ಉಡುಪಿ : ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಗೋವಿಂದ ಬಾಬು ಪೂಜಾರಿ ಅವರಿಂದ ಹಣ ಪಡೆದು ವಂಚಿಸಿದ್ದ ಚೈತ್ರಾ ಮತ್ತು ತಂಡದ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಸಿಸಿಬಿ ಪೊಲೀಸರು, ಮುಂದಿನ ವಾರ ಚಾರ್ಚ್‌ಶೀಟ್ ಸಲ್ಲಿಸಲಿದ್ದಾರೆ.
ಪ್ರಕರಣದ ಸಂಬಂಧ 68 ಸಾಕ್ಷ್ಯಗಳನ್ನು ಸಂಗ್ರಹಿಸಿರುವ ಪೊಲೀಸರು, 68 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ವಂಚನೆ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳಿಂದ ನಗದು, ಕಾರುಗಳು, ಚಿನ್ನಾಭರಣ ಸಹಿತ 5 ಕೋಟಿ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆದುಕೊಂಡಿ ದ್ದರು. ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರು, ಹಾಲಶ್ರೀ ಸ್ವಾಮೀಜಿ, ಧನರಾಜ್ ಸಹಿತ 7 ಮಂದಿಗಳ ವಿರುದ್ಧ ಮುಂದಿನ ವಾರ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಲಿದ್ದಾರೆ.
ದೂರುದಾರ ಗೋವಿಂದ ಬಾಬು ಪೂಜಾರಿ ಅವರಲ್ಲಿದ್ದ, ಆರೋಪಿಗಳಿಗೆ ಸಂಬಂಧಿಸಿದ ಎಲ್ಲ ಆಡಿಯೋ ಮತ್ತು ವೀಡಿಯೋಗಳನ್ನು ಪಡೆದುಕೊಳ್ಳಲಾಗಿದೆ. ಇವುಗಳ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗುತ್ತದೆ. ಆರೋಪಿಗಳ ಮೊಬೈಲ್‌ಗಳ ಡೇಟಾ ರಿಟ್ರೈವ್ ವರದಿಯನ್ನೂ ಉಲ್ಲೇಖೀಸಲಾಗುವುದು.
ಕಳೆದ ಸೆ. 8ರಂದು ಬಂಡೇಪಾಳ್ಯ ಠಾಣೆಯಲ್ಲಿ ಗೋವಿಂದ ಬಾಬು ಪೂಜಾರಿ ಕುಂದಾಪುರದ ಚೈತ್ರಾ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಬಳಿಕ ಸಿಸಿಬಿಗೆ ಪ್ರಕರಣ ವರ್ಗಾವಣೆ ಮಾಡಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಎಲ್ಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.