ರಾಜ್ಯ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜಾಗೃತಿ ಮೂಡಿಸುತ್ತಾ, ಈ ಭಾರಿ ಸರ್ಕಾರವನ್ನು ಬದಲಿಸಿ ಎಂದು ಪ್ರಚಾರ ಮಾಡುತ್ತಿದ್ದ ‘ಎದ್ದೇಳು ಕರ್ನಾಟಕ’ ಜಾಗೃತ ತಂಡದ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆಂಬ ಆರೋಪ ಬಂದಿದೆ.
ಜಯಜನಗರ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಬಿಜೆಪಿ ಕಡೆಯವರು ಬಂದು ಹಲ್ಲೆ ನಡೆಸಿದ್ದಾರೆ, ಈ ಕುರಿತು ಯಾವುದೇ ಕ್ರಮವನ್ನು ಈವರೆಗೆ ಜರುಗಿಸಿಲ್ಲ ಎಂದು ಕ್ಷೇತ್ರದ ಶಾಸಕಿ ಸೌಮ್ಯಾ ರೆಡ್ಡಿ ದೂರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಎದ್ದೇಳು ಕರ್ನಾಟಕದ ಪ್ರಜ್ಞಾವಂತ ನಾಗರಿಕರು ಶಾಂತಿಯುತವಾಗಿ ಪ್ರಚಾರ ನಡೆಸುತ್ತಿದ್ದರು. ಆದರೆ ಜಯನಗರದ ಬಿಜೆಪಿ ಅಭ್ಯರ್ಥಿ (ಸಿ.ಕೆ.ರಾಮಮೂರ್ತಿ) ಮತ್ತು ಸಂಸದ ತೇಜಸ್ವಿಸೂರ್ಯ ಅವರ ನಿರ್ದೇಶನದ ಮೇರೆಗೆ ನಾಗರಿಕರ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ಅಶ್ಲೀಲ ಪದಗಳಿಂದ ನಿಂದಿಸಲಾಗಿದೆ” ಎಂದು ವಿಡಿಯೊ ಹಂಚಿಕೊಂಡಿದ್ದಾರೆ.
“ದೂರು ನೀಡಿದರೂ ಬೆಂಗಳೂರು ನಗರ ಪೊಲೀಸರಾಗಲಿ, ಜಯನಗರ ಪೊಲೀಸರಾಗಲೀ ಈ ಪುಂಡರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಸಾಕು, ಸಾಕು. ಬಿಜೆಪಿಯ ಗೂಂಡಾ ಸಂಸ್ಕೃತಿಯನ್ನು ಕೊನೆಗಾಣಿಸಬೇಕಾಗಿದೆ. ಎದ್ದೇಳು ಕರ್ನಾಟಕ, ಎದ್ದೇಳು. ನಾವು ಮಹಿಳೆಯರು- ನಮಗೆ ರಕ್ಷಣೆ ಬೇಕಿದೆ. ಮತ್ತೆ ನಮ್ಮ ಬೆಂಗಳೂರು ಸುರಕ್ಷಿತ ನಗರವಾಗಬೇಕೆಂದು ನಾವು ಬಯಸುತ್ತೇವೆ” ಎಂದಿದ್ದಾರೆ.
ವಾರ್ಡ್ ನಂ.170ರ (ಅರಸು ಕಾಲೋನಿ) ಬಿಜೆಪಿ ಅಧ್ಯಕ್ಷ ಷಣ್ಮುಗಂ, ಆತನ ಮೈದುನ ಮಣಿಕಂಠ ಮತ್ತು ಸಹಚರರು ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ. ಕಾರ್ಮಲ್ ಕಾನ್ವೆಂಟ್ ಪೊಲಿಂಗ್ ಬೂತ್ ವ್ಯಾಪ್ತಿಯಲ್ಲಿ ಘಟನೆ ನಡೆದೆ. ಎದ್ದೇಳು ಕರ್ನಾಟಕದ 17 ಮಂದಿ ಸಾಮಾಜಿಕ ಕಾರ್ಯಕರ್ತರು ಸ್ಥಳದಲ್ಲಿ ಹಾಜರಿದ್ದರು.
‘ನಾನುಗೌರಿ.ಕಾಂ’ ಜೊತೆ ಮಾಡಿದ ಸಾಮಾಜಿಕ ಕಾರ್ಯಕರ್ತೆ ಗೌರಿಯವರು ಘಟನೆಯ ಕುರಿತು ವಿವರಿಸಿದರು. “ಎಂದಿನಂತೆ ನಾವು ಪ್ರಚಾರವನ್ನು ಮಾಡಿಕೊಂಡು ಹೋಗುತ್ತಿದ್ದೆವು. ಈ ವಾರ್ಡ್‌ನಲ್ಲಿ ಬಿಜೆಪಿ ಪ್ರಬಲವಾಗಿದೆ. ಕಳೆದ ಚುನಾವಣೆ ಸಂದರ್ಭದಲ್ಲಿ ಹೆಣ್ಣುಮಕ್ಕಳ ಮತದಾನ ಈ ಕ್ಷೇತ್ರದಲ್ಲಿ ಕುಸಿದಿತ್ತು. ಹೀಗಾಗಿ ಜಾಗೃತಿ ಮಾಡುತ್ತಿದ್ದೆವು. ಸಂವಿಧಾನವನ್ನು ಎತ್ತಿಹಿಡಿಯುವವರ ಪರವಾಗಿ, ಕೋಮುವಾದಿಗಳ ವಿರುದ್ಧ ಪ್ರಚಾರ ಮಾಡಲು ಹಕ್ಕು ನಮಗಿದೆ. ಆದರೆ ಇದನ್ನು ಬಿಜೆಪಿಯವರು ಸಹಿಸಲಿಲ್ಲ” ಎಂದು ವಿವರಿಸಿದರು.
“ಬಿಜೆಪಿಯವರು ಬಂದು ನಮಗೆ ತಡೆ ನೀಡಿದರು. ಬೆಲೆ ಏರಿಕೆ ಬಗ್ಗೆ ಮಾತನಾಡಬೇಡಿ, ಜಿಎಸ್‌ಟಿ ಕುರಿತು ಪ್ರಸ್ತಾಪಿಸಬೇಡಿ ಎಂದು ಧಮ್ಕಿ ಹಾಕಿದರು. ಜನರಿಗೆ ಈ ಸಮಸ್ಯೆಗಳು ಬಾಧಿಸುತ್ತಿವೆ ಎಂದು ನಾವು ತಿಳಿಸಿದೆವು. ನಾಗರಿಕರಾಗಿ ಮಾತನಾಡುವ ಹಕ್ಕು ನಮಗಿದೆ ಎಂದೆವು. ನಮ್ಮೆಲ್ಲರ ವಿರುದ್ಧ ಕೆಟ್ಟದ್ದಾಗಿ ಮಾತನಾಡಲು ಶುರು ಮಾಡಿದರು. ನೀವು ಕಾಂಗ್ರೆಸ್ ಏಜೆಂಟಾರಾಗಿದ್ದು, ದುಡ್ಡು ತೆಗೆದುಕೊಂಡು ಬಂದು ಪ್ರಚಾರ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಹಕ್ಕು ನಿಮಗಿಲ್ಲ ಎಂದರು. ಸಮಾಧಾನದಲ್ಲಿ ಚರ್ಚೆ ಮಾಡಲು ನಾವು ಕರೆದೆವು” ಎಂದು ತಿಳಿಸಿದರು.
“ಸಮಾಧಾನವಾಗಿಯೇ ನಾವು ಎಲ್ಲವನ್ನು ಹೇಳುತ್ತಿದ್ದೆವು. ನಮ್ಮ ಜೊತೆಯಲ್ಲಿದ್ದ ಗಂಡಸರನ್ನು ಟಾರ್ಗೆಟ್ ಮಾಡಲು ಮುಂದಾದರು. ನಾವು ಬೇರೆ ಜಾಗಕ್ಕೆ ತೆರಳಲು ಸಿದ್ಧವಾದೆವು. ಅಷ್ಟರಲ್ಲಿ ಒಂದಿಷ್ಟು ಜನರಿಗೆ ಸಂದೇಶ ಕಳುಹಿಸಿ ಕರೆಸಿಕೊಂಡಿದ್ದರು. ಮೂವತ್ತರಿಂದ ಐವತ್ತು ಮಂದಿ ಬಂದು, ನಮ್ಮನ್ನು ಸುತ್ತುವರಿದರು. ನಮ್ಮ ಕರಪತ್ರಗಳನ್ನು ಕಿತ್ತುಕೊಂಡರು. ನಾವೇನೂ ಮಾತನಾಡಲಿಲ್ಲ. ನಮಗೆ ಹೊಡೆಯಲು ಬಂದಿದ್ದಾರೆಂದು ತಿಳಿಯಿತು. ಆದರೆ ನಮ್ಮ ಇಬ್ಬರು ಕಾರ್ಯಕರ್ತರ ಮುಖಕ್ಕೆ ಹೊಡೆದೇಬಿಟ್ಟರು. ಜಾಗ ಬಿಟ್ಟು ಹೊರಹೋಗುವಂತೆ ಧಮ್ಕಿ ಹಾಕಿದರು. ನಾವು ಬೆಂಗಳೂರಿನವರೇ ಆಗಿದ್ದೇವೆ. ಹೊರಗಡೆಯಿಂದ ಬಂದಿಲ್ಲ ಎಂದು ತಿಳಿಸಿ ಅಲ್ಲಿಂದ ಹೊರಟುಬಂದೆವು” ಎಂದು ಮಾಹಿತಿ ನೀಡಿದರು.