ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಭರ್ಜರಿ ರೋಡ್ ನಡೆಸಿದರು. ಸಿ.ವಿ. ರಾಮನ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ ಅವರಿಗೆ ಜನರಿಂದ ಅದ್ದೂರಿ ಸ್ವಾಗತ ದೊರೆಯಿತು.
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು, ಘೋಷಣೆ ಕೂಗುತ್ತಾ ತೆರೆದ ವಾಹನದ ಜೊತೆಗೆ ಸಾಗಿದರು. ಕೈ ಬೀಸುತ್ತಾ ರೋಡ್ ಶೋ ನಲ್ಲಿ ತೆರಳಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ದಿನನಿತ್ಯ ನಿಮ್ಮನ್ನು ದರೋಡೆ ಮಾಡಲಾಗುತ್ತಿದೆ. 40% ಕಮಿಷನ್ ಸರಕಾರದಿಂದ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ, ಉದ್ಯೋಗಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೇ, ದೇಶದ ಪ್ರಧಾನಿಗಳು – ಗೃಹ ಸಚಿವರು ಕರ್ನಾಟಕಕ್ಕೆ ಏನು ಮಾಡಿದ್ದೇವೆಂದು ಏಕೆ ಹೇಳುತ್ತಿಲ್ಲ? ಎಂದು ಪ್ರಶ್ನಿಸಿದರು.
ಇದಕ್ಕೂ ಮುನ್ನಾ ಹೊಸಕೋಟೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರತ್ ಬಚ್ಚೇಗೌಡರ ಪರವಾಗಿ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸುವ ಮೂಲಕ ಪ್ರಚಾರ ನಡೆಸಿದರು.