ಭಾರತವು ಮೋದಿ ಆಳ್ವಿಕೆಯಲ್ಲಿ ಕ್ರಿ.ಪೂ.2023ನೇ ಇಸವಿಗೆ ಮರಳುತ್ತಿದೆಯೇ ಎಂಬ ಪ್ರಶ್ನೆಯನ್ನು ದಿ. ಟೆಲಿಗ್ರಾಫ಼್ ಪತ್ರಿಕೆ ತನ್ನ ಮೇ 29 ರ ಸಂಚಿಕೆಯ ಮುಖಪುಟದಲ್ಲಿ ಓದುಗರ ಮುಂದಿರಿಸಿತ್ತು. ಅಂದಾಜು ಸಾವಿರ ಕೋಟಿಗೂ ಹೆಚ್ಚಿನೆ ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೊಸ ಸಂಸತ್ ಭವನದ ಉದ್ಘಾಟನೆಗೆ ಮೋದಿ ಸರ್ಕಾರ ನಿಗದಿ ಮಾಡಿಕೊಂಡ ದಿನಾಂಕ, ರಾಷ್ಟ್ರಪತಿ, ಉಪರಾಶ್ತ್ರಪತಿ, ವಿರೋಧ ಪಕ್ಷಗಳು ಯಾರೂ ಇಲ್ಲದೆ, ಹೊಸ ಭವನದ ಉದ್ಘಾಟನೆಯನ್ನು ತನ್ನ ಪಟ್ಟಾಭಿಶೇಕದಂತೆ ಪರಿವರ್ತಿಸಿದ ಧಾರ್ಷ್ತ್ಯ, ಅದಕ್ಕೆ ಅನುಸರಿಸಿದ ವೈದಿಕ ರೀತಿ-ರಿವಾಜುಗಳು, ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್- ರಾಜದಂಡ..ಇತ್ಯಾದಿಗಳೆಲ್ಲದರ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈ ದೇಶದ ಎಲ್ಲಾ ಪ್ರಜಾತಂತ್ರವಾದಿಗಳನ್ನು ಕಾಡುತ್ತಿದೆ.
ಪ್ರಜಾತಂತ್ರದ ಸಂಸ್ಥೆಯಾಗಿರಬೇಕಾದ ಸಂಸತ್ತಿನ ಹೊಸಭವನದ ಉದ್ಘಾಟನೆಯು, 1950ರ ಜನವರಿ 26 ರಂದು ” *ನಾವು ಈ ದೇಶದ ಜನ”* ನಮಗೇ ನಾವು ಅರ್ಪಿಸಿಕೊಂಡ ಸಮತೆ-ಮಮತೆಯ ಆಧಾರಿತ ಸಂವಿಧಾನದ ಅನುಷ್ಟಾನವನ್ನು ಘೋಷಿಸುವ ಬದಲಿಗೆ, ಸಂವಿಧಾನವನ್ನು , ಸ್ವಾತಂತ್ರ್ಯದ ಆಶಯಗಳನ್ನು ಬಹಿರಂಗವಾಗಿ ಅಮಾನ್ಯಗೊಳಿಸಿ ಬ್ರಾಹ್ಮಣ್ಯದ ದಿಗ್ವಿಜಯವನ್ನು ಸಾರುವ ಮನುಸ್ಮೃತಿಯ ಪುನರ್ಸ್ಥಾಪನೆಯ ಘೋಷಣೆಯ ಕಾರ್ಯಕ್ರಮದಂತಿತ್ತು.
ಹೊಸ ಭವನದಲ್ಲಿ ಹಳೆಯ ಮನು ಸಂವಿಧಾನವೇ?
ಸಂಸತ್ತಿಗೆ ಹೊಸ ಭವನದ ಅಗತ್ಯವಿದ್ದದ್ದನ್ನು ಯಾರೂ ಅಲ್ಲಗೆಳೆಯುತ್ತಿಲ್ಲ. ದೇಶದ ಪ್ರತಿ 10-12 ಲಕ್ಷ ಜನರಿಗೆ ಒಬ್ಬ ಸಂಸತ್ ಸದಸ್ಯರಂತೆ ಈ ದೇಶದ ಸಂಸತ್ ಸದಸ್ಯರ ಸಂಖೆಯನ್ನು 544 ಎಂದು ನಿಗದಿ ಮಾಡಿ ಹಲವು ದಶಕಗಳಾದವು. ಕಳೆದ ಕೆಲವು ದಶಕಗಳಲಿ ಭಾರತದ ಜನಸಂಖ್ಯೆ ದುಪ್ಪಟ್ಟಾಗಿದೆ. ಈಗ ಹೆಚ್ಚೂ ಕಡಿಮೆ 25 ಲಕ್ಷಕ್ಕೆ ಒಬ್ಬ ಸಂಸತ್ ಸದಸ್ಯರಿದ್ದಾರೆ. ಇದು ಅತ್ಯಂತ ಅಪ್ರಜಾತಾಂತ್ರಿಕವಾಗಿದೆ. ಸದಸ್ಯರ ಸಂಖ್ಯೆ ಹೆಚ್ಚಾದ ಮಾತ್ರಕ್ಕೆ ಪ್ರಜಾತಂತ್ರ ಹೆಚಾಗುತ್ತದೆ ಎಂಬುದಕ್ಕೆ ಯಾವುದೇ ಖಾತರಿಯಿಲ್ಲವಾದರೂ, ಸಂಖ್ಯಾ ಪ್ರಾತಿನಿಧ್ಯವೂ ಆ ನಿಟ್ಟಿನಲ್ಲಿ ಒಂದು ಹೆಜ್ಜೆಯೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದನ್ನು ಪುನರ್ ಪರಿಶೀಲಿಸಬೇಕಿತ್ತು.
ಆದರೆ 2002ರಲ್ಲಿ ಜಾರಿಯಾದ ಸಂವಿಧಾನದ 87ನೇ ತಿದ್ದುಪಡಿಯಂತೆ ಮುಂದಿನ ಈ ಡಿಲಿಮಿಟೇಶನ್ ಪರಿಶೀಲನೆಯನ್ನು 2026 ರ ತನಕ ಮುಂದೂಡಲಾಗಿತ್ತು. ಹೀಗಾಗಿ ಮುಂದಿನ ಒಂದೆರೆಡು ವರ್ಷಗಳಲ್ಲಿ ನಡೆಯಲಿರುವ ಜನಗಣತಿಯನ್ನು ಆಧರಿಸಿ 2026 ರಲ್ಲಿ ಸಂಸತ್ತಿನ ಸದಸ್ಯರ ಸಂಖ್ಯೆ ಹೆಚ್ಚಲಿದೆ. ಮತ್ತು ಅದರಿಂದಾಗಿ ಲೋಕ್ಸಭಾ ಸದಸ್ಯರ ಸಂಖ್ಯೆ ಈಗಿರುವ 544 ಸದಸ್ಯರಿಂದ 888 ಕ್ಕೆ ಹಾಗೂ ರಾಜ್ಯಸಭಾ ಸದಸ್ಯರ ಸಂಖ್ಯೆ ಈಗಿರುವ 250 ರಿಂದ 300-350ಕ್ಕೆ ಹೆಚ್ಚುವ ಸಾಧ್ಯತೆ ಇದೆ. ಅದರೆ ಜನಸಂಖ್ಯೆ ಮಾತ್ರ ಆಧರಿಸಿ ಪ್ರಾತಿನಿಧ್ಯವನ್ನು ಹೆಚ್ಚಿಸುವುದರಿಂದ ಈ ಮಾನದಂಡಗಳು ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿರುವ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯವನ್ನು ಇನ್ನಷ್ಟು ಕುಗ್ಗಿಸುವ ಸಾಧ್ಯತೆ ಇದ್ದು ಭಾರತದ ಫ಼ೆಡರಲ್ ಸ್ವರೂಪಕ್ಕೆ ಧಕ್ಕೆ ತರುವ ಎಲ್ಲಾ ಅವಕಾಶಗಳೂ ಇದ್ದೇ ಇದೆ. ಅದೇನೇ ಇದ್ದರೂ ಸಂಸತ್ ಸದಸ್ಯರ ಸಂಖ್ಯೆಯಂತೂ 2026 ರ ನಂತರ ಹೆಚ್ಚಲಿದೆ.
ಈಗಿರುವ ಹಾಲಿ ಸಂಸತ್ ಭವನವನ್ನು ಕಟ್ಟಿದ್ದು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲಿ. 1927 ರಲ್ಲಿ ಅದರ ನಿರ್ಮಾಣ ಪೂರ್ಣಗೊಂಡಿತ್ತು. ಈಗ ಅದು ಹಳೆಯದಾಗಿರುವುದು ಮಾತ್ರವಲ್ಲದೆ 2026 ರ ನಂತರ ಹೆಚ್ಚಲಿರುವ ಸಂಸತ್ ಸದಸ್ಯರ ಸಂಖ್ಯೆಗೆ ಅದರೊಳಗೆ ಅವಕಾಶ ಮಾಡಿಕೊಡಲು ಸಾಧ್ಯವೇ ಇಲ್ಲ. ಹೀಗಾಗಿ ಹೊಸ ಅಗತ್ಯಗಳಿಗೆ ಅನುಸಾರವಾಗಿ ವಿಶಾಲವಾದ ಹೊಸ ಸಂಸತ್ ಭವನದ ಅಗತ್ಯವಂತೂ ಇದ್ದೆ ಇತ್ತು.
ಆದರೆ ಆ ಹೆಸರಿನಲ್ಲಿ ಮೋದಿ ಸರ್ಕಾರ ನಿರ್ಮಾಣ ಮಾಡುತ್ತಿರುವುದು ಕೇವಲ ಹೊಸ ಭವನವನ್ನಲ್ಲ. ಅದು ಪರೋಕ್ಷವಾಗಿ ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನೇ ಅಮಾನ್ಯಗೊಳಿಸಲು ಹೊರಟಿದೆ 2019 ರಲ್ಲಿ ಹೊಸ ಸಂಸತ್ ಭವನದ ನಿರ್ಮಾಣದ ಯೋಜನೆ ಜಾರಿಯಾಗತೊಡಗಿತು. ಆದರೆ ಸರ್ಕಾರ ಈ ಹೊಸ ಸಂಸತ್ ಭವನದ ಯೋಜನೆಯಲ್ಲಿ ವಿರೋಧ ಪಕ್ಷಗಳನ್ನು ಯಾವ ಹಂತದಲ್ಲೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. 2019 ರ ಚುನಾವಣೆಯಲ್ಲಿ ತಮ್ಮ ಹಿಂದೂ ರಾಷ್ಟ್ರ ಅಜೆಂಡಾಗೆ ಸಿಕ್ಕ ಜನಬೆಂಬಲವನ್ನು ಬಳಸಿಕೊಂಡು ಎಲ್ಲಾ ಕಡೆಯಲ್ಲೂ ಬಹಿರಂಗವಾಗಿ ಹಿಂದೂ ಬ್ರಾಹ್ಮಣ ಮೌಲ್ಯಗಳನ್ನು ಆಧರಿಸಿ ನೀತಿಗಳನ್ನು ಜಾರಿ ಮಾಡಲಾರಂಭಿಸಿತು.
ಅದರ ಭಾಗವಾಗಿಯೇ ಹೊಸ ಸಂಸತ್ ಭವನದ ಕಟ್ಟಡವನ್ನು ಹಿಂದೊ ಬ್ರಾಹ್ಮಣೀಯ ವಾಸ್ತುವಿನ ಪ್ರಕಾರ ತ್ರಿಕೋನಾಕೃತಿಯಲ್ಲಿ ರೂಪಿಸಿತು. ಅಷ್ಟು ಮಾತ್ರವಲ್ಲ. ಹೊಸ ಸಂಸತ್ ಭವನದ ಜೊತೆಜೊತೆಗೆ ಸುತ್ತಮುತ್ತಲಿನ ಇಡಿ ಪ್ರದೇಶವನ್ನು “ಸೆಂಟ್ರಲ್ ವಿಸ್ತಾ” ಹೆಸರಿನಲಿ ದೊಡ್ಡ ಸರ್ಕಾರಿ ಸಂಕೀರ್ಣವನ್ನಾಗಿ ಅಭಿವೃದ್ಧಿ ಮಾಡುವ 20,000 ಕೋಟಿ ಯೋಜನೆಗೆ ಮಂಜೂರಾತಿ ನೀಡಿತು.
2020 ರಲ್ಲಿ ಕೋವಿಡ್ ಸಾಂಕ್ರಾಮಿಕ ಅಪ್ಪಳಿಸಿ ದೇಶದ ಸಂಪನ್ಮೂಲಗಳನ್ನು ಜನರನ್ನು ಕಾಪಾಡುವ ಸಾರ್ವಜನಿಕ ಆರೋಗ್ಯ ವೆಚ್ಚಗಳಿಗೆ ಆದ್ಯತೆ ಮೇರೆಗೆ ಮೀಸಲಿಡುವ ಅಗತ್ಯವಿದ್ದರೂ ಹೊಸ ಸಂಸತ್ ಭವನದ ನಿರ್ಮಾಣ ಮಾತ್ರ ನಿಲ್ಲಲಿಲ್ಲ. ಪ್ರಾರಂಭದಲ್ಲಿ ಕೇವಲ 700 ಕೋಟಿ ವೆಚ್ಚವೆಂದು ಅಂದಾಜು ಮಾಡಿದ್ದರೂ, 1250 ಕೋಟಿ ವೆಚ್ಚದಲ್ಲಿ ಇಂದು ಹೊಸ ಸಂಸತ್ ಭವನ ನಿರ್ಮಾಣವಾಗಿದೆ.
ಸಾವರ್ಕರ್ ಹುಟ್ಟಿದ ದಿನದಂದೇ ಹೊಸ ಭವನ ಉದ್ಗಾಟನೆಯಾದದ್ದು ಕಾಕತಾಳೀಯವಲ್ಲ
ಹಾಗೇ ನೋಡಿದರೆ, ಸಂಸತ್ ಭವನ ಉದ್ಘಾಟನೆಯಾದ ನಂತರ ಅದರ ಒಳಹೊಕ್ಕು ಅದರ ವಿವರಗಳನ್ನು ವರದಿ ಮಾಡಿದ ಪತ್ರಕರ್ತರ ವರದಿಗಳ ಪ್ರಕಾರ ಹೊಸ ಭವನ ಇನ್ನು ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ. ಇನ್ನು ಹಲವಾರು ಕಡೆ ಕಾಮಗಾರಿ ನಡೆಯುತ್ತಿದೆ. ಅವೆಲ್ಲಾ ಸಂಪೂರ್ಣವಾಗಿ ಮುಗಿಯಲು ಇನ್ನೂ ಕನಿಷ್ಟ ಒಂದೆರೆಡು ತಿಂಗಳಾದರೂ ಬೇಕು.
ಹಾಗಿದ್ದರೂ ಇಷ್ಟು ತರಾತುತುರಿಯಲ್ಲಿ ಮೇ 28 ರಂದೇ ಹೊಸ ಭವನವನ್ನು ಉದ್ಘಾಟೆನೆ ಮಾಡಿದ್ದೇಕೆ?
ಅದಕ್ಕೆ ನಿಜವಾದ ಕಾರಣ ಮೇ 28 ರಂದು ಬಿಜೆಪಿ-ಸಂಘಪರಿವಾರ ಹಾಗೂ ಇಡೀ ಹಿಂದೂತ್ವ ಸಿದ್ಧಂತದ ಪಿತಾಮಹ ಸಾವರ್ಕರ್ ಹುಟ್ಟಿದ ದಿನ
ಸಾವರ್ಕರ್ ಮತ್ತು ಆರೆಸ್ಸೆಸ್ ಎಂದಿಗೂ ಭಾರತದ ಸಂವಿಧಾನವನ್ನು ಒಪ್ಪಿಕೊಂಡೇ ಇಲ್ಲ. 1949 ರ ನವಂಬರ್ 26 ರಂದು ಭಾರತದ ಸಂವಿಧಾನ ರಚನೆ ಪೂರ್ತಿಗೊಂದು ಭಾರತಕ್ಕೆ ಅರ್ಪಿತವಾದರೆ, 1949 ರ ನವಂಬರ್ 30 ರಂದೇ ಆರೆಸ್ಸೆಸ್ಸಿನ ಮುಖಪತ್ರಿಕೆ “ಅರ್ಗನೈಸರ್” : “ನಾವು ಈ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಇದು ಪಾಶ್ಚಿಮಾತ್ಯ ಮೌಲ್ಯಗಳಾದ ಸಮಾಜವಾದ, ಪ್ರಜಾತಂತ್ರಗಳಿಂದ ಪ್ರಭಾವಿತವಾಗಿದೆ. ಆದರೆ ಭಾರತೀಯ ಸಂಸ್ಕೃತಿಯ ಸಾರವಾದ ಮನಸ್ಮೃತಿಯೇ ನಮ್ಮ ನಿಜವಾದ ಸಂವಿಧಾನ” ಎಂದು ಬರೆದುಕೊಂಡಿದ್ದರು.
ಸಾವರ್ಕರ್ ಅವರು:
” ಭಾರತದಲ್ಲಿ ವೇದಗಳನ್ನು ಬಿಟ್ಟರೆ ಅತ್ಯಂತ ಮಾನ್ಯವಾದ ಗ್ರಂಥ ಮನಸ್ಮೃತಿ. ನವ ಭಾರತ ನಿರ್ಮಾಣಕ್ಕೆ ಭಾರತ ಮಾರ್ಗದರ್ಶಿಯಾಗಿ ತೆಗೆದುಕೊಳ್ಳಬೇಕಿರುವುದು ಮನುಸ್ಮೃತಿಯನ್ನು” ಎಂದು ಸ್ಪಷ್ಟಪಡಿಸಿದ್ದರು. ಹಾಗೂ ಹಿಂದು ಬ್ರಾಹ್ಮಣ ಭಾರತಕ್ಕೆ ಅಧಿಕಾರ ವರ್ಗಾವಣೆ ಆಗದೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬಾರದೆಂದೂ ಕೂಡ ವೀರ ಶೂರ ಸಾವರ್ಕರ್ ಮನವಿ ಮಾಡಿಕೊಂಡಿದ್ದರು.
” ಭರತ ಭೂಮಿಯಲ್ಲಿ ಪಿತೃಭೂಮಿ ಮತ್ತು ಪುಣ್ಯಭೂಮಿ ಎರಡೂ ಭಾರತವೇ ಆಗಿರುವ ಹಿಂದೂಗಳು ಮಾತ್ರ ಈ ದೇಶದ ನಾಗರಿಕರು ಆಗಲು ಅರ್ಹರು. ಉಳಿದವರು ಒಂದೋ ತಮ್ಮ ಧರ್ಮವನ್ನು ತೊರೆದು ಹಿಂದುಗಳಾಗಬೇಕು ಅಥವಾ ಈ ದೇಶದಲ್ಲಿ ಇರುವ ತನಕ ಯಾವುದೇ ಹಕ್ಕುಗಳನ್ನು ಕೇಳದೆ ಎರಡನೇ ದರ್ಜೆ ಪ್ರಜೆಗಳಾಗಿ ಬದುಕಬೇಕೆಂದು” ಸಾವರ್ಕರ್ 1923 ರಲ್ಲೇ ಫ಼ರ್ಮಾನು ಹೊರಡಿಸಿದ್ದವರು ಸಾವರ್ಕರ್. ಈಗ ಆ ಫ಼ರ್ಮಾನಿಗೆ ಶತಮಾನ ತುಂಬುತ್ತಿರುವ ವೇಳೆ.
ಹೀಗಾಗಿ ಮೋದಿ ಸರ್ಕಾರದ ಎಲ್ಲಾ ನೀತಿಗಳು ಸಾವರ್ಕರ್ ಭಾರತವನ್ನು ನನಸಾಗಿರುವ ದಿಕ್ಕಿನೆಡೆಗೇ ಇರುವುದು ಸ್ಪಷ್ಟ.
ಆದರೆ ನಮ್ಮ ಸಂವಿಧಾನ ಸಾವರ್ಕರ್ ಮತ್ತು ಸಂಘಪರಿವಾರದ ಕನಸಿನ ಭಾರತಕ್ಕೆ ತದ್ವಿರುದ್ಧವಾಗಿದೆ. ಆದ್ದರಿಂದಲೇ ಅವರು ಪದೇ ಪದೇ ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಿದ್ದಾರೆ. ಆದರೆ 2019 ರ ನಂತರ ತಮಗಿರುವ ಅಧಿಕಾರವನ್ನು ಬಳಸಿಕೊಂಡು ಹಿಂದೂ ರಾಶ್ಟ್ರವನ್ನಾಗಿ ಭಾರತವನ್ನು ಪರಿವರ್ತಿಸಲು ಸಜ್ಜಾಗಿವೆ.
ಆದನ್ನೇ ಮೋದಿ ಸರ್ಕಾರ ಹೊಸ ಭವನದ ಉದ್ಘಾಟನೆಯನ್ನು ಸಾವರ್ಕರ್ ಹುಟ್ಟಿದ ದಿನದಂದು ಮಾಡುವ ಮೂಲಕ ನವ ಭಾರತವು ಸಂವಿಧಾನ ನಿರ್ಭರ ಭಾರತವಾಗದೆ ಸಾವರ್ಕರ್ ಕನಸಿನ ಬರ್ಬರ ಭಾರತ ವಾಗಲಿದೆ ಎಂದು ಘೋಶಿಸಿದೆ.
ಹೊಸ ಭವನವನ್ನು ರಾಷ್ಟ್ರಪತಿ ಉದ್ಘಾಟಿಸದಿರಲು ಮನುಸ್ಮೃತಿಯು ಕಾರಣವೇ?
ಸಂವಿಧಾನದ ಬದಲು ಮನುಸ್ಮ್ರಿತಿಯನ್ನು ಬಹಿರಂಗವಾಗಿ ಆಚರಿಸುತ್ತಿರುವುದರಿಂದಲೇ ಸಂಸತ್ತಿನ ಉದ್ಗಾಟನೆಗೆ ಭಾರತದ ಮೊದಲ ಪ್ರಜೆಯಾದ ರಾಷ್ಟ್ರಪತಿಯನ್ನು ಆಹ್ವಾನಿಸಲಿಲ್ಲ ಎಂಬುದು ಕೂಡಾ ಸ್ಪಷ್ಟವಾಗುತ್ತಿದೆ.
ಅಮೆರಿಕದ ಸಂಸತ್ತಿನಂತಲ್ಲದೆ ಭಾರತದಲ್ಲಿ ಸಂವಿಧಾನದ ಆರ್ಟಿಕಲ್ 79 ರ ಪ್ರಕಾರ ಭಾರತದ ಸಂಸತ್ತು ರಾಷ್ಟ್ರಪತಿಯನ್ನು ಒಳಗೊಂಡಿರುತ್ತದೆ. ಹಾಗೂ ನಮ್ಮ ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ -ಮೂರು ಅಂಗಗಳ ಮುಖ್ಯಸ್ಥರು.
ಹಾಗೂ ಸಂಸತ್ತು ಅರ್ಥಾತ್ ಶಾಸಕಾಂಗವೆಂದರೆ ಸರ್ಕಾರವಲ್ಲ. ಇಲ್ಲಿ ಪ್ರಧಾನಿ ಸಂಸತ್ತಿನ ಮುಖ್ಯಸ್ಥನಲ್ಲ. ಪ್ರಧಾನಿ ಕಾರ್ಯಾಂಗ ಅರ್ಥಾತ್ ಸರ್ಕಾರದ ಮುಖ್ಯಸ್ಥ ಮಾತ್ರ. ಹಾಗೂ ಸಂಸತ್ತಿನಲ್ಲಿ ಪ್ರಧಾನಿ ಕೇವಲ ಆಡಳಿತರೂಢ ಪಕ್ಷದ ಮುಖ್ಯಸ್ಥ. ಆದರೆ ಸಂಸತ್ತು ಆಡಳಿತರೂಢ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ಸರಿ ಸಮಾನ ಹಕ್ಕು ಭಾದ್ಯತೆಗಳಿರುವ ಸಂಸ್ಥೆ.
ಆದ್ದರಿಂದ ಅಂಥಾ ಸಂಸತ್ ಭವನದ-ಶಾಸಕಾಂಗ ಭವನದ- ಉದ್ಘಾಟನೆಯನ್ನು ಕಾರ್ಯಾಂಗದ ಮುಖ್ಯಸ್ಥ ಪ್ರಧಾನಿ ಮಾಡುವುದು ಯಾವ ರೀತಿಯಲ್ಲೂ ಸರಿಯಾದುದಲ್ಲ. ಅದನ್ನು ಉದ್ಘಾಟನೆ ಮಾಡಲು ಸೂಕ್ತರಾದವರು ಈ ದೇಶದ ರಾಷ್ಟ್ರಪತಿಗಳು ಮಾತ್ರ. ಅದನ್ನೇ ವಿರೋಧ ಪಕ್ಷಗಳು ಕೂಡ ಒಕ್ಕೊರಲಿಂದ ಆಗ್ರಹಿಸುತ್ತಿದ್ದವು.
ಆದರೂ ಮೋದಿ ಸರ್ಕಾರ ರಾಷ್ಟ್ರಪತಿಯವರು ಸಂಸತ್ ಭವನದ ಉದ್ಗಾಟನೆ ಮಾಡಲು ನಿರಾಕರಿಸಿದ್ದೇಕೆ?
ಭಾರತದ ಈಗಿನ ರಾಷ್ಟ್ರಪತಿ ಮಹಿಳೆ. ಒಬ್ಬರು ಆದಿವಾಸಿ ಮಹಿಳೆ. ಮತ್ತು ಒಬ್ಬರು ವಿಧವಾ ಮಹಿಳೆ.
ಮನುಸ್ಮೃತಿಯ ಪ್ರಕಾರ ಬ್ರಾಹ್ಮಣರಲ್ಲದವರು ಮತ್ತು ವಿಧವೆಯರು ಅಮಂಗಳ ಮತ್ತು ಅಶುಭ.
ಹಾಗೂ ಉದ್ಗಾಟನೆ ಪ್ರಕ್ರಿಯೆಯು ಪ್ರಧಾನಿಯ ರಾಜಪಟ್ಟಾಭಿಶೇಕದಂತೆ ನಡೆದದ್ದು ನೋಡಿದರೆ ಮೋದಿ ಸರ್ಕಾರಕ್ಕೆ ಈ ಉದ್ಗಾಟನೆಯ ಮೂಲಕ ನವ ಭಾರತವೆಂದರೆ ಮನುವಾದಿ ಭಾರತವೆಬ ಸಂದೇಶ ಕೊಡುವ ದುರುದ್ದೇಶವೂ ಇದ್ದದ್ದು ಸ್ಪಷ್ಟ.
. ಆದ್ದರಿಂದಲೇ ರಾಷ್ಟ್ರಪತಿಯವರ ನಿರಾಕರಣೆಯೂ ಈ ಮನುವಾದಿ ಭಾರತದ ಉದ್ಘಾಟೆನಯ ಭಾಗವೇ ಆಗಿತ್ತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ರಾಜದಂಡ-ಸೆಂಗೋಲ್-ಜನರಕ್ಷಕವಲ್ಲ, ವರ್ಣಾಶ್ರಮ ರಕ್ಷಕ
ಇವೆಲ್ಲವೂ ಒಂದೆಡೆಯಾದರೆ, ಹೊಸ ಸಂಸತ್ ಭವನದ ಉದ್ಗಾಟನೆಗೆ ಮೋದಿ ಸರ್ಕಾರ ಸೆಕ್ಯುಲಾರ್ ಸಂವಿಧಾನ ದ ಮೂಲ ಮೌಲ್ಯಗಳಿಗೆ ಬಾಹಿರವಾಗಿ ಅನುಸರಿಸಿದ ಬ್ರಾಹ್ಮಣೀಯ ರೀತಿ-ರಿವಾಜುಗಳು ಮೋದಿ ಸರ್ಕಾರದ ದುಷ್ಟ ಹಾಗೂ ಜನದ್ರೋಹಿ ಯೋಜನೆಗಳನ್ನು ಅವರು ಕಟ್ಟಬಯಸುವ ಭಾರತದ ವಿಕಾರಗಳನ್ನು ಮತ್ತಷ್ಟು ಅನಾವರಣಗೊಳಿಸಿದೆ.
ಮೊದಲನೆಯದಾಗಿ, ಭಾರತದ ಶಾಸಕಾಂಗದ ಮುಖ್ಯಸ್ಥರಾದ ರಾಷ್ಟ್ರಪತಿಯ ಬದಲು ಪ್ರಧಾನಿ ಮೋದಿ ಇದನ್ನು ಉದ್ಘಾಟಿಸಿದರು.
ಎರಡನೆಯದಾಗಿ ಹೊಸ ಭವನದ ಉದ್ಘಟನೆಯನ್ನು ಪ್ರಧಾನಿ ಸಂವಿಧಾನಕ್ಕೆ ಗೌರವ ತೋರಿ ಉದ್ಘಾಟಿಸಲಿಲ್ಲ. ಬದಲಿಗೆ ದೇಶದ ಸಂವಿಧಾನದ ಸ್ಥಾನದಲ್ಲಿ ತಮಿಳುನಾಡಿನಿಂದ ಶೈವ ಮಠಗಳು ತಂದುಕೊಟ್ಟಿದ್ದ ಸೆಂಗೋಲ್-ರಾಜದಂಡಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿ, ವೈದಿಕ ಮಂತ್ರಗಳ ಉಚ್ಚಾರಣೆಯೊಂದಿಗೆ ರಾಜದಂಡವನ್ನು ಹಿಡಿದುಕೊಂಡು ಸಂಸತ್ತನ್ನು ಪ್ರವೇಶಿಸುವ ಮೂಲಕ ಸಂಸತ್ತನ್ನು ಉದ್ಘಾಟಿಸಿದರು!
ಈ ರಾಜದಂಡ ಯಾವುದರ ಸಂಕೇತ?
ಈ ಹಿಂದೆ ರಾಜರುಗಳು ಪಟ್ಟಾಭಿಶೇಕ ಮಾಡಿಸಿಕೊಳ್ಳುವಾಗ ವೈದಿಕ ಮಠಗಳು – ರಾಜಗುರುಗಳು- ಸಮಾಜದಲ್ಲಿ ಶಾಂತಿಯನ್ನು ಅರ್ಥಾತ್ ವರ್ಣ ಸಂಕರವಾಗದಂತೆ ವರ್ಣಾಶ್ರಮವನ್ನು ಕಾಪಾಡಿಕೊಂಡು ಬರುವಂತೆ, ಬ್ರಾಹ್ಮಣ ಮೇಲು-ಉಳಿದವರು ಕೀಳು, ಪುರುಷ ಮೇಲು- ಸ್ತ್ರೀ ಗುಲಾಮಳು ಎಂಬ ಸಮಾಜ ವ್ಯವಸ್ಥೆಯನ್ನು ಶಾಶ್ವತವಾಗಿ ಕಾಪಾಡಿಕೊಂಡಿಕೊಂಡು ಹೋಗಬೇಕೆಂಬ ಶರತ್ತಿನೊಂದಿಗೆ ಆಶೀರ್ವದಿಸಿ ಕೊಡುತ್ತಿದ್ದ ರಾಜದಂಡ
ಅದನ್ನು ಕೊಡುವಾಗ ಆಶೀರ್ವಚನದ ರೂಪದಲ್ಲಿ ಅವರು ಹೇಳುತ್ತಿದ್ದ ಮಂತ್ರಗಳೂ ಕೂಡ ಇದೇ ಅರ್ಥವನ್ನೇ ಸಾರಿ ಹೇಳುತ್ತವೆ. ಮೋದಿಯವರು ಈ ಶರತ್ತಿನ ರಾಜದಮ್ಡವನ್ನು ಸ್ವೀಕರಿಸಿ ಹೊಸ ಸಂಸತ್ತಿನಲ್ಲಿ ಸ್ಥಾಪಿಸಿದ್ದಾರೆ!
ಈ ಸಂದರ್ಭದಲ್ಲಿ ಸಂಘಪರಿವಾರದ ವಾಟ್ಸಾಪ್ ಕಿಡಿಗೇಡಿಗಳು: “
ಈ ಹಿಂದೆಯೂ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬ್ರಿಟಿಷ್ ವೈಸ್‌ರಾಯ್ ಲಾರ್‍ದ್ ಮೌಂಟ್ ಬ್ಯಾಟನ್ ನೆಹರೂಗೆ ಈ ರಾಜದಂಡವನ್ನು ಹಸ್ತಾಂತರ ಮಾಡುವ ಮೂಲಕವೇ ಅಧಿಕಾರ ಹಸ್ತಾತಂತರವನ್ನು ಮಾಡಿದ್ದರು, ಆದರೆ ನೆಹರೂ ಅದನ್ನು ಒಂದು ವಾಕಿಂಗ್ ಸ್ಟಿಕ್ ರೀತಿ ಬಳಸಿದರು, ಇದೀಗ ಮೋದಿ ಅದಕ್ಕೆ ಸರಿಯಾದ ಮಾನ್ಯತೆಯನ್ನು ಒದಗಿಸಿದ್ದಾರೆ”
ಎಂಬ ಇಲ್ಲದ ಇತಿಹಾಸವನ್ನು ಪ್ರಚಾರ ಮಾಡಲು ಯತ್ನಿಸಿದರು. ಆದರೆ ಅದಕ್ಕೆ ಯಾವುದೇ ಪುರಾವೆಯಿಲ್ಲವೆಂಬುದನ್ನು ಇತಿಹಾಸಕಾರರು ಮತ್ತು ’ದ ಹಿಂದೂ’ ಅಂಥ ಗಂಭೀರ ಸತ್ಯಮುಖಿ ಪತ್ರಿಕೆಗಳು ಬಯಲುಗೊಳಿಸಿದವು.
ಆದರೆ ಸ್ವಾತಂತ್ರ್ಯ ಬಂದಾಗ ತಮಿಳುನಾಡಿನ ಕೆಲವು ಶೈವಾಧೀನಂ ಮಠಗಳು ನೆಹರೂರವರನ್ನು ಭೇಟಿಯಾಗಿ ಈ ರಾಜದಂಡ- ಸೆಂಗೋಲ್- ಕೊಟ್ಟಿದ್ದು ನಿಜ. ಆದರೆ ನೆಹರೂ ಅದನು ಸ್ವೀಕರಿಸಿ ಅದನ್ನು ಈ ದೇಶದ ಇತಿಹಾಸವನ್ನು ದಾಖಲಿಸುವ ಭಾಗವಾಗಿ ಮ್ಯೂಸಿಯಂ ಗೆ ಸೇರಿಸಿದರೇ ವಿನಾ ಮೋದಿಯಂತೆ ಸಂಸತ್ತಿನ ಒಳಗೆ ತೆಗೆದುಕೊಂಡು ಹೋಗಲಿಲ್ಲ.
ಹಿಂದೂ ದಂಡವಲ್ಲ- ಬ್ರಾಹ್ಮಣ ದಂಡ
ಈ ಶೈವಾಧೀನಂ ಮಠಗಳು ಹುಟ್ಟಿನಲ್ಲಿ ಅಬ್ರಾಹ್ಮಣವಾದ ಆದರೆ ವೆಲ್ಲಾಳರ್ ಎಂಬ ಬಲಿಷ್ಟ ಜಾತಿಗಳ ಭೂಮಾಲೀಕ ಮಠಗಳೇ ಆಗಿವೆ. ಮತ್ತವು ಇತ್ತೀಚಿನ ದಶಕಗಳಲ್ಲಿ ಹೆಚ್ಚೆಚ್ಚು ಬ್ರಾಹ್ಮಣೀಕರಣಗೊಳ್ಳುತ್ತಿವೆ. ಇತಿಹಾಸದಲ್ಲಿ ಅವು ಪೆರಿಯಾರ್ ಅವರ ಹೋರಾಟಗಳಲ್ಲಿ ಪ್ರಾರಂಭದಲ್ಲಿ ಪಾಲ್ಗೊಂಡಿದ್ದೂ ಉಂಟು. ಇತ್ತೀಚಿನ ದಶಕಗಳವೆರೆಗೆ ಯಾವುದೇ ರಾಜಕೀಯ ಪಕ್ಷದ ಜೊತೆಗೆ ನಂಟನ್ನು ಇಟ್ಟುಕೊಂಡಿರಲಿಲ. ಆದರೆ ಬಿಜೆಪಿ ಮತು ಸಂಘಪರಿವಾರ ತಮಿಳುನಾಡನ್ನೇ ತಮ್ಮ ಮುಂದಿನ ಗುರಿಯನ್ನಾಗಿ ಇಟ್ಟುಕೊಂಡಿರುವುದರಿಂದ ನಿರಂತರವಾಗಿ ಇಂಥಾ ಮಠಗಳ ಜೊತೆ ಒಡನಾಟ, ಆಮಿಷ ಮತ್ತು ಪ್ರಭಾವನ್ನು ಹೆಚ್ಚಿಸಿಕೊಳ್ಳುತ್ತಿವೆ. ಕರ್ನಾಟಕದಲ್ಲಿ ಲಿಂಗಾಯತ ಮಠಗಳ ಪ್ರಭಾವದ ಮೂಲಕ ಒಂದು ಸಮುದಾಯವನ್ನು ಗೆದ್ದುಕೊಂಡಂತೆ ತಮಿಳುನಾಡಿನಲ್ಲೂ ಅದೇ ಪ್ರಯೋಗವನ್ನು ಮಾಡುತ್ತಿದೆ. ಅದರ ಭಾಗವಾಗಿಯೂ ಈ ಮೋದಿ ಪಟ್ಟಾಭಿಶೇಕದ ಹೊತ್ತಿನಲ್ಲಿ ತಮಿಳು ಶೈವಾಧೀನಂ ಮಠಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ.
ಅವೆಲ್ಲದರ ಜೊತೆಗೆ ನವ ಭಾರತದಲ್ಲಿ ಸಂವಿಧಾನವನ್ನು ಬದಿಗೆ ಸರಿಸಿ ಮನುಸ್ಮೃತಿಯನೇ ಪ್ರತ್ಯಕ್ಷ ಮತ್ತು ಪರೋಕ್ಷ ಸಂವಿಧಾನವನ್ನಾಗಿ ಜಾರಿ ಮಾಡುವ ಘೋಷಣೆಯನ್ನೇ ಈ ಮೋದಿ ಪಟ್ಟಾಭಿಶೇಕದ ಅಶ್ಲೀಲ ಹಾಗೂ ಸಂವಿಧಾನ ವಿರೋಧಿ ನಡೆಗಳು ಸ್ಪಷ್ಟಪಡಿಸುತ್ತಿವೆ.
ಭಾರತದ ಸಂವಿಧಾನವು ಪ್ರಭುತ್ವ ಅರ್ಥಾತ್ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಯಾವುದೇ ಧರ್ಮಕ್ಕೆ ವಿಶೇಶ ಪ್ರೋತ್ಸಾಹ ಕೊಡದೆ ಅಥವಾ ಧರ್ಮಾಧಾರಿತ ತಾರತಮ್ಯ ಮಾಡದೆ ಸಕಲ ಧರ್ಮಗಳಿಂದಲೂ ಸಮಾನ ದೂರ ಇಟ್ಟುಕೊಳ್ಳಬೇಕೆಂದು ತಾಕೀತು ಮಾಡಿದರೂ, ಹೊಸ ಸಂಸತ್ ಭವನದ ಉದ್ಗಾಟನೆಯಲ್ಲಿ ರಾಜದಂಡ, ವೈದಿಕ ರೀತಿ ರಿವಾಜುಗಳನ್ನು ಮಾತ್ರ ಅನುಸರಿಸುವ ಮೂಲಕ ಮೋದಿ ಸರ್ಕಾರ ಹಿಂದೂ ಧರ್ಮವೇ ಸರ್ಕಾರದ ಧರ್ಮ ಎಂದು ಪರೋಕ್ಷವಾಗಿ ಘೋಷಿಸಿದೆ.
ಇಲ್ಲಿ ಹಿಂದೂ ಎಂದರೆ ಎಲ್ಲಾ ಹಿಂದೂಗಳು ಎಂತಲೂ ಅಲ್ಲ. ಮೋದಿಗೆ ಪಟ್ಟಾಭಿಶೇಕ ಮಾಡಿದ ಆ ಪುರೋಹಿತಶಾಹಿ ಗಣದಲ್ಲಿ ಬ್ರಾಹ್ಮಣರು, ಮೇಲ್ಜಾತಿಗಳು ಬಿಟ್ತರೆ ಅಬ್ರಾಹ್ಮಣ ಶೂದ್ರರು ಮತ್ತು ದಲಿತರೂ ಯಾರೂ ಇರಲಿಲ್ಲ. ಯಾರೊಬ್ಬ ಮಹಿಳೆಯೂ ಇರಲಿಲ್ಲ. ಹೀಗಾಗಿ ಇಲ್ಲಿ ಹಿಂದೂ ಎಂದರೆ ಕೇವಲ ಬ್ರಾಹ್ಮಣಶಾಹಿ ಎಂಬುದುದೂ ಸ್ಪಷ್ಟ.
ಸಾವರ್ಕರ್ರೋ? ಅಂಬೇಡ್ಕರ್ರೋ?
ಅಂಬೇಡ್ಕರ್ ಅವರು ತಮ್ಮ ” ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ” ಕೃತಿಯಲ್ಲಿ ಬುದ್ಧಪೂರ್ವ ಭಾರತದಲ್ಲಿದ್ದ ಬ್ರಾಹ್ಮಣಶಾಹಿಯ ವಿರುದ್ಧ ಬುದ್ಧ ಕ್ರಾಂತಿ ಮಾಡಿ ಸಮತೆ-ಮಮತೆಯ ವರ್ಣಾಶ್ರಮ ವಿರೋಧಿ ಸಮಾಜವನ್ನು ಸ್ಥಾಪಿಸಿದ್ದ. ಆದರೆ ನಂತರದ ಕಾಲಘಟ್ಟದಲ್ಲಿ ಆ ಕಾಲದ ಬುದ್ಧವೂ ಸ್ಥಾವರವಾಗುತ್ತಿದ್ದಂತೆ ಪುಶ್ಯಮಿತ್ರ ಶುಂಗನ ನೇತೃತ್ವದಲ್ಲಿ ಬ್ರಾಹ್ಮಣ ಪಡೆ ಬೌದ್ಧರನ್ನು ಬುದ್ಧವನ್ನು ಕಗ್ಗೊಲೆ ಮಾಡಿ ಪ್ರತಿಕ್ರಾಂತಿಯ ಮೂಲಕ ಬ್ರಾಹ್ಮಣಶಾಹಿ ದಿಗ್ವಿಜಯ ಸಾಧಿಸಿತೆಂದು ವಿವರಿಸುತ್ತಾರೆ.
ಆದರೆ ಸಾವರ್ಕರ್ ತಮ್ಮ “ಪ್ರಾಚೀನ ಭಾರತದ ಆರು ಉಜ್ವಲ ಯುಗಗಳು”* ಎಂಬ ಕೃತಿಯಲ್ಲಿ ಬೌದ್ಧರು ದೇಶದ್ರೋಹಿಗಳಾಗಿದ್ದರೆಂದೂ, ಪುಶ್ಯಮಿತ್ರ ಶುಂಗ ಬೌದ್ಧರನ್ನು ಕೊಲೆ ಮಾಡಿ ಬ್ರಾಹ್ಮಣ್ಯವನ್ನು ಪುನರ್ ಸ್ಥಾಪಿಸಿದ್ದು ಮಹಾನ್ ದೇಶಪ್ರೇಮಿ ಕೃತ್ಯವೆಂದು ಕೊಂಡಾಡುತ್ತಾರೆ.
ಇಂದು ಮೋದಿಯವರು ಸಾವರ್ಕರ್ ಹುಟಿದ ದಿನದಂದು ಹೊಸ ಸಂಸತ್ತಿನ ಉದ್ಘಾಟನೆಯ ಮೂಲಕ ಅಂಬೇಡ್ಕರರನ್ನು ಕೊಂದು ಸಾವರ್ಕರ್ ಗೆ ಜೀವ ಕೊಟ್ಟಿದ್ದಾರೆ
ಬ್ರಾಹ್ಮಣಶಾಹಿಯ ಪುನರ್ ಸ್ಥಾಪನೆಯನ್ನು ಘೋಷಿಸಿದ್ದಾರೆ
ಆದರೆ ಮೋದಿ ಸರ್ಕಾರ ಇಷ್ಟು ಬಹಿರಂಗವಾಗಿ ಸಂವಿಧಾನವನ್ನು ಉಲ್ಲಂಘಿಸುತ್ತಿದ್ದರೂ, ಬಹಿರಂಗವಾಗಿ ಸಂವಿಧಾನದ ಬದಲು ಬ್ರಾಹ್ಮಣಶಾಹಿಯನ್ನು ಪ್ರತಿಷ್ಟಾಪಿಸುತ್ತಿದ್ದರೂ, ಅದು ಸರಿಯಲ್ಲ ಎಂದು ಭಾವಿಸುವ ಜನಸಾಮಾನ್ಯರಿಗಿಂತ ಅದನ್ನು ಅಭಿಮಾನಿಸುವ ಜನಸಾಮನ್ಯರು ಹೆಚ್ಚಿದ್ದಾರೆ ಎಂಬುದು ಕೂಡ ಇಂದಿನ ದುರಂತ ಸತ್ಯ.
ಅದಕ್ಕೆ ಕಾರಣ ಸಮಾಜದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ ಭ್ರಾತೃತ್ವದ ಮೌಲ್ಯಗಳನ್ನು ಜಾಗ್ರುತಗೊಳಿಸುವ ಶಕ್ತಿಗಳಿಗಿಂತ ಬ್ರಾಹ್ಮಣಶಾಹಿ ಮೌಲ್ಯಗಳನ್ನು ಆರಾಧಿಸುವ ಶಕ್ತಿಗಳು ಹೆಚ್ಚು ಬಲಿಷ್ಟವಾಗಿರುವುದೇ ಆಗಿದೆ.
ಎಲ್ಲಿಯತನಕ ಜನಸಾಮನ್ಯರ ನಡುವೆ ಸಮತೆ ಮತ್ತು ಮಮತೆಯನ್ನು ಜಾಗೃತಗೊಳಿಸುವ ಶಕ್ತಿಗಳು ವಿಜಯಿಯಾಗುವಷ್ಟು ಶಕ್ತಿಯನ್ನು ಪಡೆದುಕೊಳ್ಳುವುದಿಲ್ಲವೋ, ಪ್ರತಿಯೊಬ್ಬರಲ್ಲೂ ಸುಪ್ತವಾಗಿರುವ ಮೋದಿಯನ್ನು, ಬ್ರಾಹ್ಮಣನನ್ನು ಕಿತ್ತುಹಾಕಿ ಆ ಜಾಗದಲ್ಲಿ ಬಸವಣ್ಣ, ಸಂವಿಧಾನ, ಅಂಬೇಡ್ಕರ್ ರನ್ನು ಸ್ಥಾಪಿಸುವಲ್ಲಿ, ಸಮತೆ-ಮಮತೆ-ನ್ಯಾಯದ ಮೌಲ್ಯಗಳನ್ನು ಉದೀಪಿಸುವಲ್ಲಿ ಜನಸಂಘಟನೆಗಳು ಯಶಸ್ವಿಯಾಗುವುದಿಲ್ಲವೋ..
ಎ॒ಲ್ಲಿಯವರೆಗೆ.. ಒಂದು ಚುನಾವಣೆಯಲ್ಲಿ ತಾತ್ಕಾಲಿಕವಾಗಿ ಪಡೆದ ಅರೆ ವಿಜಯದ ಅಮಲಿನಲ್ಲಿ ಇರುತ್ತೇವೆಯೊ.. ..
ಅಲ್ಲಿಯವರೆಗೆ ಬ್ರಾಹ್ಮಣಶಾಹಿಯ ದಿಗ್ವಿಜಯವನ್ನು ತಡೆಯಲಾಗುವುದಿಲ್ಲ .. ಅಲ್ಲವೇ?