ಹೊಸದಿಲ್ಲಿ: ರೈತರ ಪ್ರತಿಭಟನೆಗಳು ಹಾಗೂ ಕೇಂದ್ರವನ್ನು ಟೀಕಿಸುವ ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಸರಕಾರ ಟ್ವಿಟರ್‌ಗೆ ಹಲವಾರು ವಿನಂತಿಗಳನ್ನು ಮಾಡಿದೆ. ಆ ನಂತರ ಒತ್ತಡ ಹೇರಲಾಯಿತು ಹಾಗೂ ಟ್ವಿಟರ್ ಉದ್ಯೋಗಿಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಯಿತು ಎಂದು ಟ್ವಿಟರ್ ನ ಮಾಜಿ ಸಿಇಒ ಜಾಕ್ ಡೋರ್ಸಿ ಆರೋಪಿಸಿದ್ದಾರೆ.
ಜೂನ್ 12 ರಂದು ಡೋರ್ಸಿ ಅವರು ಯೂಟ್ಯೂಬ್ ಚಾನೆಲ್ ಬ್ರೇಕಿಂಗ್ ಪಾಯಿಂಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಆರೋಪಗಳನ್ನು ಮಾಡಿದರು.
ಟ್ವಿಟರ್‌ನ ಸಿಇಒ ಆಗಿದ್ದ ಸಮಯದಲ್ಲಿ ವಿದೇಶಿ ಸರಕಾರಗಳಿಂದ ಎದುರಿಸಿದ ಒತ್ತಡಗಳ ಬಗ್ಗೆ ಡೋರ್ಸಿ ಅವರನ್ನು ಸಂದರ್ಶನದಲ್ಲಿ ಪ್ರಶ್ನಿಸಲಾಯಿತು.
ರೈತರ ಪ್ರತಿಭಟನೆಯ ಕುರಿತು, ಸರಕಾರವನ್ನು ಟೀಕಿಸುವ ನಿರ್ದಿಷ್ಟ ಪತ್ರಕರ್ತರಿಗೆ ಸಂಬಂಧಿಸಿ ಭಾರತದಿಂದ ನಮಗೆ ಅನೇಕ ಬೇಡಿಕೆಗಳನ್ನು ಬಂದಿದೆ. ನಮಗೆ ಬಹಳ ದೊಡ್ಡ ಮಾರುಕಟ್ಟೆಯಾಗಿರುವ ಭಾರತದಲ್ಲಿ ಟ್ವಿಟರ್ ಅನ್ನು ನಾವು ಮುಚ್ಚುತ್ತೇವೆಯೋ ಎಂಬ ಭಾವನೆ ನಮಗೆ ಬಂದಿತ್ತು. ನಾವು ನಿಮ್ಮ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಬೆದರಿಸಿದರು. ದಾಳಿ ಕೂಡಾ ಮಾಡಿದ್ದಾರೆ. ನೀವು ನಮ್ಮ ಸೂಚನೆಗಳನ್ನು ಪಾಲಿಸದಿದ್ದರೆ ನಾವು ನಿಮ್ಮ ಕಚೇರಿಗಳನ್ನು ಮುಚ್ಚುತ್ತೇವೆ ಎಂದು ಬೆದರಿಸಲಾಗಿತ್ತು.ಇದು ಭಾರತ, ಪ್ರಜಾಪ್ರಭುತ್ವ ದೇಶ ಎಂದು ಡೋರ್ಸಿ ಹೇಳಿದರು.
ಟರ್ಕಿ ಸೇರಿದಂತೆ ಇತರ ದೇಶಗಳಲ್ಲಿ ಆಗಿರುವ ತನ್ನ ಅನುಭವವನ್ನು ಹಂಚಿಕೊಂಡ ಅವರು ಭಾರತವನ್ನು ಟರ್ಕಿಗೆ ಹೋಲಿಸಿದರು. ಟರ್ಕಿ ಕೂಡ ಭಾರತದಂತೆಯೇ ಇತ್ತು ಎಂದರು.