ಉಡುಪಿ: ಬೈಂದೂರಿನ ಉದ್ಯಮಿಗೆ ಬಿಜೆಪಿಯಿಂದ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಗ್ಯಾಂಗ್ನ 3ನೇ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ಪೊಲೀಸರು ಒಡಿಶಾದಲ್ಲಿ ಬಂಧಿಸಲಾಗಿದೆ.
ಈ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಾಲಶ್ರೀ ಸ್ವಾಮೀಜಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದರು. ಹೀಗಾಗಿ ಅವರು ನಿರೀಕ್ಷಣಾ ಜಾಮೀನು ಪ್ರಯತ್ನಿಸಿದರು. ಆದರೆ ನ್ಯಾಯಾಲಯವು ಅವರ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 19ಕ್ಕೆ ಬೆಂಗಳೂರಿನ ಸಿಸಿಹೆಚ್ 57 ಕೋರ್ಟ್ ಮುಂದೂಡಿದೆ.
ಕಳೆದ ವಾರ ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆಯೇ ಸ್ವಾಮೀಜಿ ನಾಪತ್ತೆಯಾಗಿದ್ದರು. ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು ಇಂದು (ಸೆಪ್ಟೆಂಬರ್ 19) ಒಡಿಶಾದ ಕಟಕ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾಲಶ್ರೀ ಸ್ವಾಮೀಜಿ ಇಂದು (ಮಂಗಳವಾರ) ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧ್ಗಯಾಗೆ ತೆರಳುತ್ತಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಇಂದು (ಸೆಪ್ಟೆಂಬರ್ 19) ರಾತ್ರಿ ಬೆಂಗಳೂರಿಗೆ ಕರೆತರಲಿದ್ದು, ಚೈತ್ರಾ ಕುಂದಾಪುರ ಹೇಳಿದಂತೆ ವಿಚಾರಣೆ ವೇಳೆ ಸ್ವಾಮೀಜಿ ದೊಡ್ಡ ದೊಡ್ಡವರ ಹೆಸರು ಬಾಯ್ಬಿಡುತ್ತರಾ ಎನ್ನುವ ಕುತೂಹಲ ಮೂಡಿಸಿದೆ. ಅಲ್ಲದೇ ಆ ದೊಡ್ಡ ದೊಡ್ಡವರು ಯಾರ್ಯಾರು ಎನ್ನುವುದನ್ನು ಕಾದುನೋಡಬೇಕಿದೆ.
ಹಾಲಶ್ರೀ ಸ್ವಾಮೀಜಿ ಜೊತೆ ಸೂಲಿಬೆಲೆ ಫೋಟೊ ವೈರಲ್
ಪ್ರಮುಖ ಆರೋಪಿ ಹಾಲಶ್ರೀ ಸ್ವಾಮೀಜಿ ಜೊತೆಗಿದ್ದ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಅವರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಪ್ರಕರಣದ ಬಗ್ಗೆ ಹಲವು ಸಂಶಯಗಳು ಹುಟ್ಟಿಕೊಂಡಿವೆ.
ಚಕ್ರವರ್ತಿ ಸೂಲಿಬೆಲೆ ಮತ್ತು ಹಾಲಶ್ರೀ ಸ್ವಾಮೀಜಿ ರೈಲಿನಲ್ಲಿ ಪ್ರಯಾಣಿಸುವ ಮತ್ತು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊಗಳು ಹರಿದಾಡುತ್ತಿವೆ. ಅಲ್ಲದೇ, ಈ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಜೊತೆಗಿದ್ದ ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಆರಗ ಜ್ಞಾನೇಂದ್ರ ಅವರ ಫೋಟೊಗಳು ಕೂಡ ಹರಿದಾಡುತ್ತಿದ್ದು, ”ʼಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ”ʼ ಎಂದು ಬಿಜೆಪಿ ನಾಯಕರನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಫೋಟೊ ಹಂಚಿಕೊಂಡಿದ್ದು, ಈ ಪ್ರಕರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಇರಬಹುದು ಎಂದು ಬರೆದುಕೊಂಡಿದ್ದಾರೆ.