ಬೆಂಗಳೂರು: ಹೊಯ್ಸಳರ ಸಂಕೇತಗಳಾಗಿ ಉಳಿದಿರುವ ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಿದ್ದು ತನ್ನ ಅಧಿಕೃತ ಎಕ್ಸ್ ನಲ್ಲಿ ಪ್ರಕಟಿಸಿದೆ.
ಇದರೊಂದಿಗೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಭಾರತದ 42ನೇ ತಾಣದ ಸೇರ್ಪಡೆಯಾದಂತಾಗಿದೆ. ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನವು ಈ ವಿಶಿಷ್ಟ ಮನ್ನಣೆಯನ್ನು ಪಡೆದ ಮಾರನೇ ದಿನ ಹೊಯ್ಸಳ ದೇವಾಲಯಗಳು ಈ ಪಟ್ಟಿಗೆ ಸೇರಿವೆ.
ಇದೇ ಮೇ ತಿಂಗಳಲ್ಲಿ ಕರ್ನಾಟಕದ ಆರು ಸ್ಥಳಗಳನ್ನು ಮೂರು ವಿಭಾಗಗಳಲ್ಲಿ ಯುನೆಸ್ಕೋ ತನ್ನ ವಿಶ್ವ ಪರಂಪರೆಯ ‘ತಾತ್ಕಾಲಿಕ ಪಟ್ಟಿ’ಗೆ ಸೇರಿಸಿತ್ತು.
ಸುಲ್ತಾನ್ ವಾಸ್ತುಶಿಲ್ಪ ಶೈಲಿಯ ಸ್ಮಾರಕ, ಗುಮ್ಮಟಗಳನ್ನು ಹೊಂದಿರುವ ಗುಲ್ಬರ್ಗ, ಬೀದರ್, ವಿಜಾಪುರ, ಹೊಯ್ಸಳ ವಾಸ್ತುಶಿಲ್ಪ ಶೈಲಿಯ ದೇವಾಲಯ ಇರುವ ಹಾಸನ ಜಿಲ್ಲೆಯ ಬೇಲೂರು, ಹಳೇಬೀಡು ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣವನ್ನು ಯುನೆಸ್ಕೊ ತನ್ನ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಿಸಿತ್ತು.
ಹಂಪಿ, ಪಟ್ಟದಕಲ್ಲು ಹಾಗೂ ಪಶ್ಚಿಮ ಘಟ್ಟಗಳು ಈಗಾಗಲೇ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿವೆ. ಅಳವಿನಂಚಿರುವ ಅಥವಾ ನಿರ್ಲಕ್ಷಕ್ಕೆ ಒಳಗಾಗಿರುವ ಸ್ಥಳಗಳನ್ನು ಸಂರಕ್ಷಿಸುವ ಉದ್ದೇಶದಿಂದ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ ಈ ಸ್ಥಳಗಳನ್ನು ಸೇರಿಸುತ್ತದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದರೆ ಅವುಗಳ ಸಂರಕ್ಷಣೆ ಮತ್ತು ನಿರ್ವಹಣೆಗೆ ಆರ್ಥಿಕ ಸಹಕಾರ ಸಿಗುತ್ತದೆ. ಜೊತೆಗೆ ಈ ತಾಣಗಳು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಯಾಗುತ್ತದೆ.
ಈ ಪಟ್ಟಿಗೆ ಸೇರ್ಪಡೆಯಾಗಲು ಹಲವಾರು ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಈ ತಾಣಗಳು ಅಂತಿಮ ಪಟ್ಟಿಗೆ ಸೇರಬೇಕಾದರೆ ರಾಜ್ಯ ಸರ್ಕಾರ ಯುನೊಸ್ಕೋ ನಿಗದಿ ಪಡಿಸಿದ ಮಾನದಂಡಗಳನ್ನು ನೀಡಿ ಅರ್ಹತೆ ಪಡೆದುಕೊಳ್ಳಬೇಕಾಗುತ್ತದೆ.