ಹೊಸದಿಲ್ಲಿ: ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಒಂಬತ್ತು ವರ್ಷಗಳ ಆಡಳಿತಾವಧಿಯಲ್ಲಿ ಸಾಲದ ಪ್ರಮಾಣ 155 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿದೆ ಎಂದು ಕಾಂಗ್ರೆಸ್ ಆಪಾದಿಸಿದೆ. ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಮಂಡಿಸುವಂತೆ ಆಗ್ರಹಿಸಿದೆ.
ಮೋದಿ ಸರ್ಕಾರದ ಆರ್ಥಿಕ ದುರಾಡಳಿತ ಆರ್ಥಿಕತೆಯ ಇಂದಿನ ಸ್ಥಿತಿಗೆ ಕಾರಣ. 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾಲದ ಹೊರೆ 100 ಲಕ್ಷ ಕೋಟಿ ರೂಪಾಯಿ ಹೆಚ್ಚಿದೆ ಎಂದು ಪಕ್ಷದ ವಕ್ತಾರೆ ಸುಪ್ರಿಯಾ ಶ್ರೀನಾಥ್ ಆಪಾದಿಸಿದರು.
“ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ರಾಜಕೀಯ ವಲಯದ ಮತ್ತೊಂದು ಭಾಗವನ್ನು ಅದಕ್ಷ, ಅಸಮರ್ಥ ಹಾಗೂ ಭ್ರಷ್ಟ ಎಂದು ಬಣ್ಣಿಸುತ್ತಿದ್ದರು. ಇದೀಗ ಈ ವಿಶೇಷಣೆಗಳು ಎಲ್ಲರಿಗಿಂತ ಹೆಚ್ಚಾಗಿ ಅವರಿಗೇ ಸೂಕ್ತವಾಗುತ್ತದೆ” ಎಂದು ವಾಗ್ದಾಳಿ ನಡೆಸಿದರು.