ಲಕ್ನೊ: ಉತ್ತರ ಪ್ರದೇಶ ಮಾಧ್ಯಮಿಕ ಸಂಸ್ಕೃತ ಶಿಕ್ಷಣ ಪರಿಷತ್ ಮಂಡಳಿಯ ಉತ್ತರ ಮಾಧ್ಯಮ-II (12ನೇ ತರಗತಿ) ಪರೀಕ್ಷೆಯಲ್ಲಿ ಶೇ. 82.71ರಷ್ಟು ಅಂಕ ಪಡೆಯುವ ಮೂಲಕ ಚಂದೌಲಿ ಜಿಲ್ಲೆಯ ಕೃಷಿ ಕಾರ್ಮಿಕ ಸಲಾಲುದ್ದೀನ್ ಎಂಬುವವರ 17 ವರ್ಷದ ಪುತ್ರ ಮುಹಮ್ಮದ್ ಇರ್ಫಾನ್ ಸಂಸ್ಕೃತ ಪರೀಕ್ಷೆಯಲ್ಲಿ ಮೊದಲಿಗನಾಗಿ ತೇರ್ಗಡೆ ಹೊಂದಿದ್ದಾನೆ ಎಂದು timesofindia.com ವರದಿ ಮಾಡಿದೆ.
ಸಂಸ್ಕೃತ ಶಿಕ್ಷಣ ಮಂಡಳಿಯು ಇನ್ನಿತರ ವಿಷಯಗಳೊಂದಿಗೆ ಸಂಸ್ಕೃತ ಭಾಷೆ ಹಾಗೂ ಸಾಹಿತ್ಯವನ್ನು ಕಡ್ಡಾಯ ಪಠ್ಯಕ್ರಮವಾಗಿ ಹೊಂದಿದೆ.
ಮುಂದೊಂದು ದಿನ ಸಂಸ್ಕೃತ ಶಿಕ್ಷಕನಾಗುವ ಕನಸು ಹೊಂದಿರುವ ಇರ್ಫಾನ್, 10 ಮತ್ತು 12ನೇ ತರಗತಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ 20 ವಿದ್ಯಾರ್ಥಿಗಳ ಪೈಕಿ ಏಕೈಕ ಮುಸ್ಲಿಂ ವಿದ್ಯಾರ್ಥಿಯಾಗಿದ್ದಾನೆ.
ತನ್ನ ಮಗನ ಸಾಧನೆಯಿಂದ ಹೆಮ್ಮೆಯಿಂದ ಬೀಗುತ್ತಿರುವ ಇರ್ಫಾನ್ ತಂದೆಯು, ತಾನು ಶುಲ್ಕ ಭರಿಸಲು ಸಾಧ್ಯವಿದ್ದ ಸಂಪೂರ್ಣಾನಂದ ಸಂಸ್ಕೃತ ಶಾಲೆಗೆ ತನ್ನ ಪುತ್ರನನ್ನು ದಾಖಲಿಸಿದ ದಿನವನ್ನು ಸ್ಮರಿಸುತ್ತಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಲಾಲುದ್ದೀನ್, “ನಾನು ದಿನಗೂಲಿ ನೌಕರನಾಗಿದ್ದು, ದಿನವೊಂದಕ್ಕೆ ರೂ. 300 ಕೂಲಿ ಪಡೆಯುತ್ತೇನೆ. ತಿಂಗಳಲ್ಲಿ ಕೆಲವೇ ದಿನ ಮಾತ್ರ ನನಗೆ ಕೂಲಿ ದೊರೆಯುತ್ತದೆ” ಎಂದು ತಿಳಿಸಿದ್ದಾರೆ.
“ಇರ್ಫಾನ್ ಯಾವಾಗಲೂ ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದ ಮತ್ತು ಶಾಲೆಗೆ ದಾಖಲಾದ ದಿನದಿಂದಲೇ ಸಂಸ್ಕೃತ ಕಲಿಕೆಯ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದ” ಎಂದೂ ತಿಳಿಸಿದ್ದಾರೆ.
“ಆತನೀಗ ಶಾಸ್ತ್ರಿ (ಬಿಎ ಪದವಿಗೆ ಸಮಾನಾಂತರ) ಹಾಗೂ ಆಚಾರ್ಯ (ಎಂಎ ಪದವಿಗೆ ಸಮಾನಾಂತರ) ವ್ಯಾಸಂಗ ಮಾಡಲು ಉದ್ದೇಶಿಸಿದ್ದು, ಅವು ಪೂರ್ಣಗೊಂಡ ನಂತರ ಸಂಸ್ಕೃತ ಶಿಕ್ಷಕನಾಗಿ ಉದ್ಯೋಗ ಮಾಡುವ ಹಂಬಲ ಹೊಂದಿದ್ದಾನೆ” ಎಂದು ಸಲಾಲುದ್ದೀನ್ ತಿಳಿಸಿದ್ದಾರೆ.