ಚೆನ್ನೈ: ನಾಯಕರಾದ ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಬಗ್ಗೆ ಓದಿ. ಸಾಧ್ಯವಾದಷ್ಟು ಎಲ್ಲದರ ಬಗ್ಗೆ ಓದಿ, ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸಿ, ಮಿಕ್ಕಿದ್ದನ್ನು ಬಿಟ್ಟುಬಿಡಿ,” ಎಂದು ವಿದ್ಯಾರ್ಥಿಗಳಿಗೆ ತಮಿಳು ನಟ ವಿಜಯ್ ಸಲಹೆ ನೀಡಿದ್ದಾರೆ.
ಹತ್ತನೇ ಮತ್ತು ಹನ್ನೆರಡನೇ ಬೋರ್ಡ್ ಪರೀಕ್ಷೆಗಳಲ್ಲಿ ಮೊದಲ ಮೂರು ರ್ಯಾಂಕ್ ವಿಜೇತರನ್ನು ಸನ್ಮಾನಿಸಿ ಮಾತನಾಡಿದ ವಿಜಯ್, ವಿದ್ಯಾರ್ಥಿಗಳಿಗೆ ಸಲಹೆಯೊಂದನ್ನೂ ನೀಡಿದರು. “ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಿಮ್ಮ ಸ್ನೇಹಿತರ ಜೊತೆ ಮಾತನಾಡಿ, ಅವರನ್ನು ಬೆಂಬಲಿಸಿ, ಅವರಲ್ಲಿ ಧೈರ್ಯ ತುಂಬಿ. ನಿಮಗಿಷ್ಟವಾದುದನ್ನು ಮಾಡುವುದರಿಂದ ನಿಮ್ಮನ್ನು ನಿರುತ್ತೇಜಿಸುವವರು ಇರಬಹುದು, ಆದರೆ ಸದಾ ನಿಮ್ಮ ಅಂತರಾತ್ಮದ ದನಿಯನ್ನು ಆಲಿಸಿ,” ಎಂದು ಅವರು ಹೇಳಿದರು.
ತಮ್ಮ ಬಗ್ಗೆ ಮಾತನಾಡಿದ ನಟ, “ನನ್ನ ಕನಸು ಸಿನೆಮಾ ಆಗಿತ್ತು, ನನ್ನ ಪಯಣವೂ ಅದೇ ಹಾದಿಯಲ್ಲಿತ್ತು. ನಮ್ಮಿಂದ ಎಲ್ಲವನ್ನೂ ಕದಿಯಬಹುದು, ಆದರೆ ನಮ್ಮ ಶಿಕ್ಷಣವಲ್ಲ ಎಂಬ ಮಾತು ನನ್ನ ಮನಸ್ಸಿಗೆ ನಾಟಿತು, ಅದು ವಾಸ್ತವವೂ ಹೌದು. ಶಿಕ್ಷಣ ಕ್ಷೇತ್ರಕ್ಕೆ ಏನಾದರೂ ಮಾಡಬೇಕೆಂದು ಬಹಳ ಸಮಯದಿಂದ ಬಯಸಿದ್ದೆ. ಆ ಸಮಯ ಈಗ ಕೂಡಿ ಬಂದಿದೆ,” ಎಂದು ಹೇಳಿದರು.