ಶಿವಮೊಗ್ಗ: ಜೀವಮಾನದಲ್ಲಿ ಯಾವತ್ತಾದರೂ ಕರ್ನಾಟಕದಲ್ಲಿ ಸ್ವಂತ ಶಕ್ತಿ ಮೇಲೆ ಬಿಜೆಪಿಯವರು ಕೆಲಸ ಮಾಡಿದ್ದಾರಾ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಸರ್ಕಾರ ಉಳಿಯಲ್ಲ ಎಂಬ ಬಿಎಸ್ ವೈ ಹೇಳಿಕೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಂದರೆ ಬಿಜಿನೆಸ್ ಜನತಾ ಪಾರ್ಟಿ, ಬ್ರಿಟಿಷ್ ಜನತಾ ಪಾರ್ಟಿ. ಇಂತಹ ಬಿಜೆಪಿ ಸರ್ಕಾರ ಬೇಡ ಎಂದು ಜನರೇ ನಿರ್ಧರಿಸಿದ್ದಾರೆ. ಇದನ್ನೇ ಜನ ತೋರಿಸಿಕೊಟ್ಟಿದ್ದಾರೆ. ಅದನ್ನು ನೋಡಿ ಕಲೀರೀ. ಭಾಷಣ ಮಾಡೋದು ಬಿಡಿ ಎಂದು ಹೇಳಿದರು.
ನಮ್ಮ ಪಕ್ಷದ ಪ್ರಾಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಯಾವುದೇ ಇಲಾಖೆಯಲ್ಲಿ ಹಗರಣ ಆಗಿದ್ರೂ ತನಿಖೆ ನಡೆಸುತ್ತೇವೆ. ಸರ್ಕಾರದ ಹಣ ಜನರಿಗೆ ಸೇರಬೇಕು. ಅಲ್ಲಿ ತಪ್ಪಾಗಿದ್ದರೆ ಯಾರೇ ಆದರೂ ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಕರ ನೇಮಕಾತಿ ಹಗರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ನನಗೆ ಮಾಡಲು ಬೇರೆಯದ್ದೇ ಕೆಲಸಗಳಿವೆ ಎಂದರು.
ಮತಾಂತರ ನಿಷೇಧ ಕಾಯ್ದೆ ವಾಪಸ್ ವಿಚಾರವಾಗಿ ಮಾತನಾಡಿದ ಮಧು ಬಂಗಾರಪ್ಪ, ನಾವು ಪ್ರಣಾಳಿಕೆಯಲ್ಲೇ ಸ್ಪಷ್ಟವಾಗಿ ಹೇಳಿದ್ದೇವೆ. ಅದನ್ನು ಓದಲಿ. ಮತಾಂತರ ಮಾಡ್ತಾರೆ ಎಂದು ಇವರು ಭಾಷಣ ಮಾಡಿದ್ದಾರಲ್ಲಾ? ಅದೇ ಜನರೇ ನಮಗೆ ಓಟ್ ಹಾಕಿ ಗೆಲ್ಲಿಸಿದ್ದು. ಪ್ರಣಾಳಿಕೆ ಓದಲಿ. ನಂತರ ನಾನು ಉತ್ತರ ಕೊಡ್ತೇನೆ ಎಂದು ಹೇಳಿದರು.