ತ್ರಿವಳಿ ರೈಲು ದರಂತದಲ್ಲಿ 250ಕ್ಕೂ ಹೆಚ್ಚು ಜನರು ಮೃತಪಟ್ಟಾಗ, ಆ ಘಟನೆಗೂ ಧರ್ಮದ ಬಣ್ಣ ಬಳಿದಿದ್ದರು.
ಘಟನಾ ಸ್ಥಳದಲ್ಲಿ ಮಸೀದಿ ಇದ್ದಿದ್ದರಿಂದಲೇ ತ್ರಿವಳಿ ರೈಲು ಅಪಘಾತವಾಗಿದೆ ಎಂಬರ್ಥದ ಪೋಸ್ಟ್‌ಗಳನ್ನು ಮಾಡಲಾಗಿತ್ತು. ವಾಸ್ತವದಲ್ಲಿ ಬಿಜೆಪಿ ಬೆಂಬಲಿಗರು ಹಂಚಿಕೊಂಡ ಫೋಟೋ ಮಸೀದಿಯದ್ದಾಗಿರಲಿಲ್ಲ, ಇಸ್ಕಾನ್ ದೇವಾಲಯವಾಗಿತ್ತು.