ಬೆಂಗಳೂರು: ಆದಾಯಕ್ಕಿಂತ ಅಧಿಕ ಸಂಪಾದನೆ ಆರೋಪ ಸಂಬಂಧ ರಾಜ್ಯದ ಎಂಟು ಕಡೆಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು, ಶೋಧ ಕಾರ್ಯ ಮುಂದುವರೆಸಿದ್ದು, ಈ ನಡುವೆ ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕ ಗಂಗಾಧರಯ್ಯ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ 1.40 ಕೋಟಿ ರೂ. ನಗದು ಪತ್ತೆಯಾಗಿದೆ.
ಸೋಮವಾರ ಮುಂಜಾನೆ ಬೆಂಗಳೂರು, ದಾವಣಗೆರೆ, ಕೋಲಾರ, ಬೀದರ್, ಶಿವಮೊಗ್ಗ ,ಚಿತ್ರದುರ್ಗ ಸೇರಿದಂತೆ 8 ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಪ್ರಮುಖವಾಗಿ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ, ಎಇಇ ಟಿ.ಹನುಮಂತರಾಯ, ಬಸವಕಲ್ಯಾಣ ತಾಲೂಕಿನ ಮುಡಬಿಯ ಉಪತಹಶೀಲ್ದಾರ್ ವಿಜಯಕುಮಾರ್, ಬೀದರ ನೀರಾವರಿ ಇಲಾಖೆ ಇಇ ಸುರೇಶ್ ಮೇದಾ, ಕೋಲಾರದ ತಾಲೂಕು ಪಂಚಾಯಿತಿ ಕಾರ್ಯಪಾಲಕ ಅಭಿಯಂತರ ವೆಂಕಟೇಶಪ್ಪ, ನಿವೃತ್ತ ಡಿಸಿಎಫ್ ನಾಗರಾಜ್, ತಹಶೀಲ್ದಾರ್ ಎನ್.ಜೆ.ನಾಗರಾಜ ನಿವಾಸ, ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ನಗದು ಪತ್ತೆ: ಅದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಗಂಗಾಧರಯ್ಯ ವಿರುದ್ಧ ಪ್ರಕರಣ ದಾಖಲಿಸಿರುವ ಲೋಕಾಯುಕ್ತ ಪೊಲೀಸರು, ಬೆಂಗಳೂರಿನ ಏಳು ಸ್ಥಳಗಳ ಮೇಲೆ ದಾಳಿ ನಡೆಸಿದರು.
ಮೂರು ಸ್ಥಳಗಳಲ್ಲಿ 1.40 ಕೋಟಿ ನಗದು, ಯಲಹಂಕ, ಜೆ.ಸಿ.ನಗರ ಮತ್ತು ಹೆಬ್ಬಾಳದಲ್ಲಿ 12 ಫ್ಲ್ಯಾಟ್, ನೆಲಮಂಗಲದಲ್ಲಿ 1.5 ಕೋಟಿ ಮೌಲ್ಯದ 5 ಎಕರೆ ಜಮೀನು, ಮಲ್ಲೇಶ್ವರದಲ್ಲಿ 3.5 ಕೋಟಿ ಮೌಲ್ಯದ ನಿವೇಶನ ಹೊಂದಿರುವುದು ಪತ್ತೆಯಾಗಿದೆ. ಮನೆಯಲ್ಲಿ 1 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಐ.ಎಂ.ನಾಗರಾಜ ಹಾಗೂ ಈ ಹಿಂದೆ ಶಿಕಾರಿಪುರ ತಹಶೀಲ್ದಾರ್ ಆಗಿದ್ದು, ಸದ್ಯ ಹೊಳಲ್ಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್.ಜೆ.ನಾಗರಾಜ ಅವರ ಶಿವಮೊಗ್ಗ ಹಾಗೂ ಶಿಕಾರಿಪುರ ಮನೆ, ಕಚೇರಿ, ತೋಟದ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ನಡೆಸಿದರು. ಐ.ಎಂ.ನಾಗರಾಜ ನಾಲ್ಕು ತಿಂಗಳ ಹಿಂದಷ್ಟೇ ಅರಣ್ಯ ಇಲಾಖೆಯಿಂದ ನಿವೃತ್ತರಾಗಿದ್ದರು. ವಾರದ ಹಿಂದೆ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ ಅವರ ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿಗೆ ಸೇರ್ಪಡೆ ಆಗಿದ್ದರು ಎನ್ನಲಾಗಿದೆ.