ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರು ನಾಳೆ (ಬುಧವಾರ) ಚಾಲನೆ ನೀಡಲಿದ್ದಾರೆ. ರಾಜ್ಯಾದ್ಯಂತ 10,400 ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ.
ಬುಧವಾರ ಮೈಸೂರಿನ ಮಹಾರಾಜ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಯೋಜನೆ ಮೂಲಕ ಕುಟುಂಬದ ಒಡತಿ ಖಾತೆಗೆ 2000 ರೂ. ನೀಡಲಾಗುತ್ತದೆ. ಯೋಜನೆ ಜಾರಿಯಾದ ನಂತರ 1.9 ಕೋಟಿ ಮಹಿಳೆಯರ ಖಾತೆಗಳಿಗೆ ಹಣ ಹಾಕಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಹತೆ
ಕುಟಂಬದ ಒಡತಿ ಕಡ್ಡಾಯವಾಗಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರಬೇಕು. ಅಲ್ಲದೇ ಕುಟುಂಬದ ಒಡತಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಅಥವಾ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ಕ್ಲೈಮ್ ಮಾಡಿದ್ದರೆ ಅವರು ಯೋಜನೆಗೆ ಅರ್ಹರಲ್ಲ ಎಂದು ಸರ್ಕಾರ ಘೋಷಿಸಿತ್ತು.
ಜುಲೈ 19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಜುಲೈ 20ರಿಂದ ಈವರೆಗು 1.10 ಕೋಟಿಗೂ ಹೆಚ್ಚು ಮಹಿಳೆಯರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡ ನಂತರ ಖಾತರಿಗಾಗಿ ನೋಂದಣಿ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಅರ್ಹ ಮಹಿಳೆಗೆ ಸಂದೇಶ ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಣಿಗಾಗಿ ತಮ್ಮ ನಿಗದಿತ ದಿನಾಂಕ ಮತ್ತು ಸಮಯವನ್ನು ತಿಳಿಯಲು ಇಚ್ಛಿಸುವವರು 12 ಅಂಕಿಯ ಪಡಿತರ ಚೀಟಿ ಸಂಖ್ಯೆಯನ್ನು 8147500500/ 8277000555 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ನಂತರ ಅರ್ಹ ಮಹಿಳೆಯರು ನೋಂದಣಿಯ ಸ್ಥಳ, ದಿನಾಂಕ ಮತ್ತು ಸಮಯದ ವಿವರಗಳನ್ನು ಪಡೆಯುತ್ತಾರೆ.
ಕರ್ನಾಟಕದಾದ್ಯಂತ 11,000 ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತದೆ ಎಂದು ಸಚಿವ ಹೆಬ್ಬಾಳ್ಕರ್ ಹೇಳಿದ್ದರು. ಫಲಾನುಭವಿಗಳು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು. ಯೋಜನೆಗೆ ಯಾವುದೇ ಕೊನೆಯ ದಿನಾಂಕವಿಲ್ಲ. ಫಲಾನುಭವಿಗಳು ಯೋಜನೆಯನ್ನು ಪಡೆಯಲು ಯಾವುದೇ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದು.
ಗೃಹಲಕ್ಷ್ಮಿ ನೋಂದಣಿಗೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪತಿಯ ಆಧಾರ್ ಕಾರ್ಡ್
- ಪಡಿತರ ಚೀಟಿ, ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್
- ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿರಬೇಕು.
ಗೃಹಲಕ್ಷ್ಮಿ ಯೋಜನೆಗೆ ಈ ವರ್ಷ 17,500 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ವಾರ್ಷಿಕ 32,000 ಕೋಟಿ ರೂ. ಅಗತ್ಯವಿದೆ. ಈ ವರ್ಷ ಒಟ್ಟು 1.28 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ.