ನೆಲಮಂಗಲ: ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ನೆಲಮಂಗಲ ತಾಲೂಕಿನ ತುಮಕೂರು ಬೆಂಗಳೂರಿನಲ್ಲಿ ಬರುವ ಎನ್ ಎಚ್ 04 ಮುಖ್ಯ ರಸ್ತೆಯ ಗುಂಡೇನಹಳ್ಳಿ ಗ್ರಾಮ ಒಂದರಲ್ಲಿ ದಲಿತರ ಗ್ರಾಮ ಎಂದು ಸರ್ಕಾರಿ ಬಸ್ ಗಳನ್ನು ನಿಲ್ಲಿಸುವುದಿಲ್ಲವೆಂಬ ಆರೋಪ ಕೇಳಿಬಂದಿದೆ. ದಲಿತರ ಗ್ರಾಮದಲ್ಲಿ ಬಸ್ಸು ನಿಂತು ಜನರು ಹತ್ತಿದೆ ಬಸ್ಸಿಗೆ ಮೈಲಿಗೆಯಾದಿತೆ ಎಂಬ ಪ್ರಶ್ನೆ ಸಹಜವಾಗಿಯೆ ಮೂಡಿ ಬಂದಿದೆ.
ನೆಲಮಂಗಲ ತಾಲ್ಲೂಕೂ ಎಸ್ ಸಿ ಮೀಸಲು ಕ್ಷೇತ್ರವಾಗಿದ್ದು ತಾಲೂಕಿನಲ್ಲಿರುವ ಜಾತಿ ಸಂಕೋಲಗೆ ಸಿಲುಕಿರುವ ದಲಿತರ ಗೋಳು ಹೇಳುತಿರದು, ದಲಿತರ ಗ್ರಾಮವೆಂದರೆ ಸರಿಯಾದ ಮೂಲಭೂತ ಸೌಕರ್ಯಗಳೇ ಇರುವುದಿಲ್ಲ. ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳಿಗಂತೂ ಇದರ ಬಗ್ಗೆ ಕಾಳಜಿಯಂತು ಮೊದಲೇ ಇಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬರುವಂತಹ ಎಲ್ಲಾ ಸರ್ಕಾರಗಳು ಕೂಡ ದಲಿತರಿಗೆ ಅಷ್ಟು ಹಣ ಕೊಟ್ಟೆವು ಇಷ್ಟು ಹಣ ಕೊಟ್ಟೆವು ಎಂದು ಪ್ರಚಾರಗಿಟ್ಟಿಸಿಕೊಂಡು ಕಡೆಗೆ ಆ ಹಣ ಬೇರೆ ಕಾಮಗಾರಿಗಳಿಗೆ ಅಥವಾ ಕಾರ್ಯಯೋಜನೆಗಳಿಗೆ ವರ್ಗಾವಣೆಯಾಗುವುದನ್ನು ದಶಕಗಳಿಂದಲೂ ಪ್ರಗತಿಪರರು ಮತ್ತು ದಲಿತ ಸಂಘಟನೆಗಳು ವಿರೋಧ ಮಾಡಿಕೊಂಡು ಬರುತ್ತಿರುವುದನ್ನು ನೋಡುತ್ತಲೇ ಇದ್ದೇವೆ.
ಆದರೆ ಈ ಪ್ರಕರಣವು ನಿಜವಾಗಿಯೂ ತಾಲೂಕಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಾಚಿಕೆ ಪಡುವಂತಹ ಸಂಗತಿಯೇ ಸರಿ, ನಾವೆಲ್ಲರೂ ತಮಿಳಿನ ಕರ್ಣನ್ ಚಲನಚಿತ್ರವನ್ನು ನೋಡಿದ್ದೇವೆ. ಆ ಚಿತ್ರಕಥೆಯ ಸಾರಾಂಶವೇನೆಂದರೆ ಒಂದು ದಲಿತ ಗ್ರಾಮಕ್ಕೆ ಬಸ್ ನಿಲ್ಲಿಸಲು ಏನೆಲ್ಲ ಸಾಹಸಪಟ್ಟು, ತ್ಯಾಗ- ಬಲಿದಾನಗಳನ್ನು ಮಾಡಿ ಕಡೆಗೆ ಚಿತ್ರವು ಎಷ್ಟೆಲ್ಲ ಚಿತ್ರ ಹಿಂಸೆಗಳಿಂದ ಕೂಡಿರುತ್ತದೆ ಎಂಬುದನ್ನು ನೋಡಿದ್ದೇವೆ, ನೆಲಮಂಗಲ ತಾಲ್ಲೂಕಿನ ಗುಂಡೇನಹಳ್ಳಿ ಗ್ರಾಮದ ಕಥೆಯು ಕೂಡ ಇದಕ್ಕೆ ಸಾಮ್ಯಾವೆಂಬಂತಿದೆ.
ಗ್ರಾಮದ ನಾಗರಿಕರು ಹಲವು ಬಾರಿ ಕೋರಿಕೆಯನ್ನು ನೆಲಮಂಗಲದ ಬಿಎಂಟಿಸಿ ಡಿಪೋಗೆ ಸಲ್ಲಿಸಿದ್ದರು, ಕೆಲವೊಮ್ಮೆ ಆ ಗ್ರಾಮದ ವಿದ್ಯಾರ್ಥಿಗಳು ಕೂಡ ಅನೇಕ ರೀತಿಯ ಪ್ರತಿಭಟನೆಗಳನ್ನು ಮಾಡಿದರು ಕೂಡ ಮತ್ತು ಯುವಶಕ್ತಿ ಕರ್ನಾಟಕ ಎಂಬ ಯುವಜನರ ಸಂಘಟನೆಯೂ ಕೂಡ ಹಲವು ಬಾರಿ ಮನವಿ ಮಾಡಿಕೊಂಡರು ಕೂಡ ಯಾವುದೇ ಪ್ರಯೋಜನವಾಗಿಲ್ಲ, ದಲಿತ ಗ್ರಾಮ ಎಂದು ಬಸ್ಸುಗಳನ್ನ ನಿಲ್ಲಿಸುತ್ತಿಲ್ಲ ಎಂದು ಗ್ರಾಮಸ್ಥರ ಆರೋಪ ಮಾಡುತ್ತಿದ್ದಾರೆ.
ದಿನಕ್ಕೆ ಈ ಗ್ರಾಮದಿಂದ ಹಲವಾರು ವಿದ್ಯಾರ್ಥಿ ಯುವ ಜನರು ಶಾಲಾ-ಕಾಲೇಜಿಗೆ ತೆರಳಲು ಮಕ್ಕಳು ಮತ್ತೊಂದು ಗ್ರಾಮಕ್ಕೆ ಶಾಲೆಗೆ ಹೋಗಲು, ವಯೋವೃದ್ಧರು ಆಸ್ಪತ್ರೆ ಮತ್ತು ಇತರೆ ಕೆಲಸಗಳಿಗೆ ತೆರಳಲು, ಕಾರ್ಮಿಕರು ಕೆಲಸಕ್ಕೆ ಹೋಗಲು ಬಸ್ಸಿನ ಪ್ರಯಾಣವನ್ನು ಬಯಸುತ್ತಿದ್ದಾರೆ ಆದರೆ ಆ ಗ್ರಾಮದವರಿಗೆಲ್ಲ ಈ ಸಮಸ್ಯೆಯು ವ್ಯತಿರಿಕ್ತ ಪರಿಣಾಮ ಬೀರಿ ಎಲ್ಲಾ ಕ್ಷೇತ್ರಗಳಲ್ಲು ನಿರಾಸಕ್ತರಾಗುತ್ತಿರುವುದು ವಾಸ್ತವಾಂಶ. ಈ ಊರಿನ ಗ್ರಾಮಸ್ಥರು ಬಸ್ಸ ಹತ್ತಲು ಪಕ್ಕದೂರಿನ ಬಿಲ್ಲಿನ ಕೋಟೆ, ಹನುಮಂತಪುರ, ಮಹಿಮಾಪುರ ಗ್ರಾಮಗಳಗೆ ಹೋಗಿ ಬಸ್ಸು ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಟ್ಟಾರೆ ಈ ಗ್ರಾಮದ ಜನರ ಕೂಗು ಯಾವ ಶಾಸಕರಿಗೂ, ಪ್ರತಿನಿಧಿಗಳಿಗೂ ಮತ್ತು ಅಧಿಕಾರಿಗಳಿಗೂ ಬೇಡವಾಗಿ ಗ್ರಾಮದ ಜನರನ್ನೆಲ್ಲ ಮಾನಸಿಕವಾಗಿ ಕುಗ್ಗುವಂತೆ ಮಾಡಿಬಿಟ್ಟಿದೆ, ಇನ್ನು ಮುಂದೆಯಾದರು ಈ ಗ್ರಾಮದ ಜನರ ಕೂಗು ಕಿವುಡ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೊ ಕೇಳಿ ಸಮಸ್ಯೆ ಬಗೆ ಹರಿಯುತ್ತದೆಯೋ ಕಾದೂ ನೋಡಬೇಕಿದೆ.
ನಾನು ಬಂದು ಒಂದು ತಿಂಗಳಷ್ಟೆ ಆಗಿದೆ ಈ ಸಮಸ್ಯೆಯ ಬಗ್ಗೆ ನನಗೆ ತಿಳಿದಿರಲಿಲ್ಲ, ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆ ಹರಿಸಲು ಪ್ರಯತ್ನ ಮಾಡುತ್ತೇನೆ.
ಡಿಪೋ ಮ್ಯಾನೆಜರ್, ಕೆಎಸ್ಆರ್ ಟಿ ಸಿ, ನೆಲಮಂಗಲ