ರಾಜಸ್ಥಾನ: 45 ವರ್ಷದ ಮಹಿಳೆಯನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯ ಅಪ್ರಾಪ್ತ ಮಗುವಿಗೂ ಕಿರುಕುಳ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಇತರ ಐವರ ವಿರುದ್ಧ ರಾಜಸ್ಥಾನ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 24 ರಂದು ಪಾಲಿನಲ್ಲಿರುವ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ್ ಜಾಟ್ ಅವರು ಜಮೀನು ನೋಡಲು ಮಹಿಳೆಯನ್ನು ಕರೆದಿದ್ದರು. ಈ ವೇಳೆ ಕೃತ್ಯ ನಡೆದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಠಾಣಾಧಿಕಾರಿ, ”ಅವನು [ಜಾಟ್] ಮತ್ತು ಇತರ ಕೆಲವು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ” ಎಂದು ತಿಳಿಸಿದ್ದಾರೆ.
”ಜಾಟ್ ಜೊತೆಗೆ ಮೂವರು ಮಹಿಳೆಯರು, ಇನ್ನೊಬ್ಬ ಪುರುಷ ಮತ್ತು ಅಪರಿಚಿತ ವ್ಯಕ್ತಿ ಆರೋಪಿಗಳು” ಎಂದು ಹೆಸರಿಸಲಾಗಿದೆ. ಜಾಟ್ ತನ್ನ ಅಪ್ರಾಪ್ತ ಮಗಳಿಗೂ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿ ಸಾಮೂಹಿಕ ಅತ್ಯಾಚಾರ, ಕಿರುಕುಳಕ್ಕೆ ಸಂಬಂಧಿಸಿದ ಸೆಕ್ಷನ್‌ಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಕೆಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆದಾಗ್ಯೂ, ಬಿಜೆಪಿ ನಾಯಕ ಜಾಟ್, ತನ್ನ ವಿರುದ್ಧದ ಆರೋಪಗಳು ಸುಳ್ಳು ಮತ್ತು ತಾನು ಮಹಿಳೆಯನ್ನು ಭೇಟಿಯಾಗಿಲ್ಲ ಎಂದು ಹೇಳಿಕೊಂಡಿದ್ದಾನೆ.
”ನಾನು ಕಾಲೋನಿಯನ್ನು ನಿರ್ಮಿಸಿದ್ದೇನೆ ಮತ್ತು ಅಲ್ಲಿ ನಾನು ಮಾರಾಟ ಮಾಡುವ ಪ್ಲಾಟ್‌ಗಳಿವೆ. ಆ ಪ್ಲಾಟ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿರುವವರು ನನ್ನನ್ನು ಸಂಪರ್ಕಿಸಿದಾಗ, ನನ್ನ ಉದ್ಯೋಗಿಗಳು ಅವರಿಗೆ ಸೈಟ್‌ಗಳನ್ನು ತೋರಿಸುತ್ತಾರೆ. ನಾನೇ ಅವರನ್ನು ಭೇಟಿಯಾಗುವುದಿಲ್ಲ. ನನ್ನ ಮೇಲಿನ ಆರೋಪ ನಿರಾಧಾರ. ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ” ಎಂದು ಬಿಜೆಪಿ ನಾಯಕ ಹೇಳಿಕೊಂಡಿದ್ದಾನೆ.