ಬೆಂಗಳೂರು: ಬಾಂಗ್ಲಾದೇಶ(india vs bangladesh) ವಿರುದ್ಧದ ತವರಿನ ಟೆಸ್ಟ್ ಪಂದ್ಯದಲ್ಲಿ ಪ್ರಧಾನ ಆಕರ್ಷಣೆಯಾಗಿರುವುದು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(Virat Kohli). ಹೌದು, ಕೊಹ್ಲಿ ಈ ಸರಣಿಯಲ್ಲಿ ಕೇವಲ 58ರನ್ ಬಾರಿಸಿದರೆ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ದಾಖಲೆಯನ್ನು ಹಿಂದಿಕ್ಕಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಜತೆಗೆ 147 ವರ್ಷಗಳ(147 Years) ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.
ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧ 58 ರನ್ ಬಾರಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 27,000 ರನ್ ಪೂರೈಸಲಿದ್ದಾರೆ. ಈ ಮೂಲಕ ಅತಿ ವೇಗವಾಗಿ ಈ ಸಾಧನೆಗೈದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಈ ದಾಖಲೆ ಸಚಿನ್ ಹೆಸರಿನಲ್ಲಿದೆ. ಸದ್ಯ ವಿರಾಟ್ 591 ಇನ್ನಿಂಗ್ಸ್ಗಳಲ್ಲಿ 26,942 ರನ್ ಗಳಿಸಿದ್ದಾರೆ. ಕೊಹ್ಲಿ ಬಾಂಗ್ಲಾ ವಿರುದ್ಧ 58 ರನ್ ಗಳಿಸಿದರೆ 147 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ 600 ಕ್ಕಿಂತ ಕಡಿಮೆ ಇನ್ನಿಂಗ್ಸ್ಗಳಲ್ಲಿ 27,000 ರನ್ಗಳನ್ನು ತಲುಪಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ, ಸಚಿನ್ ಹೊರತುಪಡಿಸಿ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಶ್ರೀಲಂಕಾದ ಕುಮಾರ ಸಂಗಕ್ಕಾರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 27000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ಅಮೋಘ ಸಾಧನೆ
35 ವರ್ಷದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಏಕದಿನ ಕ್ರಿಕೆಟ್ನ ಸಾರ್ವಕಾಲಿಕ 49 ಶತಕದ ದಾಖಲೆಯನ್ನು ಮುರಿದಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ನೂತನ ಸಾಮ್ರಾಟನಾಗಿ ಹೊರಹೊಮ್ಮಿದ್ದರು. ಇದುವರೆಗೆ ಕೊಹ್ಲಿ ಒಟ್ಟು 295 ಏಕದಿನ ಪಂದ್ಯಗಳನ್ನು ಆಡಿದ್ದು 58.18 ರ ಸರಾಸರಿಯಲ್ಲಿ ಬ್ಯಾಟ್ ಬೀಸಿ 13906 ರನ್ ಗಳಿಸಿದ್ದಾರೆ. ಇದರಲ್ಲಿ 50 ಶತಕ ಮತ್ತು 72 ಅರ್ಧಶತಕ ಒಳಗೊಂಡಿದೆ. ಬೌಲಿಂಗ್ನಲ್ಲೂ 5 ವಿಕೆಟ್ ಪಡೆದಿದ್ದಾರೆ.
ಟೆಸ್ಟ್ನಲ್ಲಿ 113 ಪಂದ್ಯಗಳಲ್ಲಿ 8848 ರನ್ ಗಳಿಸಿದ್ದು, 29 ಶತಕ, 7 ದ್ವಿಶತಕ ಮತ್ತು 30 ಅರ್ಧಶತಕ ಸಿಡಿಸಿದ್ದಾರೆ. 254 ಅವರ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 125 ಟಿ20 ಪಂದ್ಯವಾಡಿ 4188 ರನ್ ಬಾರಿಸಿದ್ದಾರೆ. ಇದರಲ್ಲಿ 38 ಅರ್ಧಶತಕ ಮತ್ತು 1 ಶತಕ ದಾಖಲಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಟಿ20 ವಿಶ್ವಕಪ್ ಫೈನಲ್ ಪಂದ್ಯವನ್ನಾಡುವ ಮೂಲಕ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಈಗ ಟೆಸ್ಟ್ ಮತ್ತು ಏಕದಿನ ಮಾತ್ರ ಆಡುತ್ತಿದ್ದಾರೆ.