ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರ ಲಿಂಗಾಯತ ನಾಯಕರ ಸಭೆ ನಡೆದಿದೆ.
ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರ್ಪಡೆಯಾದ ನಂತರ ಬಿಜೆಪಿ ಪಕ್ಷಕ್ಕೆ ಆಗಬಹುದಾದ ಹೊಡೆತ ತಗ್ಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಕುಮಾರಪಾರ್ಕ್ ರಸ್ತೆಯಲ್ಲಿರುವ ಬಿ.ಎಸ್.ಯಡಿಯೂರಪ್ಪ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಬುಧವಾರ ಲಿಂಗಾಯತ ಸಮುದಾಯದ ಸಚಿವರು, ಶಾಸಕರು ಸೇರಿ ಸಭೆ ನಡೆಸಲಾಗಿದ್ದು, ‘‘ಬಿಜೆಪಿ ಎಂದಿಗೂ ಲಿಂಗಾಯತ ಸಮುದಾಯದ ಪರವಾಗಿದೆ. ಯಾವುದೇ ಕಾರಣಕ್ಕೂ ಲಿಂಗಾಯತ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಕುರಿತು ಮಹತ್ವದ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
‘‘ಬಿಜೆಪಿಯು ಲಿಂಗಾಯತ ಸಮುದಾಯದವರಿಗೇ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ನೀಡಿದೆ. ಇದುವರೆಗೆ ಹೆಚ್ಚಿನ ಮಂದಿಯನ್ನು ಸಚಿವರನ್ನಾಗಿ ಮಾಡಿದೆ. ಮುಂದೆಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ಸಮುದಾಯದ ನಾಯಕರಿಗೆ ಉನ್ನತ ಜವಾಬ್ದಾರಿ ನೀಡಲಾಗುತ್ತದೆ. ಅಲ್ಲದೆ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಲಿಂಗಾಯತ ಸಮುದಾಯದವರೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಘೋಷಣೆ ಮಾಡೋಣ. ಆಗ, ಡ್ಯಾಮೇಜ್ ನಿಯಂತ್ರಣಕ್ಕೆ ಬರುತ್ತದೆ’’ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ‘‘ಸಭೆಯಲ್ಲಿ ಲಿಂಗಾಯತ ಸಿಎಂ ಬಗ್ಗೆ ಘೋಷಣೆ ಆಗಿಲ್ಲ. ಲಕ್ಷ್ಮಣ ಸವದಿ ಅವರು ಸೋತು ಸುಣ್ಣವಾಗಿದ್ದರು. ಆದರೂ, ಅವರಿಗೆ ಉನ್ನತ ಸ್ಥಾನ ನೀಡಲಾಗಿತ್ತು. ಇನ್ನು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಅವರದ್ದು ಸ್ವಯಂಕೃತ ಅಪರಾಧ’’ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಸಿ.ಸಿ.ಪಾಟೀಲ್, ಮುರುಗೇಶ್ ನಿರಾಣಿ, ಶಂಕರ್ ಪಾಟೀಲ್ ಮುನೇನಕೊಪ್ಪ, ಸಿದ್ದೇಶ್ವರ್, ಪಿ.ಸಿ ಗದ್ದಿಗೌಡರ್, ಮಂಗಳಾ ಸುರೇಶ್ ಅಂಗಡಿ, ಅಣ್ಣಾ ಸಾಹೇಬ್ ಜೊಲ್ಲೆ, ಶಿವಕುಮಾರ್ ಉದಾಸಿ, ಕರಡಿ ಸಂಗಣ್ಣ, ಬಿ.ವೈ ರಾಘವೇಂದ್ರ, ಜಿ.ಎಸ್ ಬಸವರಾಜ್ ಸೇರಿದಂತೆ ಹಲವಾರು ಲಿಂಗಾಯತ ಮುಖಂಡರು ಭಾಗವಹಿಸಿದ್ದರು, ಎಂದು ತಿಳಿದುಬಂದಿದೆ.