ಬೆಂಗಳೂರು: ನಗರದಲ್ಲಿ ಮೇ 6ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸುತ್ತಿದ್ದು, ಅವರು ಸಂಚರಿಸುವ ಮಾರ್ಗದಲ್ಲಿ ಬಿಬಿಎಂಪಿ ಅರಣ್ಯ ವಿಭಾಗವು ಮರದ ರಂಬೆ ಕೊಂಬೆಗಳನ್ನು ತೆರುವುಗೊಳಿಸಿದೆ.
ನರೇಂದ್ರ ಮೋದಿ ನಗರದ 36.6 ಕಿ.ಮೀ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಹದೇವಪುರ, ಕೆ.ಆರ್.ಪುರ, ಚಾಮರಾಜಪೇಟೆ, ಸಿ.ವಿ.ರಾಮನ್‌ನಗರ, ಶಾಂತಿನಗರ, ಶಿವಾಜಿನಗರ ಸೇರಿದಂತೆ ಒಟ್ಟು 17 ವಿಧಾನಸಭಾ ಕ್ಷೇತ್ರದ ವಿವಿಧ ರಸ್ತೆಗಳ ಅಕ್ಕ-ಪಕ್ಕದ ಮರಗಳ ರಂಬೆ ಕೊಂಬೆಗಳನ್ನು ಬಿಬಿಎಂಪಿಯು ತೆರವುಗೊಳಿಸುತ್ತಿದೆ.
‘ಪ್ರಧಾನ ಮಂತ್ರಿ ಅವರು ಭಾಗವಹಿಸುವ ರ್ಯಾಲಿಯ ರಸ್ತೆಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮರದ ರಂಬೆ ಕೊಂಬೆಗಳನ್ನು ಕತ್ತರಿಸಲಾಗುತ್ತಿದೆ. ಪ್ರಧಾನಿಗಳ ಭದ್ರತಾ ಅಧಿಕಾರಿಗಳ ಸೂಚನೆಯ ಮೇರೆಗೆ ರಂಬೆ-ಕೊಂಬೆ ತೆರವು ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.
”ಮರಗಳ ಕಡಿದಿದ್ದು ಯಾವ ಸಾಧನೆಗೆ?”
”ಮೋದಿ ರೋಡ್ ಶೋ”ಕಿಗಾಗಿ ಮರಗಳ ಕಡಿದಿದ್ದು ಯಾವ ಸಾಧನೆಗೆ? ಮೋದಿ ರೋಡ್ ಶೋಕಿಯಿಂದ ಮರಗಳಿಗೆ ಕೊಡಲಿ, ನೀಟ್ ವಿದ್ಯಾರ್ಥಿಗಳ ಭವಿಷ್ಯ ಬಲಿ, ವ್ಯಾಪಾರಿಗಳ ಬದುಕು ಬಲಿ, ಸಾರ್ವಜನಿಕರ ಪ್ರಯಾಣಕ್ಕೆ ಕುತ್ತು, ಜನರನ್ನು, ಜನರ ಬದುಕನ್ನು ನಿಸರ್ಗವನ್ನು ಬಲಿ ಕೊಟ್ಟು ಮೋದಿ ಮಾಡುವ ಸಾಧನೆ ಏನು?” ಎಂದು ವಿಪಕ್ಷ ಕಾಂಗ್ರೆಸ್ ಟ್ವೀಟ್ ಮಾಡಿದೆ.