ಮುಂಬೈ: ‘ಜೈ ಶ್ರೀ ರಾಮ್’ ಎಂದು ಹೇಳಲು ನಿರಾಕರಿಸಿದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮುಂಬೈನ ಕಾಂದಿವಲಿ ಪೂರ್ವದ ಕ್ರಾಂತಿ ನಗರದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಸೂರಜ್ ತಿವಾರಿ, ಅರುಣ್ ಪಾಂಡೆ, ಪಂಡಿತ್ ಮತ್ತು ರಾಜೇಶ್ ಅವರ ಮೇಲೆ ಸೆಕ್ಷನ್ 323, 34, 341 , 504 ಮತ್ತು 506ರಡಿಯಲ್ಲಿ ಕುರಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ಬಜರಂಗದಳದ ಜೊತೆ ನಂಟನ್ನು ಹೊಂದಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.
ಎಫ್ಐಆರ್ ಪ್ರಕಾರ, ಮಹೀಂದ್ರಾ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾಂದಿವಲಿ ಪೂರ್ವದ ಕ್ರಾಂತಿನಗರದಲ್ಲಿ ನೆಲೆಸಿರುವ ಸಿದ್ಧಾರ್ಥ್ ಅಂಗುರೆ (34) ಎಂಬವರು ರಾತ್ರಿ 11.30 ಕ್ಕೆ ತಮ್ಮ ಕಚೇರಿಯಿಂದ ಮನೆಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಅವರು ಫೋನ್‌ನಲ್ಲಿ ಸಹೋದರನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ನಾಲ್ಕು ವ್ಯಕ್ತಿಗಳು ಅವರನ್ನು ರಸ್ತೆಯಲ್ಲಿ ತಡೆದು ‘ಜೈ ಶ್ರೀ ರಾಮ್’ ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ. ಇದಕ್ಕೆ ಅಂಗುರೆ ನಿರಾಕರಿಸಿದ್ದಾರೆ.
ಈ ವೇಳೆ ಆರೋಪಿಗಳು ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ನಂತರ ದೈಹಿಕವಾಗಿ ಹಲ್ಲೆ ನಡೆಸಿ, ನೆಲದ ಮೇಲೆ ಎಳೆದೊಯ್ದಿದ್ದಾರೆ. ಈ ಘಟನೆಯನ್ನು ಅವರ ಸಹೋದರ ಫೋನ್‌ನಲ್ಲಿ ಕೇಳಿಸಿಕೊಂಡಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿ ಅಂಗುರೆಯನ್ನು ಆರೋಪಿಗಳಿಂದ ರಕ್ಷಿಸಿ ಕಾಂದಿವಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಡಿಸ್ಚಾರ್ಜ್ ಆದ ಬಳಿಕ ಅವರು ಇದೀಗ ಕುರಾರ್ ಪೊಲೀಸ್ ಠಾಣೆಗೆ ತೆರಳಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮುಂಬೈ ಕಾಂಗ್ರೆಸ್ ಈ ಘಟನೆಯನ್ನು ಖಂಡಿಸಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಸಂತ್ರಸ್ತರ ನೆರವಿಗೆ ಧಾವಿಸಿದ ವಂಚಿತ್ ಬಹುಜನ್ ಅಘಾಡಿ ದಾಳಿಕೋರರ ವಿರುದ್ಧ ಎಫ್‌ಐಆರ್ ದಾಖಲಿಸಲು ಸಹಾಯ ಮಾಡಿದ್ದಾರೆ. ಇದಲ್ಲದೆ ಸುಜಾತ್ ಅಂಬೇಡ್ಕರ್ ಅವರು ಪೊಲೀಸರೊಂದಿಗೆ ಮಾತನಾಡಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.