ಬೈಂದೂರಿನ ಉದ್ಯಮಿಗೆಗೆ ಬಿಜೆಪಿಯಿಂದ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಚೈತ್ರಾ ಅವರ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ ವ್ಯಕ್ತಿಯೊಬ್ಬರು ದಾವೆ ಹೂಡಿದ್ದಾರೆ.
ಹಿಂದೂಪರ ಸಂಘಟನೆಯ ವಾಗ್ಮಿ ಚೈತ್ರಾ ಅವರಿಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖ ಮಾಡಲಾಗುತ್ತಿತ್ತು. ಈ ಬಗ್ಗೆ ಬೆಂಗಳೂರಿನ ಬಸವನಗುಡಿಯಲ್ಲಿ “ಕಾಫಿ ಶಾಪ್” ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್ ಶೆಟ್ಟಿ ಅಸಮಾಧಾನ ಹೊಂದಿದ್ದರು.
ಗಣೇಶ್ ಶೆಟ್ಟಿ ಅವರು ಮೂಲ ದಾವೆ ಹೂಡಿದ್ದಾರೆ. ಇವರು ಕುಂದಾಪುರ ಮೂಲದವರಾಗಿದ್ದು, ದಾವೆಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಕುಂದಾಪುರ ಎಂಬುದು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರವನ್ನು ಆಳ್ವಿಕೆ ನಡೆಸಿದ್ದರು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆನಂತರ ಪೋರ್ಚಗೀಸರು , ಟಿಪ್ಪುಸುಲ್ತಾನ್, ಬ್ರೀಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇಂದಿಗೂ ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿದೆ.
ಮಾಧ್ಯಮಗಳು ಚೈತ್ರ ಹೆಸರು ಬಳುಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಘಾಸಿಯಾಗುತ್ತಿದೆ. ಕಳೆದ 23 ವರ್ಷಗಳಿಂದ ಬೆಂಗಳೂರಿನ ಬಸನಗುಡಿಯಲ್ಲಿ ಕಾಫಿ ಶಾಪ್ ನಡೆಸುತ್ತಿದ್ದೇನೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಶಾಪ್‌ಗೆ ಭೇಟಿ ನೀಡುತ್ತಾರೆ. ಚೈತ್ರಾ ಪ್ರಕರಣ ಬೆಳಕಿಗೆ ಬಂದ ನಂತರ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ನ್ಯಾಯಾಲಯಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಚೈತ್ರಾ ಕುರಿತು ಸುದ್ದಿ ಪ್ರಸಾರ ಮಾಡುವಾಗ ಕುಂದಾಪುರ ಎಂದು ಉಲ್ಲೇಖಿಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಮಾಡಬೇಕು. ಈಗಾಗಲೇ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ದಾವೆದಾರ ಕೋರಿದ್ದಾರೆ. ದಾವೆದಾರ ಪರ ವಕೀಲ ಪವನ ಚಂದ್ರ ಶೆಟ್ಟಿ ವಕಾಲತ್ತು ಹಾಕಿದ್ದಾರೆ. ಶುಕ್ರವಾರವಷ್ಟೇ ಈ ದಾವೆ ಹೂಡಿದ್ದಾರೆ. ದಾವೆಯು ಶನಿವಾರ ಅಥವಾ ಸೋಮವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ.