ನೆಲಮಂಗಲ: ಒಂಟಿಯಾಗಿ ಸಿಗುವವರ ಮೇಲೆ ದಾಳಿ ಮಾಡಿ ಕೊಂದು ತಿನ್ನುವ ಚಿರತೆ ಜನ ಸಮೂಹವನ್ನು ಕಂಡಾಗ ಅಡಗಿ ಕುಳಿತುಕೊಳ್ಳುತ್ತದೆ. ಆದರೆ ನೆಲಮಂಗಲದಲ್ಲಿ ಮಾತ್ರ ಇದಕ್ಕೆ ವಿರೋಧವೆಂಬಂತೆ ಚಿರತೆಯೊಂದು ಜನರು ಮೃತ ಮಹಿಳೆಯ ಶವವನ್ನು ಕಾಯುತ್ತಿದ್ದಾಗಲೇ ಅವರನ್ನು ಬೆದರಿಸಿ ಮೃತದೇಹವನ್ನು ಹೊತ್ತೊಯ್ಯಲು ಯತ್ನಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಕಂಬಾಳು ಗೊಲ್ಲರಹಟ್ಟಿ ಗ್ರಾಮದ ಬಳಿ 45 ವರ್ಷದ ಕರಿಯಮ್ಮ ಮೇಲೆ ಚಿರತೆ ದಾಳಿ ಮಾಡಿ ಕೊಂದಿತ್ತು. ರುಂಡವನ್ನು ಚಿರತೆ ತಿಂದಿದ್ದರಿಂದ ಮುಂಡ ಮಾತ್ರ ಪತ್ತೆ ಆಗಿತ್ತು. ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೆ ಚಿರತೆ ದಾಳಿ ಆತಂಕ ಹಿನ್ನೆಲೆಯಲ್ಲಿ ACF,DCF ಸೇರಿದಂತೆ ಲೆಪರ್ಡ್ ಟಾಸ್ಕ್ ಫೋರ್ಸ್ ತಂಡ ಚಿರತೆ ಸಿದ್ದತೆ ನಡೆಸಿದೆ. ಈಗಾಗಲೇ ಗೊಲ್ಲರಹಟ್ಟಿಗೆ ಎಸಿಎಫ್ ನಿಜಾಮುದ್ದೀನ್ ಭೇಟಿ ನೀಡಿದ್ದು, ಚಿರತೆಯನ್ನು ಸೆರೆಹಿಡಿಯದೆ ಬಿಡುವುದಿಲ್ಲ ಎಂದು ಹೇಳಿದರು.
ನಿನ್ನೆ ರಾತ್ರಿ ಬೆಂಕಿ ಹಾಕಿ ಮಹಿಳೆಯ ಶವ ಕಾಯುತ್ತಿದ್ದವರಿಗೆ ಚಿರತೆ ಪ್ರತ್ಯಕ್ಷವಾಗಿ ಶಾಕ್ ನೀಡಿತ್ತು. ಪೊಲೀಸ್ ಹಾಗೂ ಸಾರ್ವಜನಿಕರನ್ನೇ ಬೆದರಿಸಿ ಮೃತದೇಹವನ್ನು ಹೊತ್ತೊಯಲು ಚಿರತೆ ಯತ್ನಿಸಿದೆ. ಕೂಡಲೇ ಅಲ್ಲೇ ಇದ್ದ ದೊಣ್ಣೆ, ಮಚ್ಚು ಮತ್ತು ಟಾರ್ಚ್ ಬಳಸಿ ಗ್ರಾಮಸ್ಥರು ಚಿರತೆಯನ್ನು ಓಡಿಸಿದ್ದಾರೆ.
ಈ ಘಟನೆಯಿಂದ ಗ್ರಾಮಸ್ಥರು ಒಂದು ಕಡೆ ಭಯಗೊಂಡಿದ್ದರೆ, ಮತ್ತೊಂದು ಕಡೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನುಷ್ಯರ ಮೇಲೆ ಪ್ರಾಣಿಗಳು ದಾಳಿ ನಡೆಸಿದಾಗ ಮಾತ್ರ ಬರುತ್ತಾರೆ. ಇದುವರೆಗೂ ಯಾವುದೇ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.