ಬೆಂಗಳೂರು: ಬೆಂಗಳೂರಿನ ಎಲೆಕ್ಟ್ರಿಕ್ ವಾಹನ ಶೋರೂಂ ಒಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ್ದು, ಯುವತಿಯೊಬ್ಬಳು ಸಜೀವ ದಹನವಾಗಿದ್ದಾರೆ. ಇಲ್ಲಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯ ನವರಂಗ್ ಬಾರ್ ಬಳಿಯ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಇವಿಟ್ರಿಕ್ ಮೋಟಾರ್ ಪ್ರೈ. ಲಿ.ನಲ್ಲಿ ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.
ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ಹಠಾತ್ತನೇ ಕಾಣಿಸಿಕೊಂಡ ಬೆಂಕಿ, ನೋಡನೋಡುತ್ತಲೇ ಇಡೀ ಶೋರೂಂ ಆವರಿಸಿದ್ದು, ಧಗಧಗನೆ ಹೊತ್ತಿ ಉರಿದಿದೆ. ಈ ವೇಳೆ ಶೋರೂಂನೊಳಗಿದ್ದ ಸೇಲ್ಸ್ ಎಕ್ಸಿಕ್ಯುಟಿವ್ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಾ (20) ಹೊರಗೆ ಬರಲು ಸಾಧ್ಯವಾಗದೆ ಬೆಂಕಿಗಾಹುತಿಯಾಗಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಿಯಾ ಮೃತದೇಹವನ್ನು ಹೊರಗೆ ತಂದಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಭೀಕರ ಬೆಂಕಿಗೆ ಇಡೀ ಶೋರೂಂ ಭಸ್ಮವಾಗಿದ್ದು, ಎಲೆಕ್ಟ್ರಿಕ್ ಸ್ಕೂಟರ್ಗಳು ಅಗ್ನಿಗೆ ಆಹುತಿಯಾಗಿವೆ. ಈ ವೇಳೆ ಶೋರೂಂನಲ್ಲಿ 45ರಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳಿದ್ದವು ಎಂದು ತಿಳಿದು ಬಂದಿದೆ. ಬೆಂಕಿ ಆರಿದ ನಂತರ ಹಾನಿಯ ಸಂಪೂರ್ಣ ಅಂದಾಜು ಸಿಗಬೇಕಿದೆ. ರಾಜಾಜಿನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.