ಹೊಸದಿಲ್ಲಿ: ಮಾಂಸ ಮಾಡುವವರಿಗೆ ಇಸ್ಕಾನ್ ಮಾರಿದಷ್ಟು ಗೋವುಗಳನ್ನು ಬೇರೆ ಯಾರೂ ಮಾರಿಲ್ಲ ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರು ಇಸ್ಕಾನ್ ವಿರುದ್ಧ ಸ್ಪೋಟಕ ಆರೋಪ ಮಾಡಿರುವ ವೀಡಿಯೋ ಒಂದು ವೈರಲ್ ಆಗಿದೆ.
ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಪ್ರಶಾಂತ್ ಕನೋಜಿಯಾ ಅವರು ತಮ್ಮ x ಖಾತೆಯಲ್ಲಿ ಮೇನಕಾ ಗಾಂಧಿ ಹೇಳಿರುವ ಒಂದು ನಿಮಿಷದ ವೀಡಿಯೋ ಹಂಚಿಕೊಂಡಿದ್ದಾರೆ.
ಪ್ರಶಾಂತ್ ಕನೋಜಿಯಾ ಅವರು ತಮ್ಮ x ಪೋಸ್ಟ್ ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಬೋಗಸ್ ಮತ್ತು ಮೋಸ ಮಾಡುವ ಸಂಸ್ಥೆ ಯಾವುದೇ ಇದ್ದರೆ ಅದು ISKON ಎಂದು ನಾನು ಹಲವು ವರ್ಷಗಳಿಂದ ಹೇಳುತ್ತಿದ್ದೇನೆ. ಈಗ ಬಿಜೆಪಿ ಸರ್ಕಾರದ ಹಿರಿಯ ನಾಯಕಿ ಮೇನಕಾ ಗಾಂಧಿ ಕೂಡ ಅದೇ ಮಾತನಾಡಿದ್ದಾರೆ. ಅವರು ಬೀದಿಯಲ್ಲಿ ಹರೇ ಕೃಷ್ಣ ಎಂದು ಕೂಗುತ್ತಾರೆ ಆದರೆ ಒಳಗೆ ಅವರಿಗೆ ದೊಡ್ಡ ಅಜೆಂಡಾವಿದೆ. ಇಸ್ಕಾನ್ ಕೂಡ ಆಳವಾದ ಜಾತಿವಾದಿ. ದಲಿತರು ಮತ್ತು ಕಪ್ಪು ಬಣ್ಣದ ಜನರನ್ನು ಜೀತದಾಳುಗಳನ್ನಾಗಿ ಮಾಡುವ ಮಾತನಾಡಿದ್ದಾರೆ ಎಂದು ಹೇಳಿರುವುದು ಪೋಸ್ಟ್ ನಲ್ಲಿದೆ.
ಈ ವೀಡಿಯೋದಲ್ಲಿ ಮೇನಕಾ ಗಾಂಧಿ ಅವರು, “ಒಂದು ನಿಮಿಷ. ನಾನು ನಿಮಗೆ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಅತೀ ದೊಡ್ಡ ಮೋಸಗಾರರು ಎಂದರೆ ಅದು ಇಸ್ಕಾನ್. ಅವರು ಗೋ ಶಾಲೆಗಳನ್ನು ಮಾಡುತ್ತಾರೆ. ಅವರಿಗೆ ಗೋ ಶಾಲೆ ನಡೆಸಲು ಸರ್ಕಾರದಿಂದ ಸವಲತ್ತುಗಳು, ದೊಡ್ಡ ದೊಡ್ಡ ಜಮೀನುಗಳು, ಗೋಮಾಳಗಳು ಎಲ್ಲವೂ ಸಿಗುತ್ತವೆ. ಇತ್ತೀಚೆಗಷ್ಟೇ ನಾನು ಇಸ್ಕಾನ್ ನ ಅನಂತಪುರದ ಗೋ ಶಾಲೆಗೆ ಹೋಗಿದ್ದೆ. ಅಲ್ಲಿ ಒಂದೇ ಒಂದು ಸೊರಗಿದ ಹಸುವೂ ಇರಲಿಲ್ಲ. ಸಂಪೂರ್ಣ ಹೈನುಗಾರಿಕೆ ಯೋಗ್ಯವಾದ ಹಸುಗಳು, ಒಂದೇ ಒಂದು ಕರುವೂ ಇರಲಿಲ್ಲ. ಎಲ್ಲಾ ಕರುಗಳು ಮಾರಾಟವಾಗಿದೆ ಎಂಬುದು ಇದರ ಅರ್ಥ. ಬೀದಿ ಬೀದಿಗಳಲ್ಲಿ ಹರೇ ರಾಮ್-ಹರೇ ಕೃಷ್ಣ ಎಂದು ಹೇಳುತ್ತಾರೆ. ಹಾಲಿನಲ್ಲೇ ಅವರ ಜೀವನವಿದೆ ಎನ್ನುತ್ತಾರೆ. ಅವರು ಮಾಂಸ ಮಾಡುವವರಿಗೆ ಮಾರಿದಷ್ಟು ಗೋವುಗಳನ್ನು ಬಹುಷಃ ಬೇರೆ ಯಾರೂ ಮಾರಿರಲಿಕ್ಕಿಲ್ಲ. ಇವರೇ ಹೀಗೆ ಮಾಡಿರುವಾಗ ಬೇರೆಯವರ ಕಥೆಯೇನು? ಎಂದು ಬಿಜೆಪಿ ಸಂಸದೆ ಮೇನಕಾ ಹೇಳಿರುವುದು ವೀಡಿಯೋದಲ್ಲಿದೆ. ಮೇನಕಾ ಗಾಂಧಿ ಎಲ್ಲಿ, ಯಾವ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.